ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತ್ರಸ್ತೆ ಪ್ರತಿಕೂಲ ಸಾಕ್ಷಿ ನುಡಿದರೂ ಆರೋಪಿಗೆ ಶಿಕ್ಷೆ: ಸುಪ್ರೀಂ ಕೋರ್ಟ್

Published 9 ಮೇ 2024, 16:25 IST
Last Updated 9 ಮೇ 2024, 16:25 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಮಿನಲ್ ಪ್ರಕರಣದ ವಿಚಾರಣೆಯಲ್ಲಿ, ಪಾಟೀಸವಾಲಿನ ಸಂದರ್ಭದಲ್ಲಿ ಸಾಕ್ಷಿಯು ತನ್ನ ಮಾತು ಬದಲಿಸಿದರೂ, ಆ ವ್ಯಕ್ತಿಯು ಮೊದಲು ಹೇಳಿದ್ದ ಮಾತುಗಳನ್ನು ಸಂಪೂರ್ಣವಾಗಿ ಕಡೆಗಣಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರು ಇದ್ದ ವಿಭಾಗೀಯ ಪೀಠವು, ವ್ಯಕ್ತಿಯೊಬ್ಬನಿಗೆ ಸಾಮೂಹಿಕ ಅತ್ಯಾಚಾರದ ಅಪರಾಧಕ್ಕೆ ವಿಧಿಸಿದ್ದ 10 ವರ್ಷಗಳ ಜೈಲುಶಿಕ್ಷೆಯನ್ನು ಎತ್ತಿಹಿಡಿದಿದೆ. ಪಾಟೀಸವಾಲಿನ ಸಂದರ್ಭದಲ್ಲಿ ಸಂತ್ರಸ್ತೆ, ಆಕೆಯ ತಾಯಿ ಮತ್ತು ಸಂಬಂಧಿಯೊಬ್ಬರು ಪ್ರಾಸಿಕ್ಯೂಷನ್ ಪರವಾಗಿ ನಿಲ್ಲದೆ ಇದ್ದರೂ ಪೀಠವು ಹೀಗೆ ಮಾಡಿದೆ.

‘ಸಾಕ್ಷಿಗಳನ್ನು ಪಾಟೀಸವಾಲಿಗೆ ಒಳಪಡಿಸಿದ ದಿನಕ್ಕೂ ಮೊದಲ ಬಾರಿಗೆ ಅವರನ್ನು ಪ್ರಶ್ನೆಗೆ ಗುರಿಪಡಸಿದ ದಿನಕ್ಕೂ ದೀರ್ಘ ಅಂತರ ಇರುವ ಕಾರಣಕ್ಕೆ, ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ ಅನಿಸುತ್ತದೆ. ಹೀಗಾಗಿ ಸಾಕ್ಷಿಗಳು ತಮ್ಮ ಮಾತಿನಿಂದ ಹಿಂದೆ ಸರಿದಿದ್ದಾರೆ. ಮೊದಲ ಬಾರಿಗೆ ನೀಡಿದ ಮಾಹಿತಿಯಲ್ಲಿ ಅವರು ಆರೋಪಿಗಳ ವಿರುದ್ಧ ಆರೋಪ ಹೊರಿಸುವ ಕೆಲಸ ಮಾಡಿದ್ದಾರೆ’ ಎಂದು ಪೀಠ ಹೇಳಿದೆ.

ಮದ್ರಾಸ್ ಹೈಕೋರ್ಟ್ ಹಾಗೂ ವೆಲ್ಲೋರ್‌ನ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶಗಳನ್ನು ಪ್ರಶ್ನಿಸಿ ಸೆಲ್ವಮಣಿ ಎನ್ನುವ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠವು ವಜಾಗೊಳಿಸಿದೆ. ಹೈಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯವು ಸೆಲ್ವಮಣಿಗೆ ಶಿಕ್ಷೆ ವಿಧಿಸಿದ್ದವು.

ಪಾಟೀಸವಾಲಿನ ಸಂದರ್ಭದಲ್ಲಿ ಸಂತ್ರಸ್ತೆ, ಆಕೆಯ ತಾಯಿ ಮತ್ತು ಸಂಬಂಧಿಯು ಪ್ರಾಸಿಕ್ಯೂಷನ್ ಪರವಾಗಿ ಮಾತನಾಡಿಲ್ಲ ಎಂದು ಸೆಲ್ವಮಣಿ ಪರ ವಕೀಲರು ಹೇಳಿದ್ದರು.

‘ಸಂತ್ರಸ್ತೆ, ಆಕೆಯ ತಾಯಿ ಮತ್ತು ಸಂಬಂಧಿಯು ಪಾಟೀಸವಾಲಿನ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಮಾತನಾಡಿಲ್ಲ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಸಂತ್ರಸ್ತೆ ಮತ್ತು ಆಕೆಯ ತಾಯಿ ನೀಡಿದ ಪುರಾವೆಯನ್ನು ಎಫ್‌ಐಆರ್ ಜೊತೆ ಪರೀಕ್ಷಿಸಿ ನೋಡಿದಾಗ, ಸಿಆರ್‌ಪಿಸಿಯ ಸೆಕ್ಷನ್ 164 ಅಡಿಯಲ್ಲಿ ದಾಖಲಿಸಿದ ಹೇಳಿಕೆಯ ಜೊತೆ ಹೋಲಿಸಿದಾಗ, ವೈದ್ಯಕೀಯ ತಜ್ಞರ ಪುರಾವೆಯ ಜೊತೆ ಪರಿಶೀಲಿಸಿದಾಗ ಮಹಿಳೆಯು ಮೊದಲ ಬಾರಿಗೆ ಹೇಳಿಕೆ ನೀಡಿದಾಗ ಇದ್ದ ವಿವರಣೆಗೆ ಹೊಂದಿಕೆಯಾಗುತ್ತದೆ’ ಎಂದು ಪೀಠವು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT