ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಾರ್ಜುನ ಸಾಗರ ಜಲಾಶಯಕ್ಕೆ ಆಂಧ್ರ ಪೊಲೀಸ್ ಸರ್ಪಗಾವಲು

ಜಲಾಶಯದ ಬಳಿ ಭಾರಿ ಬಿಗುವಿನ ವಾತಾವರಣ | ಕೇಂದ್ರ ಸರ್ಕಾರಕ್ಕೆ ತೆಲಂಗಾಣ ಸರ್ಕಾರ ದೂರು
Published 1 ಡಿಸೆಂಬರ್ 2023, 15:51 IST
Last Updated 1 ಡಿಸೆಂಬರ್ 2023, 15:51 IST
ಅಕ್ಷರ ಗಾತ್ರ

ಹೈದರಾಬಾದ್: ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಾಗಾರ್ಜುನ ಸಾಗರ ಜಲಾಶಯದ 26 ಗೇಟ್‌ಗಳ ಪೈಕಿ 13 ಗೇಟ್‌ಗಳನ್ನು ಆಂಧ್ರಪ್ರದೇಶದ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಇದು ನೂತನ ಸರ್ಕಾರ ರಚನೆಯಾಗಲಿರುವ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮಧ್ಯೆ ಹೊಸ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆ ಇದೆ. 

ತೆಲಂಗಾಣ ವಿಧಾನಸಭೆ ಚುನಾವಣೆ ನಡೆದ ಗುರುವಾರ ಬೆಳಿಗ್ಗೆ ಈ ಪ್ರಕ್ರಿಯೆ ನಡೆದಿದ್ದು ಜಲಾಶಯದ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. 

ಈ ಸಂಬಂಧ ನಲಗೊಂಡ ಜಿಲ್ಲೆಯ ವಿಜಯಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ತೆಲಂಗಾಣ ಸರ್ಕಾರವು, ಈ ವಿಷಯವನ್ನು ಕೇಂದ್ರ ಜಲಶಕ್ತಿ ಸಚಿವಾಲಯದ ಗಮನಕ್ಕೂ ತಂದಿದೆ.

ಶಸ್ತ್ರಸಜ್ಜಿತರಾಗಿ ಬಂದಿದ್ದ ಆಂಧ್ರಪ್ರದೇಶದ 500 ಪೊಲೀಸ್ ಸಿಬ್ಬಂದಿ ನಾಗಾರ್ಜುನ ಸಾಗರ ಜಲಾಶಯದ 26 ಗೇಟ್‌ಗಳ ಪೈಕಿ 13 ಗೇಟ್‌ಗಳು ಮತ್ತು ಬಲನಾಲೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. 13ನೇ ಗೇಟ್‌ನಿಂದ ಹಿಡಿದು ಇಡೀ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಬಲನಾಲೆಯ ಮೂಲಕ ನೀರನ್ನು ಹರಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರೇ ಎ–1 ಆರೋಪಿಗಳಾಗಿದ್ದಾರೆ ಎಂದು ತೆಲಂಗಾಣ ಸರ್ಕಾರ ದೂರಿದೆ. 

ಈ ಕುರಿತು ಪ್ರತಿಕ್ರಿಯಿಸಿರುವ ಆಂಧ್ರಪ್ರದೇಶದ ನೀರಾವರಿ ಸಚಿವ ಅಂಬತಿ ರಾಮಬಾಬು, ‘ನಾಗಾರ್ಜುನ ಸಾಗರ ಜಲಾಶಯದ ಕುರಿತು ಕೆಲವು ಮಾಧ್ಯಮಗಳು ತಪ್ಪಾಗಿ  ಬಿಂಬಿಸುತ್ತಿವೆ. ಸರ್ಕಾರವು ಯಾವುದೇ ಒಪ್ಪಂದವನ್ನು ಉಲ್ಲಂಘಿಸಿಲ್ಲ. ಕೃಷ್ಣಾ ನದಿಯ ಶೇ 66ರಷ್ಟು ಪ್ರಮಾಣದ ನೀರು ಆಂಧ್ರಪ್ರದೇಶಕ್ಕೆ ಸೇರಿದ್ದು, ಉಳಿದ ಶೇ 34ರಷ್ಟು ನೀರು ತೆಲಂಗಾಣಕ್ಕೆ ಸೇರಿದ್ದಾಗಿದೆ. ನಮಗೆ ಸಂಬಂಧಿಸಿಲ್ಲದ ಒಂದೇ ಒಂದು ಹನಿ ನೀರನ್ನು ಸಹ ಬಳಸಿಕೊಂಡಿಲ್ಲ. ನಮ್ಮ ವ್ಯಾಪ್ತಿಯಲ್ಲಿರುವ ನಾಲೆಯನ್ನು ತೆರೆಯಲು ನಾವು ಪ್ರಯತ್ನಿಸಿದ್ದೇವೆ. ಈ ನೀರು ನಮಗೆ ಸೇರಿದ್ದಾಗಿದೆ’ ಎಂದು ಹೇಳಿದ್ದಾರೆ. 

ಈ ವಿಚಾರದ ಕುರಿತು ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಶೀಘ್ರವೇ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. 

ತೆಲಂಗಾಣದಲ್ಲಿ ಕೆಸಿಆರ್ ನೇತೃತ್ವದ ಬಿಆರ್‌ಎಸ್ ಪಕ್ಷಕ್ಕೆ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡಲು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಮತದಾನ ಆರಂಭಕ್ಕೂ ಮುನ್ನವೇ ಈ ರಾಜಕೀಯ ನಾಟಕ ಶುರು ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 

ಏನಿದು ಪ್ರಕರಣ?

ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರತ್ಯೇಕ ರಾಜ್ಯಗಳಾಗಿ ಹೊರಹೊಮ್ಮಿದ ಬಳಿಕ ಉಭಯ ರಾಜ್ಯಗಳ ಮಧ್ಯೆ ಕೃಷ್ಣಾ ಮತ್ತು ಗೋದಾವರಿ ನದಿ ನೀರು ಹಂಚಿಕೆ ಬಗ್ಗೆ ವಿವಾದಗಳಿವೆ. 

ಆಂಧ್ರಪ್ರದೇಶ ವಿಭಜನೆಯಾಗಿ ಏಳು ವರ್ಷಗಳಾದ ಬಳಿಕ 2021ರಲ್ಲಿ ಕೇಂದ್ರ ಸರ್ಕಾರವು ಕೃಷ್ಣಾ ನದಿ ನಿರ್ವಹಣೆ ಮಂಡಳಿ ಮತ್ತು ಗೋದಾವರಿ ನದಿ ನಿರ್ವಹಣೆ ಮಂಡಳಿಯನ್ನು ರಚಿಸಿತ್ತು. ಈ ಮಂಡಳಿಗಳು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಈ ಎರಡೂ ನದಿಗಳಿಗೆ ಸಂಬಂಧಿಸಿದ ಯೋಜನೆಗಳ ಮೇಲೆ ನಿಯಂತ್ರಣ, ಆಡಳಿತ ಮತ್ತು ನಿರ್ವಹಣೆ ಮಾಡುತ್ತಿದೆ. ಕೃಷ್ಣಾ ನದಿ ವ್ಯಾಪ್ತಿಯಲ್ಲಿ 36 ಮತ್ತು ಗೋದಾವರಿ ನದಿ ವ್ಯಾಪ್ತಿಯಲ್ಲಿ 71 ಯೋಜನೆಗಳಿವೆ. ಈ ಎರಡೂ ನದಿಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಯೋಜನೆಗಳ ಭದ್ರತೆಗೆ ಸಿಐಎಸ್ಎಫ್ ಸಿಬ್ಬಂದಿಯನ್ನು ನೇಮಿಸಬೇಕು. ಆದರೆ, ಇದಕ್ಕೆ ತೆಲಂಗಾಣದಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಅಧಿಸೂಚನೆಯನ್ನು ಈವರೆಗೆ ಜಾರಿ ಮಾಡಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT