ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉನ್ನತ ಶಿಕ್ಷಣ; ಅಮೆರಿಕವೇ ಭಾರತೀಯ ವಿದ್ಯಾರ್ಥಿಗಳ ಮೊದಲ ಆಯ್ಕೆ

ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣ; ಗುರುವಾರ ಒಂದೇ 3,900 ವೀಸಾ ಅರ್ಜಿದಾರರ ಸಂದರ್ಶನ
Published 13 ಜೂನ್ 2024, 15:35 IST
Last Updated 13 ಜೂನ್ 2024, 15:35 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಮೂರು ವರ್ಷದಲ್ಲಿ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಆಯ್ಕೆ ಮಾಡಿಕೊಳ್ಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಭಾರತೀಯರಿಗೆ ಅಮೆರಿಕವೇ ಮೊದಲ ಆಯ್ಕೆಯಾಗಿದ್ದು, ಬೇರೆ ದೇಶಗಳಿಗೆ ಹೋಲಿಸಿದರೆ ಶೇಕಡ 69ರಷ್ಟು ಮಂದಿ ಈಗಲೂ ಅಮೆರಿಕವನ್ನೇ ಆಯ್ಕೆ ಮಾಡಿರುವುದು ಕಂಡುಬಂದಿದೆ.

2018, 2019 ಹಾಗೂ 2020ರ ಮೂರು ವರ್ಷದ ಅವಧಿಗೆ ಹೋಲಿಸಿದರೆ, 2023ರಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕದಲ್ಲಿ ವ್ಯಾಸಂಗ ಮಾಡಲು ಹೆಚ್ಚಿನ ವೀಸಾ ನೀಡಿತ್ತು. 2021 ಹಾಗೂ 2023ರ ಅವಧಿ ನಡುವೆ ಈ ಪ್ರಮಾಣವು ಶೇಕಡಾ 400ರಷ್ಟು ಏರಿಕೆ ದಾಖಲಿಸಿತ್ತು.

ಕಾನ್ಸುಲರ್‌ ಟೀಮ್‌ ಇಂಡಿಯಾವು 8ನೇ ವಾರ್ಷಿಕ ವಿದ್ಯಾರ್ಥಿ ವೀಸಾ ದಿನವಾದ ಗುರುವಾರ ಒಂದೇ ದಿನ 3,900 ವೀಸಾ ಅರ್ಜಿದಾರರನ್ನು ಸಂದರ್ಶಿಸಿತು. ಆ ಮೂಲಕ ಅಮೆರಿಕದಲ್ಲಿ ಉನ್ನತ ಶಿಕ್ಷಣ ಬಯಸುವ ಭಾರತೀಯ ವಿದ್ಯಾರ್ಥಿಗಳ ವಿಚಾರದಲ್ಲಿ ಬದ್ಧತೆ ವ್ಯಕ್ತಪಡಿಸಿದ್ದು, ಎರಡು ದೇಶಗಳ ನಡುವಿನ ಶೈಕ್ಷಣಿಕ ಸಂಬಂಧವನ್ನು ಎತ್ತಿ ತೋರಿಸಿತು.

ಭಾರತೀಯ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿ ಮಾತನಾಡಿದ ಭಾರತದ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ, ‘ಅಮೆರಿಕದ ಕ್ಯಾಂಪಸ್‌ನಲ್ಲಿ ಪ್ರತಿ ಅಂತರರಾಷ್ಟ್ರೀಯ ವಿದ್ಯಾರ್ಥಿಯು ಪ್ರಚಂಡ ಯಶಸ್ಸು ಅನ್ನು ಪ್ರತಿನಿಧಿಸುತ್ತಾನೆ. ತನ್ನ ಶೈಕ್ಷಣಿಕ ಶ್ರೇಷ್ಠತೆ ಸಾಧಿಸಲು ವರ್ಷಗಳ ಕಾಲ ಅಧ್ಯಯನ ಹಾಗೂ ಕಠಿಣ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಲು ಮುಂದಾಗಿದ್ದಾರೆ. ಈಗಾಗಲೇ ಅಮೆರಿಕದಲ್ಲಿರುವ ವಿದ್ಯಾರ್ಥಿಗಳಂತೆ ಸಂದರ್ಶನ ಎದುರಿಸಿದ 3,900 ವಿದ್ಯಾರ್ಥಿಗಳು ಅತ್ಯುನ್ನತ ಯಶಸ್ಸು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನೀವು ಪಡೆಯುವ ಜ್ಞಾನ, ಹೊಸ ಕೌಶಲ ಹಾಗೂ ಅವಕಾಶಗಳು ಹೂಡಿಕೆಗೆ ಯೋಗ್ಯವಾಗಿದ್ದು, ಪ್ರತಿ ವಿದ್ಯಾರ್ಥಿಯೂ ಭಾರತೀಯ ರಾಯಭಾರಿಯಾಗಿರುತ್ತಾನೆ. ನಾವು ಒಟ್ಟಾಗಿ ಎರಡು ರಾಷ್ಟ್ರಗಳು ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ’ ಎಂದು ತಿಳಿಸಿದರು.

ಅಮೆರಿಕದ ರಾಯಭಾರ ವ್ಯವಹಾರಗಳ ಸಚಿವ ರಸೆನ್‌ ಬ್ರೌನ್‌ ಮಾತನಾಡಿ, ‘ಈ ವರ್ಷ ಅತೀ ದೊಡ್ಡ ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಸಿದ್ಧರಾಗಿದ್ದು, ವಿದೇಶಾಂಗ ಇಲಾಖೆ, ಶೈಕ್ಷಣಿಕ ಅಮೆರಿಕ ವಿಭಾಗದ ಸಹೋದ್ಯೋಗಿಗಳು ‘ವಿದ್ಯಾರ್ಥಿ ವೀಸಾ ದಿನ’ ಹಾಗೂ ಋತುವಿನ ಉದ್ಧಕ್ಕೂ ವೀಸಾ ಅರ್ಜಿದಾರರನ್ನು ಸ್ವಾಗತಿಸಲಿದ್ದಾರೆ’ ಎಂದು ತಿಳಿಸಿದರು.

ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಭಾರತದ ವಿದ್ಯಾರ್ಥಿ ವೀಸಾ ಅರ್ಜಿದಾರರ ನಿರಂತರ ಹೆಚ್ಚಳವನ್ನು ನಿರೀಕ್ಷಿಸುತ್ತದೆ. ಹೆಚ್ಚಿನ ಬೇಡಿಕೆಯನ್ನು ಪೂರೈಸಲು 2024 ರ ವಿದ್ಯಾರ್ಥಿ ವೀಸಾ ಋತುವಿನ ಅವಧಿಯನ್ನು ವಿಸ್ತರಿಸಿದೆ.

ಅಮೆರಿಕಕ್ಕೆ ಪ್ರಯಾಣಿಸಲು ತಯಾರಿ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿಗಳು bit.ly/EdUSAIndiaPDO24, ಶೈಕ್ಷಣಿಕ ಅಮೆರಿಕ ಆಯೋಜಿಸಿದ ಕಾರ್ಯಾಗಾರದಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿ ವೀಸಾ ಪ್ರಕ್ರಿಯೆಯ ಬಗ್ಗೆ ತಿಳಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT