ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಸ್ತ್ರ ಸಂಹಿತೆ ಭಾಗವಾಗಿ ಹಿಜಾಬ್‌ ನಿಷೇಧ: ಬಾಂಬೆ ಹೈಕೋರ್ಟ್‌ಗೆ ಕಾಲೇಜು ಮಾಹಿತಿ

ಮುಸ್ಲಿಂ ಸಮುದಾಯದ ವಿರುದ್ಧವಲ್ಲ: ಬಾಂಬೆ ಹೈಕೋರ್ಟ್‌ಗೆ ಕಾಲೇಜು ಮಾಹಿತಿ
Published 19 ಜೂನ್ 2024, 13:53 IST
Last Updated 19 ಜೂನ್ 2024, 13:53 IST
ಅಕ್ಷರ ಗಾತ್ರ

ಮುಂಬೈ: ‘ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ, ಕಾಲೇಜು ಆವರಣದಲ್ಲಿ ಹಿಜಾಬ್‌, ನಕಾಬ್ ಮತ್ತು ಬುರ್ಖಾ ನಿಷೇಧ ಮಾಡಿಲ್ಲ. ಏಕರೂಪ ವಸ್ತ್ರಸಂಹಿತೆ ಜಾರಿಗೊಳಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಇಲ್ಲಿನ ಕಾಲೇಜೊಂದು ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ಇಲ್ಲಿನ ಚೆಂಬೂರ್‌ ಟ್ರಾಂಬೆ ಎಜುಕೇಷನ್‌ ಸೊಸೈಟಿಯ ಎನ್‌.ಜಿ.ಆಚಾರ್ಯ ಮತ್ತು ಡಿ.ಕೆ.ಮರಾಠೆ ಕಾಲೇಜು, ಹೈಕೋರ್ಟ್‌ಗೆ ಈ ಮಾಹಿತಿ ನೀಡಿದೆ.

ಕಾಲೇಜಿನಲ್ಲಿ ಜಾರಿಗೆ ತಂದಿರುವ ವಸ್ತ್ರ ಸಂಹಿತೆಯನ್ನು ಪ್ರಶ್ನಿಸಿ 9 ವಿದ್ಯಾರ್ಥಿನಿಯರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ವಿದ್ಯಾರ್ಥಿನಿಯರು ವಿಜ್ಞಾನ ವಿಭಾಗದ 2 ಮತ್ತು 3ನೇ ವರ್ಷದ ಪದವಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

‘ಕಾಲೇಜು ಜಾರಿಗೊಳಿಸಿರುವ ನಿಯಮದಿಂದ ಧರ್ಮ ಪಾಲನೆಯಂತಹ ನಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ನಮ್ಮ ಖಾಸಗೀತನ ಹಕ್ಕು ಹಾಗೂ ಆಯ್ಕೆ ಹಕ್ಕಿನ ಉಲ್ಲಂಘನೆಯೂ ಆಗಿದೆ’ ಎಂದು ವಿದ್ಯಾರ್ಥಿನಿಯರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

‘ಕಾಲೇಜಿನ ಈ ನಿರ್ಧಾರವು ಸ್ವೇಚ್ಛೆಯಿಂದ ಕೂಡಿದ್ದು, ತರ್ಕರಹಿತ ಹಾಗೂ ಕಾನೂನಿಗೆ ವಿರುದ್ಧವಾಗಿದೆ. ಈ ನಡೆ ಕಾಲೇಜಿನ ಹಠಮಾರಿ ಧೋರಣೆಯನ್ನು ತೋರಿಸುತ್ತದೆ’ ಎಂದೂ ಅರ್ಜಿದಾರರು ಹೇಳಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಸ್‌.ಚಂದೂರಕರ್ ಹಾಗೂ ರಾಜೇಶ್‌ ಪಾಟೀಲ ಅವರಿದ್ದ ವಿಭಾಗೀಯ ಪೀಠವು, ‘ಹಿಜಾಬ್‌ ಧಾರಣೆಯು ಇಸ್ಲಾಮಿನ ಅಗತ್ಯ ಭಾಗವಾಗಿದೆ ಎಂದು ಯಾವ ಧಾರ್ಮಿಕ ಪ್ರಾಧಿಕಾರ ಹೇಳುತ್ತದೆ’ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದೆ.

‘ಈ ರೀತಿಯ ನಿಷೇಧ ಹೇರಲು ನಿಮಗೆ ಅಧಿಕಾರ ಇದೆಯೇ’ ಎಂದು ಕಾಲೇಜು ಆಡಳಿತ ಮಂಡಳಿಯನ್ನು ನ್ಯಾಯಪೀಠ ಪ್ರಶ್ನಿಸಿದೆ.

ಎರಡೂ ಕಡೆಯವರ ವಾದಗಳನ್ನು ಆಲಿಸಿದ ನ್ಯಾಯಪೀಠ, ಜೂನ್‌ 26ರಂದು ಆದೇಶ ಪ್ರಕಟಿಸುವುದಾಗಿ ಹೇಳಿದೆ.

ವಕೀಲ ಅಲ್ತಾಫ್‌ ಖಾನ್‌ ಅರ್ಜಿದಾರರ ಪರ ವಾದ ಮಂಡಿಸಿದರು. ಕಾಲೇಜು ಪರ ಹಿರಿಯ ವಕೀಲ ಅನಿಲ್ ಅಂತೂರಕರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT