ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಪ್ರವಾಹ ಇಳಿಕೆ: ಒಡಿಶಾದಲ್ಲಿ ಭಾರಿ ಮಳೆ, ಹಿಮಾಚಲದಲ್ಲಿ ‘ಆರೆಂಜ್‌ ಅಲರ್ಟ್’

Published 15 ಜುಲೈ 2023, 14:17 IST
Last Updated 15 ಜುಲೈ 2023, 14:17 IST
ಅಕ್ಷರ ಗಾತ್ರ

ನವದೆಹಲಿ/ಭುವನೇಶ್ವರ: ದೆಹಲಿಯಲ್ಲಿ ಯಮುನಾ ನದಿ ಪ್ರವಾಹದಲ್ಲಿ ಶನಿವಾರ ಇಳಿಕೆ ಕಂಡುಬಂದಿದ್ದು, ಜನರು ಸ್ವಲ್ಪ ನಿರಾಳರಾಗಿದ್ದಾರೆ.

ಕೆಲ ಪ್ರದೇಶಗಳಲ್ಲಿ ನೀರು ನಿಂತಿದ್ದು, ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಬಾಧಿತರನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಒಡಿಶಾದ ಹಲವು ಜಿಲ್ಲೆಗಳಲ್ಲಿ ಶನಿವಾರ ಭಾರಿ ಮಳೆಯಾಗಿದೆ. ಭುವನೇಶ್ವರ ಹಾಗೂ ಕಟಕ್‌ ನಗರಗಳಲ್ಲಿ ವಸತಿಪ್ರದೇಶಗಳು, ರಸ್ತೆಗಳಲ್ಲಿ ನೀರು ನಿಂತು ಜನರು ಪರದಾಡಿದರು. ರಾಜ್ಯದಲ್ಲಿ ಮತ್ತಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಹಿಮಾಚಲ ಪ್ರದೇಶದಲ್ಲಿ ಮಳೆ ನಿಂತಿಲ್ಲ. ರಾಜ್ಯದಲ್ಲಿ ಜುಲೈ 17ರ ವರೆಗೆ ಭಾರಿ ಮಳೆಯಾಗಲಿದೆ ಎಂದಿರುವ ಇಲಾಖೆ, ಆರೆಂಜ್‌ ಅಲರ್ಟ್‌ ಘೋಷಿಸಿದೆ. ಜುಲೈ 18ರಂದು ಯಲ್ಲೊ ಅಲರ್ಟ್‌ ಘೋಷಿಸಿದ್ದು, ದಿಢೀರ್‌ ಪ್ರವಾಹ, ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಸುಧಾರಣೆ: ‘ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದ್ದು, ಮಳೆ ಬಾಧಿತ ಪ್ರದೇಶಗಳಲ್ಲಿನ ಪರಿಸ್ಥಿತಿ ಕೂಡ ಸುಧಾರಿಸುತ್ತಿದೆ’ ಎಂದು ವಿಭಾಗೀಯ ಆಯುಕ್ತ ಅಶ್ವನಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವುದಕ್ಕಾಗಿ ಅಧಿಕಾರಿಗಳು ದಣಿವರಿಯದೇ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳನ್ನು ಗುರಿಯಾಗಿಸಿ ಟೀಕೆ ಮಾಡುತ್ತಿರುವುದು ಬೇಸರ ತಂದಿದೆ’ ಎಂದರು.

‘ಸಚಿವೆ ಆತಿಶಿ ಮಾರ್ಲೆನಾ ಅವರ ಕರೆಗಳನ್ನು ಸ್ವೀಕರಿಸುತ್ತಿದ್ದು, ಪರಿಹಾರ ಕಾರ್ಯಗಳಿಗೆ ಚುರುಕು ನೀಡಲಾಗಿದೆ. ಆದರೆ, ಅವರ ಹೇಳಿಕೆಗಳು–ದೂರುಗಳು ರಾಜಕೀಯ ಪ್ರೇರಿತ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಂಜಾಬ್‌, ಹರಿಯಾಣದಲ್ಲಿಯೂ ಪ್ರವಾಹ ಇಳಿದಿದ್ದು, ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ.

ದೆಹಲಿಯ ಸಂತ ಪರಮಾನಂದ ಆಸ್ಪತ್ರೆ ಬಳಿ ಯಮುನಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಹಸುವೊಂದನ್ನು ಜನರು ಶನಿವಾರ ರಕ್ಷಿಸಿದರು
ದೆಹಲಿಯ ಸಂತ ಪರಮಾನಂದ ಆಸ್ಪತ್ರೆ ಬಳಿ ಯಮುನಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಹಸುವೊಂದನ್ನು ಜನರು ಶನಿವಾರ ರಕ್ಷಿಸಿದರು –ಪಿಟಿಐ ಚಿತ್ರ
ದೆಹಲಿಯಲ್ಲಿ ತಾತ್ಕಾಲಿಕ ಶಿಬಿರವೊಂದರಲ್ಲಿ ರಕ್ಷಣೆ ಪಡೆದಿರುವ ಮಹಿಳೆ ತನ್ನ ಮಕ್ಕಳ ಪಠ್ಯಪುಸ್ತಕಗಳು ನೋಟ್‌ಬುಕ್‌ಗಳನ್ನು ಒಣಗಿಸುತ್ತಿದ್ದುದು ಶನಿವಾರ ಕಂಡುಬಂತು
ದೆಹಲಿಯಲ್ಲಿ ತಾತ್ಕಾಲಿಕ ಶಿಬಿರವೊಂದರಲ್ಲಿ ರಕ್ಷಣೆ ಪಡೆದಿರುವ ಮಹಿಳೆ ತನ್ನ ಮಕ್ಕಳ ಪಠ್ಯಪುಸ್ತಕಗಳು ನೋಟ್‌ಬುಕ್‌ಗಳನ್ನು ಒಣಗಿಸುತ್ತಿದ್ದುದು ಶನಿವಾರ ಕಂಡುಬಂತು –ಪಿಟಿಐ ಚಿತ್ರ
ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಶನಿವಾರ ಭಾರಿ ಮಳೆಯಾಗಿದೆ
ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಶನಿವಾರ ಭಾರಿ ಮಳೆಯಾಗಿದೆ –ಪಿಟಿಐ ಚಿತ್ರ
ರಾಜ್ಯದಲ್ಲಿ ಮಳೆ ಸಂಬಂಧಿತ ಅವಘಡಗಳಿಂದಾಗಿ ₹ 8 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ₹ 2 ಸಾವಿರ ಕೋಟಿ ಮಧ್ಯಂತರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಕೋರಲಾಗಿದೆ.
-ಸುಖ್ವಿಂದರ್ ಸಿಂಗ್ ಸುಖ್ಖು ಹಿಮಾಚಲ ಪ್ರದೇಶ ಮುಖ್ಯಮಂತ್ರಿ
ಮಳೆಯಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ನೆರವು ನೀಡುತ್ತಿದೆ. ಹಿಮಾಚಲ ಪ್ರದೇಶಕ್ಕೆ ₹ 181 ಕೋಟಿ ಬಿಡುಗಡೆ ಮಾಡಲಾಗಿದೆ.
-ಜೆ.ಪಿ.ನಡ್ಡಾ ಬಿಜೆಪಿ ಅಧ್ಯಕ್ಷ

ಬಿಜೆಪಿ ಸಂಚಿನಿಂದ ಪ್ರವಾಹ: ಸಚಿವ ಸೌರಭ್

ನವದೆಹಲಿ (ಪಿಟಿಐ): ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪಿತೂರಿಯಿಂದಾಗಿ ದೆಹಲಿಯಲ್ಲಿ ಪ್ರವಾಹ ಕಂಡುಬಂದಿದೆ. ಹರಿಯಾಣ ಸರ್ಕಾರ ಉದ್ದೇಶಪೂರ್ವಕವಾಗಿಯೇ ದೆಹಲಿಯತ್ತ ತನ್ನ ಅಣೆಕಟ್ಟೆಗಳಿಂದ ನೀರು ಬಿಡುಗಡೆ ಮಾಡುತ್ತಿದೆ’ ಎಂದು ದೆಹಲಿ ಸಚಿವ ಸೌರಭ್‌ ಭಾರದ್ವಾಜ್‌ ಶನಿವಾರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಳೆದ 3–4 ದಿನಗಳಿಂದ ದೆಹಲಿಯಲ್ಲಿ ಮಳೆಯಾಗಿಲ್ಲ. ಆದಾಗ್ಯೂ ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ 208.66 ಮೀಟರ್‌ ಗಡಿ ತಲುಪಿತ್ತು’ ಎಂದರು.

‘ಹರಿಯಾಣದ ಹಥಿನಿಕುಂಡ ಅಣೆಕಟ್ಟೆಯಿಂದ ಪಶ್ಚಿಮ ಕಾಲುವೆ ಪೂರ್ವ ಕಾಲುವೆ ಹಾಗೂ ಯಮುನಾ ನದಿಗೆ ಬಿಡುವ ವ್ಯವಸ್ಥೆ ಇದೆ. ಆದರೆ ಪಿತೂರಿ ಭಾಗವಾಗಿ ಜುಲೈ 9ರಿಂದ 13ರ ವರೆಗೆ ಯಮುನಾ ಕಾಲುವೆ ಮೂಲಕ ದೆಹಲಿಯತ್ತ ಮಾತ್ರ ನೀರು ಬಿಡುಗಡೆ ಮಾಡಲಾಗಿದೆ’ ಎಂದು ಆರೋಪಿಸಿದರು.

ಮಳೆ: ಬವಣೆ– ರಕ್ಷಣೆ

* ಯಮುನೆಯಲ್ಲಿ ಪ್ರವಾಹ ಇಳಿದ ಕಾರಣ ದೆಹಲಿಯಲ್ಲಿ ಹಲವಾರು ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು ವಾಹನಗಳ ಓಡಾಟ ಶುರುವಾಗಿದೆ

* ದೆಹಲಿಯ ಐಟಿಒ ಬಳಿಯ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸಿಲುಕಿದ್ದ 33 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ

* ಕಲುಷಿತ ನೀರಿನಿಂದಾಗಿ ಹರಡುವ ರೋಗಗಳ ಬಗ್ಗೆ ಪಂಜಾಬ್‌ ಮತ್ತು ಹರಿಯಾಣದ ಆರೋಗ್ಯ ಇಲಾಖೆಗಳು ಎಚ್ಚರಿಕೆ ನೀಡಿವೆ. ಪ್ರವಾಹಪೀಡಿತ ಸ್ಥಳಗಳಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ

* ಹಿಮಾಚಲ ಪ್ರದೇಶದಲ್ಲಿ ಸಿಲುಕಿದ್ದ 70 ಸಾವಿರ ಪ್ರವಾಸಿಗರನ್ನು ರಕ್ಷಿಸಲಾಗಿದ್ದು 15 ಸಾವಿರ ಮಂದಿಯನ್ನು ಅವರ ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖ್ಖು ಹೇಳಿದ್ದಾರೆ

* ಪ್ರವಾಹಪೀಡಿತ ಜಿಲ್ಲೆಗಳಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು

* ನೋಯ್ಡಾ ಬಳಿ ತಗ್ಗುಪ್ರದೇಶಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ತೋಟದ ಮನೆಗಳಲ್ಲಿ ಕೆಸಲಕ್ಕಿದ್ದ 500 ಕಾರ್ಮಿಕರನ್ನು ರಕ್ಷಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT