ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಕುರಿತು ಹೇಳಿಕೆಗೆ ಖಂಡನೆ: ಕೇಜ್ರಿವಾಲ್‌ ಮನೆ ಬಳಿ ಪ್ರತಿಭಟನೆ

ಸಿಎಎ ಕುರಿತು ಅರವಿಂದ ಕೇಜ್ರಿವಾಲ್‌ ಹೇಳಿಕೆ ಖಂಡಿಸಿದ ಹಿಂದೂ, ಸಿಖ್‌ ನಿರಾಶ್ರಿತರು
Published 14 ಮಾರ್ಚ್ 2024, 14:01 IST
Last Updated 14 ಮಾರ್ಚ್ 2024, 14:01 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ನಿರಾಶ್ರಿತರ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ನೀಡಿರುವ ಹೇಳಿಕೆಗಳನ್ನು ಹಿಂಪಡೆದು, ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಅವರ ಸಿವಿಲ್ ಲೈನ್ಸ್‌ ನಿವಾಸದ ಬಳಿ ಹಿಂದೂ ಮತ್ತು ಸಿಖ್‌ ನಿರಾಶ್ರಿತರು ಪ್ರತಿಭಟನೆ ನಡೆಸಿದರು.

ದೆಹಲಿಯ ವಿವಿಧೆಡೆ ನೆಲೆಸಿರುವ ಹಿಂದೂ, ಸಿಖ್‌ ನಿರಾಶ್ರಿತರು ಚಂದಗೀರಾಮ್‌ ಅಖಾಡ ಬಳಿ ಜಮಾಯಿಸಿ, ಕೇಜ್ರಿವಾಲ್‌ ಅವರ ಬಂಗಲೆಯತ್ತ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದರು. ಆಗ ಪೊಲೀಸರು ಅವರನ್ನು ತಡೆದರು.

‘ಪ್ರಧಾನಿ ನರೇಂದ್ರ ಮೋದಿ ಅವರು ನಮಗೆ ಪೌರತ್ವ ನೀಡುತ್ತಿದ್ದರೆ, ಕೇಜ್ರಿವಾಲ್‌ ಅವರು ನಮಗೆ ಉದ್ಯೋಗ, ಮನೆ ಯಾರು ಕೊಡುತ್ತಾರೆ ಎಂದು ಕೇಳುತ್ತಿದ್ದಾರೆ. ಅವರಿಗೆ ನಮ್ಮ ನೋವು ಅರ್ಥವಾಗುತ್ತಿಲ್ಲ’ ಎಂದು ಪ್ರತಿಭಟನಕಾರ ಪಂಜುರಾಮ್‌ ಹೇಳಿದರು.

ದೆಹಲಿಯ ರೋಹಿಣಿ, ಆದರ್ಶನಗರ, ಸಿಗ್ನೇಚರ್‌ ಬ್ರಿಡ್ಜ್‌ ಬಳಿ ಹಾಗೂ ಮಜ್ನು ಕಾ ತಿಲ್ಲಾದಲ್ಲಿ ನೆಲೆಸಿರುವ ಹಿಂದೂ, ಸಿಖ್‌ ನಿರಾಶ್ರಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಜ್ರಿವಾಲ್‌ ತಿರುಗೇಟು: ‘ಪಾಕಿಸ್ತಾನಿಗಳಿಗೆ ಪೂರ್ಣ ಪೊಲೀಸ್‌ ರಕ್ಷಣೆ ಮತ್ತು ಗೌರವದೊಂದಿಗೆ ನನ್ನ ಮನೆಯ ಹೊರಗೆ ಪ್ರತಿಭಟಿಸಲು ಅವಕಾಶ ನೀಡಲಾಗಿದೆ. ಆದರೆ ದೇಶದ ರೈತರಿಗೆ ದೆಹಲಿಗೆ ಬರಲು ಯಾಕೆ ಅನುಮತಿ ನೀಡುತ್ತಿಲ್ಲ? ಭಾರತೀಯ ರೈತರ ಮೇಲೆ ಅಶ್ರುವಾಯು ಶೆಲ್‌ಗಳು, ಲಾಠಿ ಮತ್ತು ಗುಂಡುಗಳು ಹಾರುತ್ತವೆ. ಆದರೆ ಪಾಕಿಸ್ತಾನಿಗಳಿಗೆ ಹೇಗೆ ಭಾರಿ ಗೌರವ?’ ಎಂದು ಕೇಜ್ರಿವಾಲ್‌ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಬಿಜೆಪಿಯು ಅಫ್ಗಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಸಿಎಎ ಅಡಿ ಪೌರತ್ವ ನೀಡುವ ಮೂಲಕ ತನ್ನ ಮತ ಬ್ಯಾಂಕ್‌ ಸೃಷ್ಟಿಸಲು ಮುಂದಾಗಿದೆ. ಹೀಗೆ ಪೌರತ್ವ ಪಡೆಯುವವರಿಗೆ ಉದ್ಯೋಗ, ಮನೆಗಳನ್ನೂ ನೀಡಲಾಗುತ್ತದೆ. ಇದು ಸ್ಥಳೀಯರ ಮೇಲೆ ಪರಿಣಾಮ ಬೀರುತ್ತದೆ’ ಎಂದು ಕೇಜ್ರಿವಾಲ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. 

ಒಂದೂ ಅರ್ಜಿ ಸಲ್ಲಿಕೆಯಾಗಿಲ್ಲ (ಗುವಾಹಟಿ ವರದಿ): ಸಿಎಎ ಅಡಿ ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಪೋರ್ಟಲ್‌ನಲ್ಲಿ ಇಲ್ಲಿಯವರೆಗೆ ರಾಜ್ಯದಿಂದ ಒಂದೂ ಅರ್ಜಿಯೂ ಸಲ್ಲಿಕೆಯಾಗಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ರಾಜ್ಯದಲ್ಲಿ ಎನ್‌ಆರ್‌ಸಿಯಲ್ಲಿ ಬಹುತೇಕರು ನೋಂದಾಯಿಸಿರುವ ಕಾರಣ, ಸಿಎಎ ಅಡಿ ಪೌರತ್ವ ಪಡೆಯುವವರ ಸಂಖ್ಯೆ ಅತಿ ಕಡಿಮೆ ಆಗಿರುತ್ತದೆ ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿನ ಹಿಂದೂ ಮತ್ತು ಸಿಖ್‌ ನಿರಾಶ್ರಿತರು ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಸಿವಿಲ್‌ ಲೈನ್ಸ್‌ ನಿವಾಸದ ಬಳಿ ಪ್ರತಿಭಟನೆ ನಡೆಸಿದರು  –ಪಿಟಿಐ ಚಿತ್ರ
ದೆಹಲಿಯಲ್ಲಿನ ಹಿಂದೂ ಮತ್ತು ಸಿಖ್‌ ನಿರಾಶ್ರಿತರು ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಸಿವಿಲ್‌ ಲೈನ್ಸ್‌ ನಿವಾಸದ ಬಳಿ ಪ್ರತಿಭಟನೆ ನಡೆಸಿದರು  –ಪಿಟಿಐ ಚಿತ್ರ

ಅಪಾರ ಸಂಖ್ಯೆಯ ಜನ ಬರುತ್ತಾರೆ: ಕೇಜ್ರಿವಾಲ್

ಸಿಎಎ ಅನುಷ್ಠಾನದ ಮೂಲಕ ಬಿಜೆಪಿಯು ಪಕ್ಕದ ಮುಸ್ಲಿಂ ದೇಶಗಳ ಅಲ್ಪಸಂಖ್ಯಾತರಿಗೆ ಭಾರತದ ಬಾಗಿಲು ತೆರೆದಿದೆ. ಇದರಿಂದ ಊಹಿಸಲು ಆಗದಷ್ಟು ಸಂಖ್ಯೆಯ ಜನರು ಭಾರತಕ್ಕೆ ಬರುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ‘ಅಮಿತ್‌ ಶಾ ಅವರು ನನ್ನನ್ನು ಭ್ರಷ್ಟ ಎನ್ನುತ್ತಾರೆ. ಆದರೆ ನಾನು ಮುಖ್ಯ ಅಲ್ಲ ದೇಶ ಮುಖ್ಯ. ಸಿಎಎ ಕುರಿತು ನಾನು ಎತ್ತಿರುವ ಪ್ರಶ್ನೆಗಳಿಗೆ ಗೃಹ ಸಚಿವರು ಉತ್ತರಿಸಿಲ್ಲ. ಬದಲಿಗೆ ನನ್ನನ್ನು ನಿಂದಿಸಿದ್ದಾರೆ’ ಎಂದು ಅವರು ಹೇಳಿದರು.

‘2014ರ ನಂತರ ಆ ದೇಶಗಳ ಜನರು ಭಾರತ ಪ್ರವೇಶಿಸುವುದನ್ನು ನಿಲ್ಲಿಸಿದ್ದಾರೆಯೇ? ಈ ಹಿಂದೆ ನುಸುಳುಕೋರರಾಗಿ ಬಂದು ಸಿಕ್ಕಿಬಿದ್ದರೆ ಶಿಕ್ಷೆಗೆ ಗುರಿಯಾಗುತ್ತೇವೆ ಎಂದು ಅವರು ಹೆದರುತ್ತಿದ್ದರು. ಆದರೆ ಸಿಎಎ ಅವರ ಆ ಭಯವನ್ನು ಹೋಗಲಾಡಿಸುತ್ತದೆ’ ಎಂದ ಅವರು ‘ನುಸುಳುಕೋರರು ಇನ್ನೂ ದೇಶವನ್ನು ಪ್ರವೇಶಿಸುತ್ತಿದ್ದಾರೆ’ ಎಂದು ದೂರಿದರು. ‘ನಿಮ್ಮ (ಬಿಜೆಪಿ) ಆಡಳಿತದಲ್ಲಿಯೇ ರೋಹಿಂಗ್ಯಾಗಳು ಭಾರತಕ್ಕೆ ಬಂದರಲ್ಲ’ ಎಂದ ಅವರು ‘ಪಾಕ್‌ ನುಸುಳುಕೋರರಿಗೆ ಉದ್ಯೋಗ ಮತ್ತು ಪಡಿತರ ಚೀಟಿಗಳನ್ನು ನೀಡುತ್ತೀರಾ’ ಎಂದು ಪ್ರಶ್ನಿಸಿದರು. ‘ಇತರ ದೇಶಗಳ ಅಲ್ಪಸಂಖ್ಯಾತರಿಗಾಗಿ ನಮ್ಮ ದೇಶದ ಜನರ ತೆರಿಗೆದಾರರ ಹಣವನ್ನು ಖರ್ಚು ಮಾಡುವುದನ್ನು ಒಪ್ಪಲಾಗದು’ ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT