ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆಗೆ ಮತ್ತೆ ಹಿನ್ನಡೆ

ಈಗಿನ ಸ್ವರೂಪದಲ್ಲಿ ಒ‌ಪ್ಪಿಗೆಗೆ ನಕಾರ | ಕೇಂದ್ರ–ರಾಜ್ಯ ಸರ್ಕಾರದ ಜಂಟಿ ಸಭೆ ತೀರ್ಮಾನ
Published 22 ಮೇ 2023, 4:13 IST
Last Updated 22 ಮೇ 2023, 4:13 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ 108 ಕಿ.ಮೀ. ದಟ್ಟ ಅರಣ್ಯಗಳ ನಡುವೆ ಸಾಗುವ ಪ್ರಸ್ತಾವವಿರುವ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗದ ಯೋಜನೆಗೆ ಮತ್ತೆ ಹಿನ್ನಡೆಯಾಗಿದೆ. ಈಗಿನ ಸ್ವರೂಪದಲ್ಲಿ ಯೋಜನೆಗೆ ಒಪ್ಪಿಗೆ ನೀಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರಾಕರಿಸಿದೆ. 

ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವ ಭೂಪೇಂದರ್‌ ಯಾದವ್‌ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಯೋಜನೆಯ ಸಾಧಕ–ಬಾಧಕಗಳ ಕುರಿತು ವಿಸ್ತೃತ ಚರ್ಚೆ ನಡೆದಿದೆ. ಯೋಜನೆಯ ಕುರಿತು ಇನ್ನಷ್ಟು ಚರ್ಚಿಸಲು ರೈಲ್ವೆ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪರಿಸರ ಸಚಿವಾಲಯ, ರಸ್ತೆ ಸಾರಿಗೆ ಸಚಿವಾಲಯ ಹಾಗೂ ರಾಜ್ಯ ಸರ್ಕಾರದ ಜಂಟಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. 

ರೈಲ್ವೆ ಸಚಿವಾಲಯ, ಹೆದ್ದಾರಿ ಪ್ರಾಧಿಕಾರವು ರಾಜ್ಯ ಮೂಲಸೌಕರ್ಯ ಇಲಾಖೆಯ ಜತೆಗೂಡಿ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯನ್ನು ರೂಪಿಸಲು ಸಭೆಯಲ್ಲಿ ಸೂಚಿಸಲಾಗಿದೆ. ಪರಿಸರಕ್ಕೆ ಹೆಚ್ಚಿನ ಹಾನಿಯಾಗದಂತೆ ರೈಲು ಮಾರ್ಗ ನಿರ್ಮಾಣಕ್ಕೆ ಪರ್ಯಾಯ ಪ್ರಸ್ತಾವಗಳನ್ನು ಸಿದ್ಧಪಡಿಸಲು ಸಹ ತಿಳಿಸಲಾಗಿದೆ. ವನ್ಯಜೀವಿಗಳಿಗೆ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. 

ಈ ಯೋಜನೆಗೆ ವನ್ಯಜೀವಿ ಅನುಮೋದನೆ ನೀಡುವಂತೆ ಕರ್ನಾಟಕ ಸರ್ಕಾರವು ಸಚಿವಾಲಯಕ್ಕೆ 2017ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಹುಬ್ಬಳ್ಳಿ–ಅಂಕೋನಾ ನಡುವೆ ಬ್ರಾಡ್‌ಗೇಜ್‌ ಮಾರ್ಗ ನಿರ್ಮಾಣಕ್ಕೆ 595.64 ಹೆಕ್ಟೇರ್ ಅರಣ್ಯ ಬಳಕೆಯಾಗಲಿದೆ ಎಂದು ರಾಜ್ಯ ಸರ್ಕಾರ ಪ್ರಸ್ತಾಪಿಸಿತ್ತು. ಶರಾವತಿ ವನ್ಯಜೀವಿ ಧಾಮ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಈ ಯೋಜನೆ ಹಾದು ಹೋಗಲಿದೆ. 

ಪ್ರಸ್ತಾವಿತ ಮಾರ್ಗದ ಕುರಿತು ಪರಿಶೀಲಿಸಲು ಏಳು ಮಂದಿ ತಜ್ಞರ ಸಮಿತಿ ರಚಿಸಲು 2022ರ ಮೇ 30ರಂದು ನಡೆದ ವನ್ಯಜೀವಿ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಸಮಿತಿಯು ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಗಳಿಗೆ ಸೆಪ್ಟೆಂಬರ್‌ನಲ್ಲಿ ಭೇಟಿ ನೀಡಿ ಜನರ ಅಹವಾಲು ಆಲಿಸಿತ್ತು. ಡಿಸೆಂಬರ್‌ನಲ್ಲಿ ಸಮಿತಿ ವರದಿ ಸಲ್ಲಿಸಿತ್ತು. ಯೋಜನೆಯಲ್ಲಿ ಅನೇಕ ಲೋಪಗಳಿದ್ದು, ಈಗಿನ ಸ್ವರೂಪದಲ್ಲಿ ಒಪ್ಪಲು ಸಾಧ್ಯವೇ ಇಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಧಿಕ ಪ್ರಮಾಣದಲ್ಲಿ ಭೂಕುಸಿತ ಸಂಭವಿಸುತ್ತಿದ್ದು, ಇದರ ಕುರಿತು ರೈಲ್ವೆ ಇಲಾಖೆಯ ಪ್ರಸ್ತಾವದಲ್ಲಿ ಉಲ್ಲೇಖವೇ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ಪರಿಸರ ಹಾಗೂ ವನ್ಯಜೀವಿ ಮೇಲಾಗುವ ಹಾನಿ ಕಡಿಮೆ ಮಾಡಿ ಎಲ್ಲ ಲೋಪಗಳನ್ನು ಸರಿಪಡಿಸಿ ಪ್ರಸ್ತಾವವನ್ನು ಮಂಡಳಿಯ ಸ್ಥಾಯಿ ಸಮಿತಿಗೆ ಸಲ್ಲಿಸಬೇಕು ಎಂದು ಶಿಫಾರಸು ಮಾಡಿತ್ತು. 

ಈ ವಿಷಯದ ಕುರಿತು ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಮತ್ತೆ ಚರ್ಚೆಯಾಗಿತ್ತು. ಬಳಿಕ ಪರಿಸರ ಸಚಿವಾಲಯವು ಈ ವರ್ಷದ ಫೆಬ್ರುವರಿಯಲ್ಲಿ ಸಭೆ ನಡೆಸಿ ಸಮಾಲೋಚನೆ ನಡೆಸಿತ್ತು. ಸಮಿತಿಯ ಶಿಫಾರಸುಗಳ ಆಧಾರದಲ್ಲಿ ಯೋಜನೆಯ ಸ್ವರೂಪದಲ್ಲಿ ಬದಲಾವಣೆ ಮಾಡುವ ಕುರಿತು ಪರಿಶೀಲಿಸಲು ರೈಲ್ವೆ ಇಲಾಖೆಗೆ ಸೂಚಿಸಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ನಂತರ ತಜ್ಞರ ಸಮಿತಿಯ ವರದಿಯನ್ನು ರೈಲ್ವೆ ಇಲಾಖೆಗೆ ನೀಡಲಾಗಿತ್ತು. ಆ ನಂತರ ಮತ್ತೊಂದು ಸಭೆಯನ್ನು ಮಾರ್ಚ್‌ ತಿಂಗಳಲ್ಲಿ ನಡೆಸಿ ಪರಿಸರದ ಮೇಲಾಗುವ ಹಾನಿ ಪ್ರಮಾಣವನ್ನು ಕಡಿಮೆ ಮಾಡಲು ಹಲವು ಸಲಹೆಗಳನ್ನು ನೀಡಲಾಗಿತ್ತು. 

‘ಪಶ್ಚಿಮಘಟ್ಟದಲ್ಲೇ ಸುಮಾರು 2 ಲಕ್ಷ ಮರಗಳ ಹನನಕ್ಕೆ ಕಾರಣವಾಗುವ ಈ ಯೋಜನೆಯನ್ನು ಕೈಬಿಡಬೇಕು’ ಎಂದು ಆಗ್ರಹಿಸಿ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್ ಕುಲಕರ್ಣಿ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT