ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹210 ಕೋಟಿ ದಂಡ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ; ಕಾಂಗ್ರೆಸ್ ಮೇಲ್ಮನವಿ ವಜಾ

Published 8 ಮಾರ್ಚ್ 2024, 15:26 IST
Last Updated 8 ಮಾರ್ಚ್ 2024, 15:26 IST
ಅಕ್ಷರ ಗಾತ್ರ

ನವದೆಹಲಿ: ತೆರಿಗೆ ಪಾವತಿ ವಿಚಾರದಲ್ಲಿ ಆದಾಯ ತೆರಿಗೆ ಇಲಾಖೆ ಕೈಗೊಂಡಿರುವ ಕ್ರಮಕ್ಕೆ ತಡೆಕೋರಿ ಕಾಂಗ್ರೆಸ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯು (ಐಟಿಎಟಿ) ಶುಕ್ರವಾರ ತಳ್ಳಿಹಾಕಿದೆ.

ಈ ಕ್ರಮವನ್ನು ‘ಪ್ರಜಾಪ್ರಭುತ್ವದ ಮೇಲಿನ ದಾಳಿ’ ಎಂದು ಪಕ್ಷವು ಟೀಕಿಸಿದ್ದು, ನ್ಯಾಯ ಪಡೆಯಲು ಕಾನೂನಿನಲ್ಲಿ ಲಭ್ಯವಿರುವ ಎಲ್ಲ ಆಯ್ಕೆಗಳನ್ನು ಪರಿಶೀಲಿಸುವುದಾಗಿ ಹೇಳಿದೆ. 

ಈ ಹಿಂದಿನ ವರ್ಷಗಳ ತೆರಿಗೆ ಪಾವತಿಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ಗೆ ₹ 210 ಕೋಟಿ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು.

‘ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲೇ ಬಿಜೆಪಿ ಸರ್ಕಾರವು ಉದ್ದೇಶಪೂರ್ವಕವಾಗಿ ನಮ್ಮ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಆದಾಯ ತೆರಿಗೆ ಇಲಾಖೆ ಕ್ರಮದ ವಿರುದ್ಧ ಶೀಘ್ರದಲ್ಲೇ ಹೈಕೋರ್ಟ್‌ ಮೊರೆ ಹೋಗುತ್ತೇವೆ’ ಎಂದು ಎಐಸಿಸಿ ಖಜಾಂಚಿ ಅಜಯ್‌ ಮಾಕೆನ್‌ ಶುಕ್ರವಾರ ಹೇಳಿದರು.‌

‘ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಆದೇಶದಿಂದ ನಮಗೆ ನಿರಾಸೆಯಾಗಿದೆ. ಈ ವಿಷಯದಲ್ಲಿ ನ್ಯಾಯಮಂಡಳಿಯು ತನ್ನದೇ ಆದ ಪೂರ್ವನಿದರ್ಶನಗಳನ್ನು ಕೂಡ ಅನುಸರಿಸಿಲ್ಲ. ಚುನಾವಣೆ ದಿನಾಂಕ ಪ್ರಕಟಗೊಳ್ಳಲು ಕೆಲವೇ ದಿನಗಳಿರುವಾಗ ರಾಷ್ಟ್ರೀಯ ಪಕ್ಷವೊಂದರ ಮೇಲೆ ಇಂತಹ ಕ್ರಮ ಕೈಗೊಂಡಿರುವುದು ಸರಿಯಲ್ಲ’ ಎಂದು ಎಐಸಿಸಿ ಕಾನೂನು ವಿಭಾಗದ ಮುಖ್ಯಸ್ಥ ವಿವೇಕ್‌ ತಂಖಾ ಪ್ರತಿಕ್ರಿಯಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಯು ವಿವಿಧ ಬ್ಯಾಂಕ್‌ ಖಾತೆಗಳಿಂದ ₹65 ಕೋಟಿ ಜಮಾ ಮಾಡಿಕೊಂಡಿದೆ ಎಂದು ಪಕ್ಷವು ಕೆಲ ದಿನಗಳ ಹಿಂದೆ ಆರೋಪಿಸಿತ್ತು. ಮಾತ್ರವಲ್ಲ, ತನ್ನ ಖಾತೆಯಲ್ಲಿರುವ ₹ 205 ಕೋಟಿ ಮೊತ್ತವನ್ನು ಬಳಸದಂತೆ ಸ್ಥಗಿತಗೊಳಿದೆ ಎಂದೂ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT