ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ನೀಟ್‌’ ಅಕ್ರಮ | ಸಂಸತ್‌ನಲ್ಲಿ ನಿಮ್ಮ ಧ್ವನಿಯಾಗುವೆ: ವಿದ್ಯಾರ್ಥಿಗಳಿಗೆ ರಾಹುಲ್

Published 9 ಜೂನ್ 2024, 9:26 IST
Last Updated 9 ಜೂನ್ 2024, 9:26 IST
ಅಕ್ಷರ ಗಾತ್ರ

ನವದೆಹಲಿ: ‘ನರೇಂದ್ರ ಮೋದಿ ಅವರು ಮತ್ತೊಂದು ಅವಧಿಗೆ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ, ನೀಟ್‌ ಪರೀಕ್ಷೆಯಲ್ಲಿನ ಅಕ್ರಮಗಳು ದೇಶದ 24 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಮತ್ತು ಅವರ ಕುಟುಂಬಗಳನ್ನು ಧ್ವಂಸಗೊಳಿಸಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ವಾಗ್ದಾಳಿ ನಡೆಸಿದರು. 

‘ದೇಶದ ವಿದ್ಯಾರ್ಥಿಗಳ ಧ್ವನಿಯಾಗಿ ಸಂಸತ್ತಿನಲ್ಲಿ ನಾನು ಕಾರ್ಯನಿರ್ವಹಿಸುತ್ತೇನೆ. ಅಲ್ಲದೆ ಅವರ ಭವಿಷ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಪ್ರಬಲವಾಗಿ ಮಾತನಾಡುತ್ತೇನೆ’ ಎಂದು ಅವರು ‘ಎಕ್ಸ್‌’ನಲ್ಲಿ ಭರವಸೆ ನೀಡಿದ್ದಾರೆ.

‘ಒಂದೇ ಪರೀಕ್ಷಾ ಕೇಂದ್ರದ ಆರು ಅಭ್ಯರ್ಥಿಗಳು ಸೇರಿದಂತೆ ಅನೇಕರು ಗರಿಷ್ಠ ಅಂಕಗಳನ್ನು ಪಡೆದಿದ್ದಾರೆ. ತಾಂತ್ರಿಕವಾಗಿ ಇಷ್ಟು ಅಂಕಗಳನ್ನು ಹಲವರು ಗಳಿಸಲು ಸಾಧ್ಯವಿಲ್ಲ’ ಎಂದಿರುವ ಅವರು, ಪ್ರಶ್ನೆ ಪತ್ರಿಕೆ ಸೋರಿಕೆಯ ಸಾಧ್ಯತೆಯನ್ನು ಸರ್ಕಾರ ನಿರಂತರವಾಗಿ ನಿರಾಕರಿಸುತ್ತಿದೆ’ ಎಂದು ಅವರು ಕಿಡಿಕಾರಿದ್ದಾರೆ. 

ಶಿಕ್ಷಣ ಮಾಫಿಯಾವು ಸರ್ಕಾರಿ ಯಂತ್ರದೊಂದಿಗೆ ಶಾಮೀಲಾಗಿ ‘ಪ್ರಶ್ನೆ ಪತ್ರಿಕೆ ಸೋರಿಕೆ ಉದ್ಯಮ’ವನ್ನು ನಡೆಸುತ್ತಿವೆ. ಇದನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್‌ ಬಳಿ ದೃಢವಾದ ಯೋಜನೆ ಇದೆ ಎಂದು ಅವರು ತಿಳಿಸಿದ್ದಾರೆ.

‘ಪ್ರಶ್ನೆ ಪತ್ರಿಕೆ ಸೋರಿಕೆಗೆ ಮುಕ್ತಿ ನೀಡುವ ಉದ್ದೇಶದಿಂದ ಕಾನೂನು ರೂಪಿಸುವ ಕುರಿತು ನಾವು ನಮ್ಮ ಪ್ರಣಾಳಿಕೆಯಲ್ಲಿ ವಾಗ್ದಾನ ಮಾಡಿದ್ದೆವು’ ಎಂದು ಅವರು ನೆನಪಿಸಿದ್ದಾರೆ.

ಪರೀಕ್ಷಾ ಅಕ್ರಮಗಳು ನಡೆದಿರುವ ಸಾಧ್ಯತೆಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಈಗಾಗಲೇ ತಳ್ಳಿಹಾಕಿದೆ. ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿನ ಬದಲಾವಣೆ ಮತ್ತು ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಸಮಯ ನಷ್ಟವಾದ ಕಾರಣ ಕೆಲ ಅಭ್ಯರ್ಥಿಗಳಿಗೆ ಕೃಪಾಂಕ ದೊರೆತಿವೆ. ಇದರಿಂದಾಗಿ ಕೆಲವರ ಅಂಕಗಳಲ್ಲಿ ಏರಿಕೆಯಾಗಿದೆ ಎಂದು ಎನ್‌ಟಿಎ ಪ್ರತಿಪಾದಿಸಿದೆ.

ಅಲ್ಲದೆ, 1500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೀಡಲಾದ ಕೃಪಾಂಕಗಳನ್ನು ಪರಿಶೀಲಿಸಲು ಶಿಕ್ಷಣ ಸಚಿವಾಲಯವು ಯುಪಿಎಸ್‌ಸಿ ಮಾಜಿ ಅಧ್ಯಕ್ಷರ ನೇತೃತ್ವದಲ್ಲಿ ನಾಲ್ವರು ಸದಸ್ಯರ ಸಮಿತಿಯ ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT