ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್‌: ಕೋಲಾರದ ಕಲ್ಯಾಣ್‌ ದೇಶಕ್ಕೆ ಮೊದಲು

ಸಿಇಟಿಯಲ್ಲಿ ನಾಲ್ಕು ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆದಿದ್ದ ಸಾಧಕ
Published 6 ಜೂನ್ 2024, 6:55 IST
Last Updated 6 ಜೂನ್ 2024, 6:55 IST
ಅಕ್ಷರ ಗಾತ್ರ

ಕೋಲಾರ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್–ಯುಜಿ) ಮುಳಬಾಗಿಲು ತಾಲ್ಲೂಕಿನ ನಂಗಲಿ ಬಳಿಯ ಉಪ್ಪಾರಹಳ್ಳಿ ಗ್ರಾಮದ ವಿ.ಕಲ್ಯಾಣ್‌ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.

ಬೆಂಗಳೂರಿನ ಮಾರತಹಳ್ಳಿಯಲ್ಲಿಯ ಶ್ರೀಚೈತನ್ಯ ಟೆಕ್ನೊ ಸ್ಕೂಲ್‌ನಲ್ಲಿ ಪಿಯುಸಿ (ಸಿಬಿಎಸ್‌ಇ) ಓದಿರುವ ಅವರು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ನಾಲ್ಕು ವಿಭಾಗಗಳಲ್ಲಿ ‌ರ್‍ಯಾಂಕ್ ಗಿಟ್ಟಿಸಿಕೊಂಡಿದ್ದರು. ಪಶು ವೈದ್ಯಕೀಯ (ಬಿ.ವಿ.ಎಸ್ಸಿ), ಬಿ.ಫಾರ್ಮಾ (ಫಾರ್ಮಸಿ), ಫಾರ್ಮಾ ಡಿ (ಫಾರ್ಮಸಿ) ಮತ್ತು ಬಿ.ಎಸ್ಸಿ ನರ್ಸಿಂಗ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.

ಈಗ ಅಖಿಲ ಭಾರತ ಮಟ್ಟದಲ್ಲಿ 720ಕ್ಕೆ 720 ಅಂಕ ಪಡೆದು ಮತ್ತೊಂದು ಸಾಧನೆಗೆ ಪಾತ್ರರಾಗಿದ್ದಾರೆ. ಅವರೀಗ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ವೈದ್ಯಕೀಯ ಶಿಕ್ಷಣ ಓದುವ ಇರಾದೆ ವ್ಯಕ್ತಪಡಿಸಿದ್ದಾರೆ.

‘ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದ ನನಗೆ ರ‍್ಯಾಂಕ್‌ ಬರುವ ವಿಶ್ವಾಸವಿತ್ತು. ಪರಿಶ್ರಮ ಹಾಕಿ ಅಭ್ಯಾಸ ಮಾಡಿದ್ದೆ. ಪೋಷಕರು, ಉಪನ್ಯಾಸಕರು ಸಹಾಯ ತುಂಬಾ ಸಹಾಯ ಮಾಡಿದರು.‌ ಸಿಇಟಿ ಬಳಿಕ ನೀಟ್‌ನಲ್ಲಿ ಮೊದಲ ರ‍್ಯಾಂಕ್‌ ಬಂದಿರುವುದು ತುಂಬಾ ಖುಷಿ ಉಂಟು ಮಾಡಿದೆ’ ಎಂದು ಸಾಧಕ ಕಲ್ಯಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಲ್ಯಾಣ್‌ ಅವರದ್ದು ಮೂಲತಃ ರೈತ ಕುಟುಂಬ. ಉಪ್ಪಾರಹಳ್ಳಿಯಲ್ಲಿ ಜಮೀನು ಹೊಂದಿದ್ದು ಅವರ ದೊಡ್ಡಪ್ಪಂದಿರು ವ್ಯವಸಾಯ ಮಾಡಿಕೊಂಡಿದ್ದಾರೆ. ತಂದೆ ವಿ.ವೆಂಕಟೇಶಪ್ಪ ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಕೆ.ಆರ್‌.ಪುರಂನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಹೀಗಾಗಿ, ಕಲ್ಯಾಣ್‌ ಎಲ್‌ಕೆಜಿಯಿಂದಲೂ ಬೆಂಗಳೂರಿನಲ್ಲಿ ಓದಿದ್ದಾರೆ. ಪಿಯುಸಿಯಲ್ಲಿ (ಸಿಬಿಎಸ್‌ಇ) ಪಿಸಿಬಿ ಹಾಗೂ ಪಿಇ ವಿಷಯದಲ್ಲಿ ಶೇ 96 ಅಂಕ ಪಡೆದಿದ್ದರು.

‘ನೀಟ್‌ಗಾಗಿ ಕಲ್ಯಾಣ್‌ ಹಬ್ಬಗಳು, ಕುಟುಂಬದ ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡಿದ್ದ. ಕಠಿಣ ಪರಿಶ್ರಮ ಹಾಗೂ ಧ್ಯಾನಸ್ಥನಾಗಿ ಓದಿನಲ್ಲಿ ತೊಡಗಿದ್ದ. ಅದಕ್ಕೆ ಈಗ ಫಲ ಸಿಕ್ಕಿದೆ. ಲಕ್ಷಾಂತರ ವಿದ್ಯಾರ್ಥಿಗಳು ಬರೆಯುವ ಈ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ಸ್ಥಾನ ಬರುವುದು ಹುಡುಗಾಟದ ವಿಷಯವಲ್ಲ. ನನ್ನ ಮಗ ಈ ಸಾಧನೆ ಮಾಡಿರುವುದು ಸಹಜವಾಗಿಯೇ ಖುಷಿ ತಂದಿದೆ’ ಎಂದು ತಂದೆ ವೆಂಕಟೇಶಪ್ಪ ಹೇಳಿದರು.

ಕಲ್ಯಾಣ್‌ ಅವರ ತಾಯಿ ಲಕ್ಷ್ಮಿ ಗೃಹಿಣಿ. ಸಹೋದರಿ ವಿ.ರೋಹಿತಾ ಎಂಟನೇ ತರಗತಿ ಓದುತ್ತಿದ್ದಾರೆ.

ಬೆಂಗಳೂರಿನ ಕೆ.ಆರ್‌.ಪುರಂ ನಿವಾಸದಿಂದ ಮಾರತಹಳ್ಳಿಯಲ್ಲಿರುವ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌ಗೆ ಹೋಗಿ ಬರಲು ಸಂಚಾರ ದಟ್ಟಣೆ ಕಾರಣ ನಿತ್ಯ ಮೂರು ಗಂಟೆ ಸಮಯ ವ್ಯರ್ಥವಾಗುತ್ತದೆ. ಅದೇ ಮೂರು ಗಂಟೆ ಸಮಯದಲ್ಲಿ ಓದಬಹುದು. ಹೀಗಾಗಿ, ಪೋಷಕರು ಕಲ್ಯಾಣ್‌ ಅವರನ್ನು ಸಂಸ್ಥೆಯ ಹಾಸ್ಟೆಲ್‌ಗೆ ಸೇರಿಸಿದ್ದರು. ಅದು ಕೂಡ ಫಲ ನೀಡಿದೆ.

ನೀಟ್‌ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳು 720ಕ್ಕೆ 720 ಅಂಕ ಪಡೆದ ಕಲ್ಯಾಣ್‌ ಮುಳಬಾಗಿಲು ತಾಲ್ಲೂಕಿನ ಉಪ್ಪಾರಹಳ್ಳಿ ಕಲ್ಯಾಣ್ ಓದಿದ್ದು ಬೆಂಗಳೂರಿನಲ್ಲಿ

ನೀಟ್‌ನಲ್ಲಿ ದೇಶಕ್ಕೆ ಮೊದಲ ಸ್ಥಾನ ಬಂದಿರುವುದು ಸಹಜವಾಗಿಯೇ ಖುಷಿ ಇದೆ. ನನ್ನ ಗುರಿ ದೆಹಲಿಯ ಏಮ್ಸ್‌ನಲ್ಲಿ ಎಂಬಿಬಿಎಸ್‌ ಮಾಡಿ ವೈದ್ಯನಾಗಬೇಕು ಸಂಶೋಧನೆ ಮಾಡಬೇಕು
-ವಿ.ಕಲ್ಯಾಣ್‌, ನೀಟ್‌ನಲ್ಲಿ ಮೊದಲ ರ‍್ಯಾಂಕ್‌ ಪಡೆದ ವಿದ್ಯಾರ್ಥಿ

ಪರೀಕ್ಷೆ ಬರೆದಿದ್ದ 1.5 ಲಕ್ಷ ವಿದ್ಯಾರ್ಥಿಗಳು

ನೀಟ್‌ ಪರೀಕ್ಷೆಯು ಮೇ 5ರಂದು ದೇಶದ 571 ನಗರಗಳ 4750 ಕೇಂದ್ರಗಳಲ್ಲಿ ನಡೆದಿತ್ತು. ವಿದೇಶದ 14 ಕೇಂದ್ರಗಳಲ್ಲಿ ನಡೆದಿತ್ತು. ರಾಜ್ಯದಿಂದಲೇ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಕಲ್ಯಾಣ್‌ ಸೇರಿದಂತೆ ರಾಜ್ಯದ ಆರು ಮಂದಿ 720ಕ್ಕೆ 720 ಅಂಕ ಪಡೆದುಕೊಂಡಿದ್ದಾರೆ. ದೇಶದಲ್ಲಿ ಸುಮಾರು 67 ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT