ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್‌ ಪರೀಕ್ಷೆ: ತನಿಖೆಗೆ ಸಿದ್ದರಾಮಯ್ಯ ಆಗ್ರಹ

Published 7 ಜೂನ್ 2024, 15:31 IST
Last Updated 7 ಜೂನ್ 2024, 15:31 IST
ಅಕ್ಷರ ಗಾತ್ರ

ಬೆಂಗಳೂರು: ‘ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿರುವ ನೀಟ್‌ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವ ಶಂಕೆ ದೇಶದಾದ್ಯಂತ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ, ನೊಂದ ಪರೀಕ್ಷಾರ್ಥಿಗಳಿಗೆ ನ್ಯಾಯ ದೊರಕಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಪರೀಕ್ಷೆ ಬರೆದಿದ್ದ 24 ಲಕ್ಷ ಅಭ್ಯರ್ಥಿಗಳು ಮತ್ತು ಅವರ ಪೋಷಕರಲ್ಲಿ ಆತಂಕ ಮೂಡಿದೆ. ಪರೀಕ್ಷೆಯ ವಿಶ್ವಾಸಾರ್ಹತೆಯ ಬಗ್ಗೆಯೇ ಪ್ರಶ್ನೆ ಎದ್ದಿದೆ. ಕೃಪಾಂಕ ನೀಡಿರುವುದು ಮತ್ತು ತರಾತುರಿಯಲ್ಲಿ ಫಲಿತಾಂಶ ಪ್ರಕಟಿಸಿರುವುದು ಅಕ್ರಮ ನಡೆದಿರಬಹುದ ಎಂಬ ಸಂಶಯಕ್ಕೆ ಎಡೆಮಾಡಿವೆ’ ಎಂದು ದೂರಿದ್ದಾರೆ.

ನೀಟ್‌ ಪರೀಕ್ಷೆಯಲ್ಲಿ ಈ ಬಾರಿ 67 ಅಭ್ಯರ್ಥಿಗಳು 720ಕ್ಕೆ 720 ಅಂಕ ಪಡೆದಿದ್ದಾರೆ. 2019ರಲ್ಲಿ ಒಬ್ಬ ವಿದ್ಯಾರ್ಥಿನಿ, 2020ರಲ್ಲಿ ಒಬ್ಬ, 2021ರಲ್ಲಿ ಮೂವರು, 2022ರಲ್ಲಿ ಒಬ್ಬ ಹಾಗೂ 2023ರಲ್ಲಿ ಇಬ್ಬರು ಮಾತ್ರ ಶೇಕಡ 100ರಷ್ಟು ಅಂಕ ಗಳಿಸಿದ್ದರು. ಈ ಬಾರಿ ಪೂರ್ಣ ಅಂಕ ಪಡೆದವರ ಪೈಕಿ ಶೇ 44 ಅಭ್ಯರ್ಥಿಗಳು ಕೃಪಾಂಕದ ಕಾರಣದಿಂದಲೇ ಶೇ 100ರಷ್ಟು ಅಂಕ ಗಳಿಸಿದ್ದಾರೆ. ಹಿಂದಿನ ವರ್ಷಗಳ ಫಲಿತಾಂಶ ಮತ್ತು ಈ ವರ್ಷದ ಫಲಿತಾಂಶ ಹೋಲಿಕೆ ಮಾಡಿದರೆ ಅಕ್ರಮದ ವಾಸನೆ ಹೊಡೆಯುತ್ತದೆ ಎಂದಿದ್ದಾರೆ.

‘ನೀಟ್‌ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೂ ಋಣಾತ್ಮಕ ಅಂಕಗಳಿರುತ್ತವೆ. ಆದರೂ, ಇಷ್ಟೊಂದು ಅಭ್ಯರ್ಥಿಗಳು ಶೇ 100ರಷ್ಟು ಅಂಕ ಪಡೆದು, ಅಗ್ರಸ್ಥಾನ ಗಳಿಸಲು ಹೇಗೆ ಸಾಧ್ಯವಾಯಿತು ಎಂಬುದನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಹರಿಯಾಣದ ಫರೀದಾಬಾದ್‌ನಲ್ಲಿ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ಜನರು ಶೇ 100 ಅಂಕ ಗಳಿಸಿದ್ದರೆ, ಒಬ್ಬರು 718 ಮತ್ತು ಇನ್ನೊಬ್ಬರಯ 719 ಅಂಕ ಗಳಿಸಿದ್ದಾರೆ. ಇದು ಪರೀಕ್ಷಾ ಅಕ್ರಮ ನಡೆದಿರುವುದಕ್ಕೆ ಮೇಲ್ನೋಟಕ್ಕೆ ಸಾಕ್ಷ್ಯ ಒದಗಿಸುತ್ತದೆ. ಫರೀದಾಬಾದ್‌ನ ಇನ್ನೊಂದು ಕೇಂದ್ರದಲ್ಲಿ ತಪ್ಪು ಪ್ರಶ್ನೆ ಪತ್ರಿಕೆ ವಿತರಿಸಿದ್ದರಿಂದ 45 ನಿಮಿಷ ವ್ಯರ್ಥವಾಗಿತ್ತು. ಈ ಕಾರಣದಿಂದ ಕೃಪಾಂಕ ನೀಡಿರುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಯಾವ ಮಾಹಿತಿಯೂ ಇಲ್ಲದೆ ಕೃಪಾಂಕ ನೀಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

‘2019ರಿಂದ 2023ರ ಅವಧಿಯಲ್ಲಿ 600 ಅಂಕ ಗಳಿಸಿದವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಸಿಕ್ಕಿತ್ತು. ಈ ಬಾರಿ ಅಂಕ ಮಿತಿಯನ್ನು 134ರಿಂದ 164ಕ್ಕೆ ಹೆಚ್ಚಿಸಲಾಗಿದೆ. ಇದರಿಂದ 660 ಅಂಕ ಗಳಿಸಿದವರಿಗೆ ಮಾತ್ರ ಸರ್ಕಾರಿ ಕಾಲೇಜುಗಳಲ್ಲಿ ಸೀಟು ಸಿಗಲಿದೆ. ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ’ ಎಂದಿದ್ದಾರೆ.

ನೀಟ್‌ ಫಲಿತಾಂಶ ಪ್ರಕಟವಾದ ಬಳಿಕ ದೌಸಾದಲ್ಲಿ ಅಜಿತ್‌ ಅಂಬ ವಿದ್ಯಾರ್ಥಿ, ಮಧ್ಯಪ್ರದೇಶದ ರೇವಾದಲ್ಲಿ ಬಗೀಶಾ ತಿವಾರಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತಷ್ಟು ಯುವಜನರು ಪ್ರಾಣ ಕಳೆದುಕೊಳ್ಳುವ ಮೊದಲು ಕೇಂದ್ರ ಸರ್ಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಫಲಿತಾಂಶ ಪ್ರಕಟಣೆಯೂ ಸಂಶಯಾಸ್ಪದ’

‘ಜೂನ್‌ 14ಕ್ಕೆ ಪ್ರಕಟವಾಗಬೇಕಿದ್ದ ನೀಟ್‌ ಫಲಿತಾಂಶವನ್ನು ಲೋಕಸಭಾ ಚುನಾವಣೆಯ ಮತ ಎಣಿಕೆ ದಿನವಾದ ಜೂನ್‌ 4ರಂದು ಪ್ರಕಟಿಸಿರುವುದು ಸಂಶಯಾಸ್ಪದವಾಗಿದೆ. ಪರೀಕ್ಷೆಯಲ್ಲಿನ ಅಕ್ರಮಗಳನ್ನು ಮುಚ್ಚಿ ಹಾಕುವುದಕ್ಕಾಗಿಯೇ ತರಾತುರಿಯಲ್ಲಿ ಫಲಿತಾಂಶ ಪ್ರಕಟಿಸಲಾಗಿತ್ತೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT