ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಫೇಲ್‌’ ಸ್ವಾಗತಕ್ಕೆ ಸದ್ದಿಲ್ಲದೆ ಸಿದ್ಧತೆ

Last Updated 9 ಸೆಪ್ಟೆಂಬರ್ 2018, 14:21 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿ ರಾಜಕೀಯ ವಲಯದಲ್ಲಿ ಭಾರಿ ಜಟಾಪಟಿ ನಡೆಯುತ್ತಿದೆ. ಆದರೆ, ಈ ಯುದ್ಧ ವಿಮಾನಗಳನ್ನು ಬರಮಾಡಿಕೊಳ್ಳಲು ವಾಯುಪಡೆಯು ಸದ್ದಿಲ್ಲದೆ ಸನ್ನದ್ಧವಾಗುತ್ತಿದೆ. ಈ ವಿಮಾನಗಳಿಗೆ ಬೇಕಾದ ಮೂಲಸೌಕರ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು‍ಪೈಲಟ್‌ಗಳ ತರಬೇತಿಯೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೈಲಟ್‌ಗಳ ಒಂದು ತಂಡ ಈ ವರ್ಷದ ಕೊನೆಗೆ ಫ್ರಾನ್ಸ್‌ಗೆ ಹೋಗಿ ತರಬೇತಿ ಪಡೆಯಲಿದೆ. ಈ ತಂಡಕ್ಕೆ ಪ್ರಾಥಮಿಕ ಸುತ್ತಿನ ತರಬೇತಿಯನ್ನು ಈಗಾಗಲೇ ನೀಡಲಾಗಿದೆ. ವಾಯುಪಡೆಯ ಕೆಲವು ತಂಡಗಳು ಹಲವು ಬಾರಿ ಫ್ರಾನ್ಸ್‌ಗೆ ಭೇಟಿ ನೀಡಿ ರಫೇಲ್‌ ವಿಮಾನದಲ್ಲಿ ಭಾರತಕ್ಕೆ ವಿಶೇಷವಾಗಿ ಬೇಕಾಗಿರುವ ಸವಲತ್ತುಗಳನ್ನು ಅಳವಡಿಸಲು ಡಸಾಲ್ಟ್‌ ಏವಿಯೇಷನ್ ಸಂಸ್ಥೆಗೆ ಸಲಹೆಗಳನ್ನು ನೀಡಿವೆ. ರಫೇಲ್‌ ವಿಮಾನಗಳನ್ನು ಈ ಸಂಸ್ಥೆ ತಯಾರಿಸುತ್ತಿದೆ.

₹58 ಸಾವಿರ ಕೋಟಿ ವೆಚ್ಚದಲ್ಲಿ 36 ರಫೇಲ್‌ ವಿಮಾನಗಳ ಖರೀದಿಗೆ ಭಾರತವು ಫ್ರಾನ್ಸ್‌ ಜತೆಗೆ 2016ರ ಸೆಪ್ಟೆಂಬರ್‌ನಲ್ಲಿ ಒಪ್ಪಂದ ಮಾಡಿಕೊಂಡಿದೆ. ವಿಮಾನದ ದರ ಮತ್ತು ಇತರ ವಿಚಾರಗಳ ಬಗ್ಗೆ ಕಾಂಗ್ರೆಸ್ ಪಕ್ಷವು ಹಲವು ಪ್ರಶ್ನೆಗಳನ್ನು ಎತ್ತಿದೆ.

ಮುಂದಿನ ಸೆಪ್ಟೆಂಬರ್‌ನಲ್ಲಿ ವಿಮಾನಗಳ ಹಸ್ತಾಂತರ ಆರಂಭವಾಗಲಿದೆ. ಭಾರತಕ್ಕೆ ಪೂರೈಸಬೇಕಿರುವ ವಿಮಾನಗಳ ಪರೀಕ್ಷೆ ಆರಂಭವಾಗಿದೆ. ವಿಮಾನ ಪೂರೈಕೆ ವೇಳಾಪಟ್ಟಿಗೆ ಬದ್ಧವಾಗಿರುವಂತೆ ಸಂಸ್ಥೆಗೆ ಸೂಚಿಸಲಾಗಿದೆ.

ಈ ವಿಮಾನದಲ್ಲಿ ಹಲವು ಪರಿಷ್ಕರಣೆಗಳನ್ನು ಭಾರತ ಸೂಚಿಸಿದೆ. ಇಸ್ರೇಲ್ ನಿರ್ಮಿತ ಡಿಸ್‌ಪ್ಲೇ ವ್ಯವಸ್ಥೆ ಇರುವ ಹೆಲ್ಮೆಟ್‌, ರೇಡಾರ್‌ ಎಚ್ಚರಿಕೆ ಸ್ವೀಕೃತಿ ವ್ಯವಸ್ಥೆ, 10 ತಾಸು ವಿಮಾನ ಹಾರಾಟದ ದತ್ತಾಂಶ ಸಂಗ್ರಹ ಇತ್ಯಾದಿ ಇದರಲ್ಲಿ ಸೇರಿದೆ.

ರಫೇಲ್‌ನ ಮೊದಲ ತುಕಡಿಯನ್ನು ಅಂಬಾಲಾ ವಾಯುನೆಲೆಯಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ. ಈ ವಾಯುನೆಲೆಯನ್ನು ಭಾರತದ ಅತ್ಯಂತ ಮಹತ್ವದ ವಾಯುನೆಲೆ ಎಂದು ಪರಿಗಣಿಸಲಾಗುತ್ತದೆ. ಪಾಕಿಸ್ತಾನ ಗಡಿಯಿಂದ ಇದು 220 ಕಿ.ಮೀ. ದೂರದಲ್ಲಿದೆ. ಎರಡನೇ ತುಕಡಿಯನ್ನು ಪಶ್ಚಿಮ ಬಂಗಾಳದ ಹಾಶೀಮಾರಾ ವಾಯುನೆಲೆಯಲ್ಲಿ ನಿಯೋಜಿಸಲಾಗುವುದು.

ರಫೇಲ್‌ ಯುದ್ಧ ವಿಮಾನಗಳಿಗೆ ಬೇಕಾದ ಮೂಲಸೌಕರ್ಯ ಅಭಿವೃದ್ಧಿಗೆ ಈ ಎರಡೂ ನೆಲೆಗಳಿಗೆ ₹400 ಕೋಟಿ ಮಂಜೂರು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT