ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರ ಭೂಮಿ ಕಸಿಯಲು ಬಿಜೆಪಿ ಹೊಸ ಕಾಯ್ದೆ: ಅಖಿಲೇಶ್ ಯಾದವ್

ಯೂರಿಯಾ ಗೊಬ್ಬರದ ಬೆಲೆ ಹೆಚ್ಚಳದ ಮೂಲಕ ಮೋದಿ ರೈತರನ್ನು ಶೋಷಿಸುತ್ತಿದ್ದಾರೆ: ಅಖಿಲೇಶ್ ಯಾದವ್
Published 29 ಮೇ 2024, 15:29 IST
Last Updated 29 ಮೇ 2024, 15:29 IST
ಅಕ್ಷರ ಗಾತ್ರ

ಸೋನಭದ್ರ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದರೆ, ರೈತರ ಭೂಮಿ ಕಸಿಯಲು ರದ್ದಾದ ಕೃಷಿ ಕಾಯ್ದೆಗಳಂತಹ ಹೊಸ ಕಾಯ್ದೆಯನ್ನು ಜಾರಿಗೆ ‌‌ತರಲಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಹೇಳಿದರು.

ರಾಬರ್ಟ್ಸ್‌ಗಂಜ್‌ನಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ‘ಇಂಡಿಯಾ ಕೂಟವು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುವುದು’ ಎಂದು ತಿಳಿಸಿದರು.

‘ರೈತರ ಭೂಮಿ ಕಸಿಯಲು ಕರಾಳ ಕಾಯ್ದೆಗಳನ್ನು ರೂಪಿಸಿದ್ದ ಬಿಜೆಪಿ ಮುಖಂಡರು ಮತ್ತೆ ಈಗ ಪಕ್ಷವನ್ನು ಅಧಿಕಾರಕ್ಕೆ ತರಲು ಮತ ಯಾಚನೆ ಮಾಡುತ್ತಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ರೈತರು ಒಗ್ಗೂಡಿ ಪ್ರತಿಭಟನೆ ನಡೆಸಿದ ನಂತರವೇ ಅವುಗಳನ್ನು ವಾಪಸ್ ಪಡೆಯಲಾಗಿತ್ತು. ಕಾಯ್ದೆಗಳನ್ನು ಹಿಂಪಡೆದಿದ್ದರೂ ನಾವು ಎಚ್ಚರಿಕೆಯಿಂದ ಇರಬೇಕು. ಅವರು ಅಧಿಕಾರಕ್ಕೆ ಮರಳಿದರೆ ರೈತರ ಮತ್ತು ಆದಿವಾಸಿಗಳ ಭೂಮಿಯನ್ನು ಕಸಿದುಕೊಳ್ಳಲು ಮತ್ತೆ ಅಂಥದ್ದೇ ಕಾನೂನು ತರುತ್ತಾರೆ’ ಎಂದು ಅಖಿಲೇಶ್ ಆರೋಪಿಸಿದರು.

‘ಕೇಂದ್ರದ ಬಿಜೆಪಿ ಸರ್ಕಾರವು ಉದ್ದೇಶಪೂರ್ವಕವಾಗಿ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುತ್ತಿದೆ. ದೇಶದ ಯುವಜನರು ದೂರದ ಪ್ರದೇಶಗಳಿಗೆ ಹೋಗಿ ನೇಮಕಾತಿ ಪರೀಕ್ಷೆ ಬರೆದು ಬರುತ್ತಾರೆ. ಮನೆಗೆ ಬಂದ ನಂತರ ನೋಡಿದರೆ, ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎನ್ನುವುದು ಗೊತ್ತಾಗುತ್ತದೆ’ ಎಂದು ಆರೋಪಿಸಿದರು.

‘ಬಿಜೆಪಿಯು ನಿರುದ್ಯೋಗದಲ್ಲಿ ಮತ್ತು ಉದ್ಯೋಗ ಕಸಿದುಕೊಳ್ಳುವುದರಲ್ಲಿ ದಾಖಲೆ ನಿರ್ಮಿಸಿದರೆ, ‘ಇಂಡಿಯಾ’ ಒಕ್ಕೂಟವು ಅಧಿಕಾರಕ್ಕೆ ಬಂದರೆ, ಉದ್ಯೋಗ ಸೃಷ್ಟಿಯಲ್ಲಿ ದಾಖಲೆ ನಿರ್ಮಿಸುತ್ತೇವೆ’ ಎಂದು ಭರವಸೆ ನೀಡಿದರು.

ಹಣದುಬ್ಬರದ ಹೆಚ್ಚಳದಿಂದ ಆರ್ಥಿಕ ಅಸಮಾನತೆ ಹೆಚ್ಚಾಗಿದೆ ಎಂದು ಬಿಜೆಪಿಯನ್ನು ಟೀಕಿಸಿದ ಅವರು, ‘ಆರ್ಥಿಕ ಅಸಮಾನತೆ ಬಗ್ಗೆ ಪ್ರಧಾನಿಯನ್ನು ಪ್ರಶ್ನಿಸಿದರೆ, ಎಲ್ಲ ಬಡವರನ್ನು ಶ್ರೀಮಂತರನ್ನಾಗಿ ಮಾಡಬೇಕೇ ಎಂಬುದಾಗಿ ಪ್ರಶ್ನಿಸಿದ್ದರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT