ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂ ಸರಿಪಡಿಸದಿದ್ದರೆ ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನ: ಸ್ಯಾಮ್‌ ಪಿತ್ರೋಡಾ

Published 28 ಡಿಸೆಂಬರ್ 2023, 14:12 IST
Last Updated 28 ಡಿಸೆಂಬರ್ 2023, 14:12 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿರುವ (ಇವಿಎಂ) ಸಮಸ್ಯೆಗಳನ್ನು ಸರಿಪಡಿಸದಿದ್ದರೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು’ ಎಂದು ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೋಡಾ ಗುರುವಾರ ಆರೋಪಿಸಿದ್ದಾರೆ.

‘ಪಿಟಿಐ– ವಿಡಿಯೊ’ಗೆ ನೀಡಿರುವ ಸಂದರ್ಶನದಲ್ಲಿ ಅವರು ಇವಿಎಂ ದೋಷಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮದನ್‌ ಬಿ. ಲೋಕೂರ್‌ ಅವರ ಅಧ್ಯಕ್ಷತೆಯ ‘ದಿ ಸಿಟಿಜನ್ಸ್ ಕಮಿಷನ್ ಆನ್ ಎಲೆಕ್ಷನ್ಸ್’ ಎಂಬ ಎನ್‌ಜಿಒ ವರದಿಯ ಶಿಫಾರಸು ಉಲ್ಲೇಖಿಸಿದ ಪಿತ್ರೋಡಾ, ‘ವಿವಿಪ್ಯಾಟ್‌ ವ್ಯವಸ್ಥೆ ನಿಜವಾಗಿಯೂ ಮತದಾರರ ಪರಿಶೀಲನೆಗೆ ಇರುವಂತಹುದು. ವಿವಿಪ್ಯಾಟ್‌ನ ಸದ್ಯದ ವಿನ್ಯಾಸ ಮಾರ್ಪಡಿಸುವುದು ವರದಿಯ ಮುಖ್ಯ ಶಿಫಾರಸುಗಳಲ್ಲೊಂದಾಗಿದೆ. ಇದಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯಿಸಬಹುದೆಂದು ಕಾಯುತ್ತಿದ್ದೆ. ಆದರೆ, ಅದು ಪ್ರತಿಕ್ರಿಯಿಸಲಿಲ್ಲ. ಹಾಗಾಗಿ ನಾನು ಈ ಬಗ್ಗೆ ಧ್ವನಿ ಎತ್ತಿರುವೆ’ ಎಂದರು.

‘ಈ ವರದಿಯ ಮೇಲೆ ಆಯೋಗಕ್ಕೆ ವಿಶ್ವಾಸ ಇಲ್ಲದೇ ಇರಬಹುದೆಂದು ನಾನು ಭಾವಿಸುತ್ತೇನೆ. ವಿಶ್ವಾಸ ಮೂಡಿಸುವ ಸಲುವಾಗಿಯಾದರೂ ಚುನಾವಣಾ ಆಯೋಗ ಪ್ರತಿಕ್ರಿಯಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಗಿದು 2024ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಚುನಾವಣೆಯು ಭಾರತದ ಭವಿಷ್ಯವನ್ನು ನಿರ್ಧರಿಸುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವವು ಹಳಿತಪ್ಪಿದೆ. ಹೆಚ್ಚು ಸರ್ವಾಧಿಕಾರದತ್ತ ಹೊರಳಿದೆ. ಎಲ್ಲವೂ ಏಕ ವ್ಯಕ್ತಿ ಪ್ರದರ್ಶನವಾಗಿದೆ’ ಎಂದು ಅವರು ಹೇಳಿದರು.

‘ಯಾರನ್ನೂ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಬಾರದೆಂದು ಇಂಡಿಯಾ ಮೈತ್ರಿಕೂಟವು ನಿರ್ಧರಿಸಿದೆ. ಇಬ್ಬರು ಅಷ್ಟೇ ಖರ್ಗೆ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಮೈತ್ರಿಕೂಟದಲ್ಲಿ ಕೆಲವು ಭಿನ್ನ ಅಭಿಪ್ರಾಯಗಳು ಇರುತ್ತವೆ, ಅದೇ ಮೈತ್ರಿಕೂಟದ ನಿಜವಾದ ಸೊಗಸು. ದೇಶದಲ್ಲಿ ನಡೆಯುವುದು ಅಧ್ಯಕ್ಷೀಯ ಚುನಾವಣೆ ಅಲ್ಲ, ಸಂಸದೀಯ ಚುನಾವಣೆ’ ಎಂದು ಪಿತ್ರೋಡಾ ಅವರು ಪ್ರಧಾನಿ ಅಭ್ಯರ್ಥಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT