ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಣೇಶೋತ್ಸವಕ್ಕೆ ಧ್ವನಿವರ್ಧಕಗಳ ಬಳಕೆ ಹಾನಿಕಾರಕವಾದರೆ ಈದ್‌ಗೂ...: ಬಾಂಬೆ HC

Published : 18 ಸೆಪ್ಟೆಂಬರ್ 2024, 12:26 IST
Last Updated : 18 ಸೆಪ್ಟೆಂಬರ್ 2024, 12:26 IST
ಫಾಲೋ ಮಾಡಿ
Comments

ಮುಂಬೈ: ‘ಅನುಮತಿಸಿದ ಮಟ್ಟಕ್ಕಿಂತ ಹೆಚ್ಚಿನ ಶಬ್ಧ ಹೊರಹೊಮ್ಮಿಸುವ ಧ್ವನಿವರ್ಧಕಗಳನ್ನು ಗಣೇಶೋತ್ಸವದಲ್ಲಿ ಬಳಸುವುದು ಹಾನಿಕಾರಕವಾದರೆ, ಈದ್‌ ಎ ಮಿಲಾದ್‌ ಉನ್ ನಬಿಯ ಮೆರವಣಿಗೆಯಲ್ಲಿ ಬಳಸುವುದೂ ಹಾನಿಕಾರಕವೇ’ ಎಂದು ಬಾಂಬೆ ಹೈಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.

ಈದ್‌ ಮಿಲಾದ್ ಮೆರವಣಿಗೆಯಲ್ಲಿ ಡಿಜೆ, ನೃತ್ಯ ಹಾಗೂ ಲೇಸರ್ ಲೈಟ್‌ ಬೆಳಕೆಯನ್ನು ನಿಷೇಧಿಸುವಂತೆ ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾ. ಅಮಿತ್ ಬೋರ್ಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ನಡೆಸಿ, ಈ ಅಭಿಪ್ರಾಯ ವ್ಯಕ್ತಪಡಿಸಿತು.

ಅಧಿಕ ಡೆಸಿಬಲ್‌ ಶಬ್ಧ ಹೊರಹೊಮ್ಮಿಸುವ ಧ್ವನಿವರ್ಧಕಗಳಿಗೆ ಅನುಮತಿ ನೀಡದಂತೆ ಪೊಲೀಸ್ ಹಾಗೂ ಪಾಲಿಕೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಹೈಕೋರ್ಟ್ ಅನ್ನು ಕೋರಲಾಗಿತ್ತು. ಡಿಜೆ ಹಾಗೂ ಲೇಸರ್ ಲೈಟ್‌ಗಳ ಬಳಸಿ ಸಂಭ್ರಮಿಸುವಂತೆ ಪವಿತ್ರ ಗ್ರಂಥ ಕುರಾನ್‌ನಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ಅರ್ಜಿದಾರರು ಹೇಳಿದ್ದರು.

ಗಣೇಶ ಹಬ್ಬದ ಆರಂಭಕ್ಕೂ ಒಂದು ತಿಂಗಳ ಮೊದಲು ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಉಲ್ಲೇಖಿಸಿದ ಪೀಠವು, ಹಬ್ಬದ ಸಂದರ್ಭಗಳಲ್ಲಿ ಅನುಮತಿಸಿದ ಮಿತಿಯನ್ನು ಮೀರಿದ ಧ್ವನಿವರ್ಧಕಗಳ ಬಳಕೆಯನ್ನು ಶಬ್ದ ಮಾಲಿನ್ಯದ ಕಾಯ್ದೆ 2000 ಅಡಿಯಲ್ಲಿ ನಿಷೇಧಿಸುವುದನ್ನು ಒತ್ತಿ ಹೇಳಿತು.

ಅರ್ಜಿದಾರರ ಪರ ವಕೀಲ ಓವೈಸಿ ಪೆಚ್ಕಾರ್ ಅವರು, ಈ ಆದೇಶಕ್ಕೆ ‘ಈದ್‌’ ಅನ್ನೂ ಸೇರಿಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘‘ಸಾರ್ವಜನಿಕ ಹಬ್ಬಗಳು’ ಎಂದು ಆದೇಶದಲ್ಲಿ ಹೇಳಿರುವಾಗ ಅದರಲ್ಲಿ ಈದ್ ಕೂಡಾ ಸೇರುತ್ತದೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವುದಾದರೆ, ಅದು ಈದ್‌ ಸಂದರ್ಭದಲ್ಲಿಯೂ ತೊಂದರೆಯೇ ಆಗುತ್ತದೆ’ ಎಂದು ಅರ್ಜಿಯನ್ನು ಇತ್ಯರ್ಥಗೊಳಿಸಿತು.

ಲೇಸರ್‌ ಲೈಟ್‌ನಿಂದ ಮನುಷ್ಯರಿಗೆ ಹಾನಿಯಾಗುತ್ತದೆ ಎಂಬ ವಾದಕ್ಕೆ ವೈಜ್ಞಾನಿಕ ಪುರಾವೆಗಳನ್ನು ನೀಡುವಂತೆ ಅರ್ಜಿದಾರರಿಗೆ ಪೀಠ ಹೇಳಿತು. ಇಂಥ ಅರ್ಜಿಗಳನ್ನು ಸಲ್ಲಿಸುವ ಮೊದಲು ಸರಿಯಾದ ಸಂಶೋಧನೆ ನಡೆಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT