ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಐಎಂಗಳ ಸ್ವಾಯತ್ತತೆ ದುರ್ಬಲಕ್ಕೆ ಯತ್ನ: ಆರೋಪ

Published 30 ಜುಲೈ 2023, 14:36 IST
Last Updated 30 ಜುಲೈ 2023, 14:36 IST
ಅಕ್ಷರ ಗಾತ್ರ

ನವದೆಹಲಿ : ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿರುವ ಭಾರತೀಯ ನಿರ್ವಹಣಾ ಸಂಸ್ಥೆಗಳ (ಐಐಎಂ) ತಿದ್ದುಪಡಿ ಮಸೂದೆಯ ಹಿಂದೆ ದೇಶದ ಪ್ರತಿಷ್ಠಿತ ‘ಬಿ–ಸ್ಕೂಲ್‌’ಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಹುನ್ನಾರ ಅಡಗಿದೆ ಎಂಬ ಆರೋಪ ಕೇಳಿಬಂದಿದೆ.

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಕೇಂದ್ರವು, ಕಳೆದ ಶುಕ್ರವಾರ ಈ ಮಸೂದೆ ಮಂಡಿಸಿದೆ. 

ಮಸೂದೆ ಅನ್ವಯ ಐಐಎಂಗಳಿಗೆ ರಾಷ್ಟ್ರಪತಿ ಅವರು ಸಂದರ್ಶಕರಾಗಲಿದ್ದಾರೆ. ಸಂಸ್ಥೆಗಳ ಕಾರ್ಯ ನಿರ್ವಹಣೆ, ತನಿಖೆ, ನಿರ್ದೇಶಕರ ನೇಮಕ ಮತ್ತು ಹುದ್ದೆಯಿಂದ ಅವರನ್ನು ಪದಚ್ಯುತಿಗೊಳಿಸುವ ಸಂಪೂರ್ಣ ಅಧಿಕಾರವು ರಾಷ್ಟ್ರಪತಿ ಅವರಿಗೆ ಇರಲಿದೆ.

ಕೇಂದ್ರದ ಈ ನಡೆಯನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್‌, ‘ಐಐಎಂ ಕಾಯ್ದೆ 2017ರ ತಿದ್ದುಪಡಿ ಮೂಲಕ ಸಂಸ್ಥೆಗಳ ಮೇಲೆ ಬಿಗಿ ಹಿಡಿತ ಸಾಧಿಸಲು ಪ್ರಧಾನಿ ಕಚೇರಿಯು ಹವಣಿಸುತ್ತಿದೆ. ಜೊತೆಗೆ, ಬಿಜೆಪಿಯ ಸೈದ್ಧಾಂತಿಕ ನಿಲುವುಗಳನ್ನು ಹೇರುವ ಷಡ್ಯಂತ್ರವೂ ಅಡಗಿದೆ. ‘ಬಿ–ಸ್ಕೂಲ್‌’ಗಳಿಗೆ ಹೊಣೆಗಾರಿಕೆ ನಿಗದಿಗೊಳಿಸಿ, ಸ್ವಾಯತ್ತ ಅಧಿಕಾರವನ್ನು ಮೊಟಕುಗೊಳಿಸುವ ದುರುದ್ದೇಶ ಹೊಂದಲಾಗಿದೆ ಎಂದಿದೆ.

‘ಆರು ವರ್ಷಗಳ ಹಿಂದೆ ಐಐಎಂಗಳಿಗೆ ಸ್ವಾಯತ್ತ ಸ್ಥಾನಮಾನ ನೀಡುವುದಕ್ಕೆ ಸಂಸತ್‌ ಅನುಮೋದನೆ ನೀಡಿತ್ತು. ಈಗ ಮೋದಿ ಸರ್ಕಾರವು ಕಾಯ್ದೆಯನ್ನು ಬಲಹೀನಗೊಳಿಸಲು ಮುಂದಾಗಿದೆ. ಸ್ವಾಯತ್ತತೆ ಎಂಬುದು ಸರ್ಕಾರದ ಪಾಲಿಗೆ ಅನಪೇಕ್ಷಿತವಾಗಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಆ‍ಪಾದಿಸಿದ್ದಾರೆ.

ಐಐಎಂ (ತಿದ್ದುಪಡಿ) ಮಸೂದೆ 2023ರ ಅನ್ವಯ ರಾಷ್ಟ್ರಪತಿ ಅವರು ಈ ಸಂಸ್ಥೆಗಳ ಪ್ರಗತಿಯ ಸಮೀಕ್ಷೆಗೆ ಒಬ್ಬರು ಅಥವಾ ಹಲವು ಸದಸ್ಯರನ್ನು ನೇಮಿಸುವ ಅಧಿಕಾರ ಹೊಂದಿರುತ್ತಾರೆ. ಈ ಸದಸ್ಯರು ಅಲ್ಲಿನ ವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ನೇರವಾಗಿ ರಾಷ್ಟ್ರಪತಿ ಅವರಿಗೆ ವರದಿ ಸಲ್ಲಿಸಬಹುದು. 

‘ಸಂಸ್ಥೆಗಳಿಗೆ ಹೊಣೆಗಾರಿಕೆ ನಿಗಪಡಿಸುವುದಕ್ಕೆ ಹಲವು ಮಾರ್ಗಗಳಿವೆ. ಆದರೆ, ಮಸೂದೆ ಮೂಲಕ ಸ್ವಾಯತ್ತತೆಯ ಮೇಲೆ ನೇರ ದಾಳಿ ನಡೆಸಲಾಗುತ್ತಿದೆ. ‘ಬಿ–ಸ್ಕೂಲ್‌’ಗಳ ಸ್ವತಂತ್ರ  ಮಂಡಳಿಯ ಅಧಿಕಾರ ಮತ್ತು ಕಾರ್ಯ ನಿರ್ವಹಣೆಯು ಜಾಗತಿಕ ಮಾದರಿಯಾಗಿದೆ. ಎಲ್ಲಿ ಬೇಕಾದರೂ ಯಶಸ್ವಿಯಾಗುವ ಇದು ಭಾರತದಲ್ಲಿಯೂ ಕಾರ್ಯಸಾಧುವಾಗಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಐಐಎಂ ನಿರ್ದೇಶಕರೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT