ಗುವಾಹಟಿ: ಐಐಟಿ ಗುವಾಹಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ವಿದ್ಯಾರ್ಥಿಯ ಮೃತದೇಹವು ಹಾಸ್ಟೆಲ್ ಕೋಣೆಯಲ್ಲಿ ಸೋಮವಾರ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
21 ವರ್ಷದ ವಿದ್ಯಾರ್ಥಿಯು ಉತ್ತರ ಪ್ರದೇಶದ ಬಲ್ಲಿಯಾ ಮೂಲದವರಾಗಿದ್ದಾರೆ.
ಹಾಸ್ಟೆಲ್‌ನ ಕೋಣೆಯಲ್ಲಿ ವಿದ್ಯಾರ್ಥಿ ಒಬ್ಬರೇ ಇದ್ದರು. ಸೋಮವಾರ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಆತ್ಮಹತ್ಯೆ ಎಂದು ಶಂಕಿಸಲಾಗಿದೆ; ವರದಿಯು ಅದನ್ನು ದೃಢಪಡಿಸಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ, ಐಐಟಿ ಗುವಾಹಟಿಯಲ್ಲಿ ಉತ್ತರ ಪ್ರದೇಶ ಮೂಲದ ಎಂ.ಟೆಕ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸೋಮವಾರದ ಘಟನೆ ಬೆನ್ನಲ್ಲೇ ಐಐಟಿಯು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ‘ವಿದ್ಯಾರ್ಥಿಗಳ ಒಳಿತೇ ನಮ್ಮ ಆದ್ಯತೆ. ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳನ್ನು ಪತ್ತೆ ಮಾಡಿ ಅವರಿಗೆ ನೆರವು ನೀಡಲು ಬದ್ಧರಾಗಿದ್ದೇವೆ’ ಎಂದು ಹೇಳಿದೆ.