ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋನಿಯಾ ಲೇಖನ ಭ್ರಮೆಯಿಂದ ಕೂಡಿದೆ: ಬಿಜೆಪಿ ಟೀಕೆ

Last Updated 11 ಏಪ್ರಿಲ್ 2023, 14:33 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನವು ಅಸಂಬದ್ಧವಾಗಿದೆ. ಅವರ ಹೇಳಿಕೆಯು ಭ್ರಮೆಯಿಂದ ಕೂಡಿದೆ. ಅದು ಮೋದಿ ವಿರುದ್ಧದ ದ್ವೇಷಕ್ಕೆ ಹಿಡಿದ ಕೈಗನ್ನಡಿಯಂತಿದೆ’ ಎಂದು ಬಿಜೆಪಿ ಮಂಗಳವಾರ ಟೀಕಿಸಿದೆ.

‘ದಿ ಹಿಂದೂ’ ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಪ್ರಜಾಪ್ರಭುತ್ವ ಮತ್ತು ವಿವಿಧ ಸಂಸ್ಥೆಗಳ ಸ್ವಾತಂತ್ರ್ಯದ ಕುರಿತು ಬರೆದಿರುವ ಸೋನಿಯಾ ಅವರು ನರೇಂದ್ರ ಮೋದಿ ಸರ್ಕಾರವು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದ್ದಾರೆ.

‘ಪ್ರಧಾನಿ ಮೋದಿ ಹಾಗೂ ಅವರ ನೇತೃತ್ವದ ಸರ್ಕಾರವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ವ್ಯವಸ್ಥಿತವಾಗಿ ನಾಶಗೊಳಿಸುತ್ತಿದೆ. ‍ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅವರಲ್ಲಿ ತಿರಸ್ಕಾರ ಭಾವ ಗಾಢವಾಗಿ ಬೇರೂರಿದೆ. ಅದು ಅವರ ಕೆಲಸಗಳಲ್ಲಿ ಎದ್ದು ಕಾಣುತ್ತಿದೆ’ ಎಂದೂ ಆರೋಪಿಸಿದ್ದಾರೆ.

‘ಸೋನಿಯಾ ಅವರು ಪ್ರಜಾಪ್ರಭುತ್ವದ ಕುರಿತು ಉಪನ್ಯಾಸ ನೀಡುತ್ತಿದ್ದಾರೆಯೇ? ಕಾಂಗ್ರೆಸ್‌ ಪಕ್ಷವು ನ್ಯಾಯಾಂಗದ ಸ್ವಾತಂತ್ರ್ಯದ ಕುರಿತು ಮಾತನಾಡುತ್ತಿದೆಯೇ. ಇದು ಭ್ರಮೆಯ ಹೇಳಿಕೆ’ ಎಂದು ಕಾನೂನು ಸಚಿವ ಕಿರಣ್‌ ರಿಜಿಜು ಟ್ವೀಟ್‌ ಮಾಡಿದ್ದಾರೆ.

‘ದಾರಿ ತಪ್ಪಿರುವುದು ಕಾಂಗ್ರೆಸ್‌ ಪಕ್ಷವೇ ಹೊರತು ಈ ದೇಶವಲ್ಲ. ಈ ದೇಶದ ಅತಿ ಹಳೆಯ ಪಕ್ಷವು ರಾಜಕೀಯ ಬಿಕ್ಕಟ್ಟಿನ ಅಂಚಿನಲ್ಲಿದೆ. ಮುಂಬರುವ ದಿನಗಳು ಆ ಪಕ್ಷದ ಪಾಲಿಗೆ ನಿರ್ಣಾಯಕವೆನಿಸಿವೆ’ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT