ನವದೆಹಲಿ: ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆ ಕೇರಳದ ವಯನಾಡ್ ಜಿಲ್ಲೆಯ ಕೆಲವು ಪ್ರದೇಶಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.
ಇಂದು(ಬುಧವಾರ) ಕಣ್ಣೂರು, ಎರ್ನಾಕುಲಂ, ತ್ರಿಶೂರ್, ನಾಳೆ(ಗುರುವಾರ) ಕೋಯಿಕ್ಕೋಡ್ ಮತ್ತು ವಯನಾಡಿನ ಒಂದು ಅಥವಾ ಎರಡು ಪ್ರದೇಶದಲ್ಲಿ ಹೆಚ್ಚು ಮಳೆಯಿಂದ (24 ಗಂಟೆಯಲ್ಲಿ 7 ಸೆಂ.ಮೀನಿಂದ 11 ಸೆಂ.ಮೀ) ಅತಿ ಹೆಚ್ಚು( 24 ಗಂಟೆಯಲ್ಲಿ 12 ಸೆಂ.ಮೀನಿಂದ 20 ಸೆಂ.ಮೀ) ಮಳೆಯಾಗುವ ಸಂಭವವಿದೆ ಎಂದು ಐಎಂಡಿ ತಿಳಿಸಿದೆ.
ಲಕ್ಷದ್ವೀಪಕ್ಕೂ ‘ರೆಡ್ ಅಲರ್ಟ್’ ಘೋಷಿಸಿರುವ ಐಎಂಡಿ, ಇಂದು ಭಾರಿ ಮಳೆಯಾಗುವ(24 ಗಂಟೆಯಲ್ಲಿ 20 ಸೆಂ.ಮೀಗಳಿಗಿಂತಲೂ ಹೆಚ್ಚು) ಎಚ್ಚರಿಕೆ ನೀಡಿದೆ.
ವಯನಾಡಿನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತಕ್ಕೆ ಹವಾಮಾನ ಬದಲಾವಣೆಯಿಂದ ಸುರಿದ ಶೇ 10ಕ್ಕಿಂತ ಅಧಿಕ ಮಳೆಯೇ ಕಾರಣ ಎಂದು ಜಾಗತಿಕ ವಿಜ್ಞಾನಿಗಳ ತಂಡ ತಿಳಿಸಿದೆ. ತಾಪಮಾನ ಏರಿಕೆಯಿಂದ ಇಂತಹ ಮತ್ತಷ್ಟು ಅಪಾಯಗಳು ಸಂಭವಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಭಾರಿ ಮಳೆ ಜೊತೆಗೆ ಅರಣ್ಯ ನಾಶ, ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ ಮಾಡಿರುವುದು ಭೂಕುಸಿತಕ್ಕೆ ಕಾರಣ ಎಂಬುವುದನ್ನು ಅಧ್ಯಯನಗಳು ತಿಳಿಸಿವೆ.
ಭಾರಿ ಮಳೆಯಾಗುವ ಬಗ್ಗೆ ಮುನ್ಸೂಚನೆ ಕೊಡುವಲ್ಲಿ ಐಎಂಡಿ ವಿಫಲವಾಗಿತ್ತು ಎಂದು ಕೇರಳ ಸರ್ಕಾರ ಈ ಹಿಂದೆ ಆರೋಪಿಸಿತ್ತು. ಈ ಆರೋಪವನ್ನು ತಳ್ಳಿಹಾಕಿರುವ ಐಎಂಡಿ ಮುಖ್ಯಸ್ಥ ಮೃತ್ಯುಂಜಯ ಮಹಾಪಾತ್ರ, ಎಲ್ಲ ರೀತಿಯ ಮುನ್ನೆಚ್ಚರಿಕೆ ನೀಡಲಾಗಿತ್ತು ಎಂದು ಹೇಳಿದ್ದರು.
ಜುಲೈ 30ರಂದು ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಸುಮಾರು 231 ಜನರು ಮೃತಪಟ್ಟಿದ್ದರು. 130ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.