ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂ: ಇಬ್ಬರು ಶಾಸಕರು ಬಿಜೆಪಿಯತ್ತ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಸ್ಸಾಂ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು
Published : 14 ಫೆಬ್ರುವರಿ 2024, 16:24 IST
Last Updated : 14 ಫೆಬ್ರುವರಿ 2024, 16:24 IST
ಫಾಲೋ ಮಾಡಿ
Comments

ಗುವಾಹಟಿ: ಅಸ್ಸಾಂನ ಇಬ್ಬರು ಕಾಂಗ್ರೆಸ್‌ ಶಾಸಕರು ಬುಧವಾರ ಇಲ್ಲಿನ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಗೂ ಮುನ್ನ ಅಸ್ಸಾಂನ ವಿರೋಧ ಪಕ್ಷ ಕಾಂಗ್ರೆಸ್‌ನಲ್ಲಿ ಮತ್ತೊಂದು ಬಿಕ್ಕಟ್ಟು ಎದುರಾಗಿದೆ.

ಬಂಗಾಳಿ ಪ್ರಾಬಲ್ಯದ ಬರಾಕ್‌ ಕಣಿವೆಯ ಪ್ರಮುಖ ನಾಯಕ, ಶಾಸಕ ಕಮಲಾಖ್ಯ ದೇ ಪುರ್ಕಾಯಸ್ಥ ಅವರು ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಮಾಜಿ ಸಚಿವರೂ ಆದ ಬಸಂತ ದಾಸ್‌ ಅವರೊಂದಿಗೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದಾರೆ. ಅಲ್ಲದೆ ವಿಧಾನಸಭೆ ಆವರಣದಲ್ಲಿ ಇತರ ಬಿಜೆಪಿ ಶಾಸಕರೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ.

ಕರೀಂಗಂಜ್‌ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಕಮಲಾಖ್ಯ ಅವರು ಸುದ್ದಿಗಾರರ ಜತೆ ಮಾತನಾಡಿ, ‘ಸದ್ಯ ನಾನು ಕಾಂಗ್ರೆಸ್‌ ಸದಸ್ಯನಾಗಿಯೇ ಇದ್ದೇನೆ. ನನಗೆ ಮುಖ್ಯಮಂತ್ರಿ ಅವರಿಂದ ಆಹ್ವಾನ ಬಂದಿದ್ದು, ಅದನ್ನು ಸ್ವೀಕರಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ತರುಣ್‌ ಗೊಗೊಯ್‌ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಶರ್ಮ ಅವರು ಸಚಿವರಾಗಿದ್ದಾಗ, ಈ ಇಬ್ಬರು ಶಾಸಕರು ಅವರ ನಿಕಟವರ್ತಿಯಾಗಿದ್ದರು. ಹೀಗಾಗಿ ಅವರಿಬ್ಬರು ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಈ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‌ ರಾಜ್ಯ ಸಮಿತಿ ಅಧ್ಯಕ್ಷ ಭೂಪೇನ್‌ ಕುಮಾರ್‌ ಬೋರಾಹ್‌ ಅವರು, ‘ಈ ಇಬ್ಬರು ಶಾಸಕರ ವಿಡಿಯೊ ತುಣಕನ್ನು ಎಐಸಿಸಿಯ ಅಸ್ಸಾಂ ಉಸ್ತುವಾರಿ ಜಿತೇಂದ್ರ ಸಿಂಗ್‌ ಅವರಿಗೆ ಕಳುಹಿಸಿದ್ದೇನೆ. ಹೈಕಮಾಂಡ್‌ನಿಂದ ಬರುವ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ’ ಎಂದು ಸುದ್ದಿಗಾರರಿಗೆ ಹೇಳಿದರು.

ಮಾಜಿ ಸಚಿವರಾದ ಬಿಶ್ಮಿತಾ ಗೊಗೊಯ್‌ ಮತ್ತು ಕಾಂಗ್ರೆಸ್‌ ಯುವ ಘಟಕದ ಮಾಜಿ ಅಧ್ಯಕ್ಷರಾದ ಅಂಗಿತಾ ದತ್ತಾ ಅವರು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು. ಅದರ ಬೆನ್ನಲ್ಲೇ ಈ ಇಬ್ಬರು ಶಾಸಕರು ಬಿಜೆಪಿಯತ್ತ ವಾಲಿದ್ದಾರೆ.

ಅಸ್ಸಾಂನ 14 ಲೋಕಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವುದಾಗಿ ಕಾಂಗ್ರೆಸ್‌ ಮಂಗಳವಾರವಷ್ಟೇ ತಿಳಿಸಿದೆ.

‘ಗೌರವ್ ಗೊಗೊಯ್‌ ಅವರನ್ನು ಹೊರತುಪಡಿಸಿ ಅಸ್ಸಾಂನ ಬಹುತೇಕ ನಾಯಕರು ಸಿ.ಎಂ ಶರ್ಮ ಕೃಪೆಯಲ್ಲಿ ಇದ್ದಾರೆ. ಹೀಗಾಗಿ ಕಾಂಗ್ರೆಸ್‌ ಮಿಯಾಗಳ (ವಲಸಿಗ ಮುಸ್ಲಿಮರು) ಪಕ್ಷವಾಗಿಯಷ್ಟೇ ಉಳಿಯುತ್ತದೆ’ ಎಂದು ಕಾಂಗ್ರೆಸ್‌ ಶಾಸಕ ಶೆರ್ಮನ್‌ ಅಲಿ ಬೇಸರ ವ್ಯಕ್ತಪಡಿಸಿದ್ದಾರೆ. 

‘ಒಬ್ಬರು ಅಥವಾ ಇಬ್ಬರನ್ನು ಹೊರತುಪಡಿಸಿ ಕಾಂಗ್ರೆಸ್‌ನ ಎಲ್ಲ ನಾಯಕರೂ ನೇರ ಅಥವಾ ಪರೋಕ್ಷವಾಗಿ ನನ್ನ ನೇತೃತ್ವದ ಸರ್ಕಾರವನ್ನು ಬೆಂಬಲಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಅವರು ಈ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ಮುಖ್ಯಮಂತ್ರಿ ಶರ್ಮ ಹೇಳಿದ್ದಾರೆ. 

‘ಮುಖ್ಯಮಂತ್ರಿ ಅವರು ಇ.ಡಿ ಮತ್ತು ಆದಾಯ ತೆರಿಗೆ ಇಲಾಖೆಗಳ ಮೂಲಕ ಹೆದರಿಸಿ ಕಾಂಗ್ರೆಸ್‌ ನಾಯಕರನ್ನು ಬೆಜೆಪಿ ಸೇರುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ದೇಬಬ್ರತ ಸೈಕಿಯಾ ದೂರಿದ್ದಾರೆ. ಒಟ್ಟು 126 ಸದಸ್ಯರ ಅಸ್ಸಾಂ ವಿಧಾನಸಭೆಯಲ್ಲಿ ಕಾಂಗ್ರೆಸ್‌ 27 ಶಾಸಕರನ್ನು ಹೊಂದಿದ್ದು, ಆ ಪೈಕಿ 16 ಮಂದಿ ಮುಸ್ಲಿಮರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT