ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ಗೆ ಸೀಟು: ಎಎಪಿ ಮೃದು? ಕಾಂಗ್ರೆಸ್‌, ಎಎ‍ಪಿ ಬಿಕ್ಕಟ್ಟು ಶಮನವಾಯಿತೇ?

ಲೋಕಸಭಾ ಚುನಾವಣೆ: ದೆಹಲಿಯಲ್ಲಿ ’ಕೈ’ಗೆ ಒಂದೇ ಸ್ಥಾನ ನೀಡಲಷ್ಟೇ ಕೇಜ್ರಿವಾಲ್‌ ಸಿದ್ಧ
ಶಮಿನ್ ಜಾಯ್
Published 18 ಫೆಬ್ರುವರಿ 2024, 20:34 IST
Last Updated 18 ಫೆಬ್ರುವರಿ 2024, 20:34 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದ ಮಾತುಕತೆ ವಿಚಾರವಾಗಿ ನಿರ್ಮಾಣವಾಗಿರುವ ಬಿಕ್ಕಟ್ಟನ್ನು ನಿವಾರಿಸಿಕೊಳ್ಳುವತ್ತ ಕಾಂಗ್ರೆಸ್ ಮತ್ತು ಎಎಪಿ ಮುಂದಡಿ ಇರಿಸಿವೆ. ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ದೆಹಲಿಯಲ್ಲಿ ತಾನು ಒಂದು ಕ್ಷೇತ್ರವನ್ನು ಮಾತ್ರವೇ ಕಾಂಗ್ರೆಸ್ಸಿಗೆ ಬಿಟ್ಟುಕೊಡಲು ಸಾಧ್ಯ ಎಂದು ಎಎಪಿ ಹೇಳಿದೆ.

ಕಾಂಗ್ರೆಸ್ ಮುಖಂಡ, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಕೇಜ್ರಿವಾಲ್ ಮತ್ತು ಖರ್ಗೆ ಅವರು ಭಾಗಿಯಾಗಿದ್ದರು.

ಕಾಂಗ್ರೆಸ್ಸಿಗೆ ಈಗ ಪರಿಸ್ಥಿತಿ ತೀರಾ ಅನುಕೂಲಕರವಾಗಿ ಇಲ್ಲ. ಪಕ್ಷದ ಮುಖಂಡ ಕಮಲ್ ನಾಥ್ ಅವರ ಮುಂದಿನ ನಡೆ ಏನಿರುತ್ತದೆ ಎಂಬುದನ್ನು ಕಾಂಗ್ರೆಸ್ ಕಾದು ನೋಡುತ್ತಿದೆ. ನಾಥ್ ಅವರು ಬಿಜೆಪಿ ಸೇರಲಿದ್ದಾರೆ ಎಂಬ ವರದಿಗಳು ಇವೆ. ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಹಾಗೂ ಮಧ್ಯಪ್ರದೇಶದ ಉಸ್ತುವಾರಿ ಜಿತೇಂದ್ರ ಸಿಂಗ್ ಅವರು ನಾಥ್ ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಆದರೆ, ನಾಥ್ ಅವರು ತಮ್ಮ ನಡೆಯ ಬಗ್ಗೆ ಗುಟ್ಟು ಬಿಟ್ಟುಕೊಡುತ್ತಿಲ್ಲ ಎಂದು ಮೂಲಗಳು ಹೇಳಿವೆ.

ಸುದ್ದಿಗಾರರ ಜೊತೆ ಮಾತನಾಡಿದ ಸಜ್ಜನ್ ಸಿಂಗ್ ವರ್ಮ ಅವರು, ‘ತಮ್ಮ ಗಮನವು ಈಗ ಲೋಕಸಭಾ ಚುನಾವಣೆಯ ಮೇಲೆ ಇದೆ. ಜಾತಿ ಸಮೀಕರಣದ ಮೇಲೆ ಗಮನ ಹರಿಸಿರುವುದಾಗಿ ಕಮಲ್ ನಾಥ್ ನನ್ನಲ್ಲಿ ಹೇಳಿದ್ದಾರೆ. ಅಲ್ಲದೆ, ಪಕ್ಷ ಬಿಡುವ ಆಲೋಚನೆಯನ್ನು ಮಾಡಿಲ್ಲ ಎಂದು ಕೂಡ ಅವರು ಹೇಳಿದ್ದಾರೆ’ ಎಂದು ತಿಳಿಸಿದರು. ವರ್ಮ ಅವರು ಕಮಲ್ ನಾಥ್ ಅವರ ಆಪ್ತ.

ಕಾಂಗ್ರೆಸ್ ಮುಖಂಡ, ಸಂಸದ ಮನೀಶ್ ತಿವಾರಿ ಹಾಗೂ ಮುಖಂಡ ನವಜೋತ್ ಸಿಂಗ್ ಸಿಧು ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ವರದಿಗಳು ಪಕ್ಷದಲ್ಲಿ ಆತಂಕ ಮೂಡಿಸಿದವು. ಆದರೆ ತಿವಾರಿ ಅವರು ತಾವು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿ ಈಚೆಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದಲ್ಲಿ ಮಾಡಿದ ಭಾಷಣಗಳನ್ನು ‘ಎಕ್ಸ್’ ಖಾತೆಯ‌ಲ್ಲಿ ಹಂಚಿಕೊಂಡಿದ್ದಾರೆ.

ದೆಹಲಿಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯುವ ಬಯಕೆಯು ಕಾಂಗ್ರೆಸ್ಸಿಗೆ ಇದೆ. ಅಲ್ಲಿ ಒಂದು ಸ್ಥಾನವನ್ನು ಮಾತ್ರ ಕಾಂಗ್ರೆಸ್ಸಿಗೆ ಬಿಟ್ಟುಕೊಡಲು ಸಾಧ್ಯ ಎಂದು ಎಎಪಿ ಹೇಳಿರುವುದು ಒತ್ತಡ ತರುವ ತಂತ್ರ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಎಎಪಿ ಪ್ರತ್ಯೇಕವಾಗಿ, ಚುನಾವಣೆ ಮೈತ್ರಿ ಇಲ್ಲದೆ ಸ್ಪರ್ಧಿಸಬೇಕು ಎಂಬ ತೀರ್ಮಾನವನ್ನು ಎರಡೂ ಪಕ್ಷಗಳು ಒಟ್ಟಾಗಿ ತೆಗೆದುಕೊಂಡಿವೆ. ಇಲ್ಲಿ ಪಕ್ಷಗಳ ನಡುವೆ ಭಿನ್ನಮತವೇನೂ ಇಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಹರಿಯಾಣದಲ್ಲಿ ಎಎಪಿ ಒಂದಿಷ್ಟು ಸ್ಥಾನಗಳನ್ನು ಕೇಳಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಜೆಡಿ (ಯು) ಮತ್ತು ಆರ್‌ಎಲ್‌ಡಿ ‘ಇಂಡಿಯಾ’ ಮೈತ್ರಿಕೂಟವನ್ನು ತೊರೆದಿರುವ ಬಗ್ಗೆ ಕೇಳಿದ ಪ್ರಶ್ನೆ ಖರ್ಗೆ ಅವರು, ‘ತೊರೆಯಬೇಕು ಎಂದು ತೀರ್ಮಾನ ಮಾಡಿರುವವರು ತೊರೆಯುತ್ತಾರೆ. ಕೇಜ್ರಿವಾಲ್ ಅವರು ನನ್ನ ಪಕ್ಕದಲ್ಲಿ ಕುಳಿತಿದ್ದಾರೆ. ಅವರು ಹತ್ತಿರದಲ್ಲಿದ್ದಾರೆ, ಹತ್ತಿರವಾಗಿಯೇ ಇರಲಿದ್ದಾರೆ’ ಎಂದು ಉತ್ತರಿಸಿದರು. ಕಮಲ್ ನಾಥ್ ಅವರು ಪಕ್ಷ ತೊರೆಯುತ್ತಾರೆ ಎಂಬ ವರದಿಗಳ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಲು ಖರ್ಗೆ ನಿರಾಕರಿಸಿದರು.

ಜೆಎಂಎಂ ನಾಯಕ ಹಾಗೂ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್ ಅವರ ಜೊತೆ ಖರ್ಗೆ ಅವರು ಸಭೆ ನಡೆಸಿದರು. ‘ನಾವು ಒಟ್ಟಾಗಿ ಕೆಲಸ ಮಾಡಬೇಕಿದೆ. ಮೋದಿ ನೇತೃತ್ವದ ಸರ್ಕಾರದ ಸಂವಿಧಾನ ವಿರೋಧಿ, ಪ್ರಜಾತಂತ್ರ ವಿರೋಧಿ ಕ್ರಮವನ್ನು ವಿರೋಧಿಸುವ ಧೈರ್ಯ ಇರುವ ಕೆಲವೇ ಮಂದಿ ಉಳಿದಿದ್ದಾರೆ’ ಎಂದು ಖರ್ಗೆ ಸಭೆಯ ನಂತರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT