ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls 2024 | ಮೀಸಲಾತಿ ವಿರೋಧಿಸಿದ್ದ ನೆಹರೂ: ಪ್ರಧಾನಿ ಮೋದಿ ವಾಗ್ದಾಳಿ

Published 21 ಮೇ 2024, 15:37 IST
Last Updated 21 ಮೇ 2024, 15:37 IST
ಅಕ್ಷರ ಗಾತ್ರ

ಮಹಾರಾಜ್‌ಗಂಜ್/ ಮೋತಿಹಾರಿ (ಪಿಟಿಐ): ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಸೇರಿದಂತೆ ಕಾಂಗ್ರೆಸ್‌ನ ಉನ್ನತ ನಾಯಕರು ಶೋಷಿತ ವರ್ಗಗಳಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿದ್ದರು ಎಂಬ ಹೊಸ ಆರೋಪದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಬಿಹಾರದ ಪೂರ್ವ ಚಂಪರಣ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೋತಿಹಾರಿಯಲ್ಲಿ ಮಂಗಳವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲದೇ ಇರುತ್ತಿದ್ದರೆ ನೆಹರೂ ಅವರು ಎಂದಿಗೂ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾತಿ ನೀಡುವುದನ್ನು ಒಪ್ಪುತ್ತಿರಲಿಲ್ಲ. ನೆಹರೂ ಅವರು ದೇಶದ ಅಂದಿನ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಈ ವಿಷಯದ ಕುರಿತ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದರು’ ಎಂದು ಹೇಳಿದ್ದಾರೆ.

‘ನೆಹರೂ ಬಳಿಕ ದೇಶದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್‌ನ ಎಲ್ಲ ಪ್ರಧಾನಿಗಳ ಅಭಿಪ್ರಾಯವೂ ಇದೇ ಆಗಿತ್ತು. ಇಂದಿರಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಸೇರಿದಂತೆ ಎಲ್ಲರೂ ಮೀಸಲಾತಿಯನ್ನು ವಿರೋಧಿಸಿದ್ದರು. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳು ಕಾಂಗ್ರೆಸ್‌ನಿಂದ ಎಂದಿಗೂ ಗೌರವ ಪಡೆದಿಲ್ಲ’ ಎಂದಿದ್ದಾರೆ. 

‘ಇಂಡಿಯಾ’ ಕೂಟ ಕೋಮುವಾದಿ: ‘ಇಂಡಿಯಾ’ ಮೈತ್ರಿಕೂಟವು ಕೋಮುವಾದಿ ಮತ್ತು ಜಾತಿವಾದಿ ಆಗಿದ್ದು, ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುತ್ತಿದೆ. ಭ್ರಷ್ಟಾಚಾರ, ಓಲೈಕೆ ರಾಜಕಾರಣ ಮತ್ತು ‘ಸನಾತನ ವಿರೋಧಿಯಂತಹ ವಿಕೃತ ಮನಃಸ್ಥಿತಿ’ ಹೊಂದಿರುವ ವಿಪಕ್ಷಗಳು ಈ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಲಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರ ಹೆಸರು ಪ್ರಸ್ತಾಪಿಸದೆಯೇ ಪ್ರಧಾನಿ ದೂರಿದರು. 

‘ಲೋಕಸಭಾ ಚುನಾವಣೆ ಬಳಿಕ ನಾನು ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದೇನೆ ಎಂದು ‘ಜಂಗಲ್‌ ರಾಜ್‌ನ ವಾರಸುದಾರ’ (ತೇಜಸ್ವಿ ಯಾದವ್) ಹೇಳುತ್ತಾರೆ. ಜೂನ್‌ 4ರ ಫಲಿತಾಂಶದ ಬಳಿಕ ನಾನು ಕಣ್ಣೀರು ಸುರಿಸುವುದನ್ನು ನೋಡಬೇಕು ಎಂದು ಕಾಂಗ್ರೆಸ್‌ನ ಶಹಜಾದ (ರಾಹುಲ್‌ ಗಾಂಧಿ) ಹೇಳುವರು. ಮೋದಿ ಅವರ ಸಮಾಧಿಯನ್ನು ಅಗೆಯಲಾಗುವುದು ಎಂಬ ಘೋಷಣೆಯನ್ನು ಅವರ ಪಕ್ಷದವರು ಬಹಿರಂಗವಾಗಿ ಕೂಗುತ್ತಿದ್ದಾರೆ’ ಎಂದು ಟೀಕಿಸಿದರು.

‘ಈ ವ್ಯಕ್ತಿಗಳ ಪ್ರತಿರೂಪವೊಂದು (ಅಖಿಲೇಶ್‌ ಯಾದವ್) ಉತ್ತರ ಪ್ರದೇಶದಲ್ಲಿದೆ. ನನ್ನ ಜೀವನದ ಅಂತ್ಯ ಸಮೀಪಿಸಿರುವ ಕಾರಣ ವಾರಾಣಸಿಯಿಂದ ಸ್ಪರ್ಧಿಸಿದ್ದಾರೆ ಎಂಬ ಹೇಳಿಕೆಯನ್ನು ಅವರು ಕೊಟ್ಟಿದ್ದಾರೆ. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿಗಳ ವಿವೇಕದ ಕೊರತೆಯನ್ನು ಈ ಹೇಳಿಕೆಗಳು ಸೂಚಿಸುತ್ತವೆ’ ಎಂದು ಕಿಡಿಕಾರಿದರು.

‘ಇಂಡಿಯಾ ಕೂಟದ ಪಾಪಕೃತ್ಯಗಳೊಂದಿಗೆ ಈ ದೇಶ ಮುನ್ನಡೆಯಲು ಸಾಧ್ಯವಿಲ್ಲ. ಮೊದಲ ಹಂತದ ಮತದಾನದಲ್ಲೇ ವಿಪಕ್ಷಗಳ ಕೂಟ ದಿಕ್ಕೆಟ್ಟಿತ್ತು. ಬಳಿಕದ ಹಂತಗಳಲ್ಲಿ ತನ್ನ ಎಲ್ಲ ಶಕ್ತಿ ಕಳೆದುಕೊಂಡವು. ಇನ್ನುಳಿದ ಎರಡು ಹಂತಗಳಲ್ಲೂ ಈ ಪ್ರವೃತ್ತಿ ಮುಂದುವರಿಯಲಿದೆ’ ಎಂದರು.

Cut-off box - ‘ಕಾಂಗ್ರೆಸ್‌ಗೆ ಕುಂಭ ಮೇಳ ಬೇಡ’ ಪ್ರಯಾಗ್‌ರಾಜ್ (ಪಿಟಿಐ): ‘ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಓಲೈಕೆ ರಾಜಕಾರಣ ಮಾಡುತ್ತಿದ್ದು ಎರಡೂ ಪಕ್ಷಗಳು ಅಭಿವೃದ್ಧಿಯ ವಿರೋಧಿಗಳು’ ಎಂದು ಪ್ರಧಾನಿ ಟೀಕಿಸಿದರು. ಪ್ರಯಾಗ್‌ರಾಜ್‌ನಲ್ಲಿ ಪ್ರಚಾರ ನಡೆಸಿದ ಅವರು ‘ಕಾಂಗ್ರೆಸ್‌ ಮತ್ತು ಎಸ್‌ಪಿಗೆ ಕುಂಭ ಮೇಳಕ್ಕಿಂತಲೂ ತಮ್ಮ ವೋಟ್‌ ಬ್ಯಾಂಕ್‌ ಮುಖ್ಯವೆನಿಸುತ್ತದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT