ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶಾಂಗ ಸಚಿವ ಜೈಶಂಕರ್ ಮಾಲ್ದೀವ್ಸ್ ಭೇಟಿ; ಮುನಿಸಿಗೆ ವಿರಾಮ, ಚರ್ಚೆಗೆ ಆಹ್ವಾನ

Published 8 ಆಗಸ್ಟ್ 2024, 13:17 IST
Last Updated 8 ಆಗಸ್ಟ್ 2024, 13:17 IST
ಅಕ್ಷರ ಗಾತ್ರ

ನವದೆಹಲಿ: ಭಾರತ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮೂರು ದಿನಗಳ ಮಾಲ್ದೀವ್ಸ್ ಭೇಟಿ ಕೈಗೊಂಡಿದ್ದಾರೆ. ಇದರಿಂದ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಮಾತುಕತೆ ಮತ್ತೆ ಗರಿಗೆದರಿದೆ.

ಇತ್ತೀಚೆಗೆ ಮಾಲ್ದೀವ್ಸ್‌ನ ವಿದೇಶಾಂಗ ಸಚಿವ ಮೂಸಾ ಜಮೀರ್‌ ಅವರು ಭಾರತ ಪ್ರವಾಸ ಕೈಗೊಂಡು ಉಭಯ ರಾಷ್ಟ್ರಗಳ ಬಾಂಧವ್ಯ ಕುರಿತು ಚರ್ಚಿಸಿದ್ದರು. ಇದರ ಬೆನ್ನಲ್ಲೇ ಎಸ್‌. ಜೈಶಂಕರ್ ಅವರು ಶುಕ್ರವಾರದಿಂದ ಭಾನುವಾರದವರೆಗೆ ಮಾಲ್ದೀವ್ಸ್‌ ಪ್ರವಾಸ ಕೈಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆ ನಂತರ ಭಾರತ ಹಾಗೂ ಮಾಲ್ದೀವ್ಸ್‌ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿತ್ತು. ಹೇಳಿಕೆ ನೀಡಿದ ಮೂರು ಸಚಿವರನ್ನು ಮಾಲ್ದೀವ್ಸ್ ವಜಾಗೊಳಿಸಿತ್ತು. ಇದಾದ ಬೆನ್ನಲ್ಲೇ ಮಾಲ್ದೀವ್ಸ್‌ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ದಕ್ಷಿಣ ಏಷ್ಯಾದ ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ಭಾರತ ಕ್ರಮ ಕೈಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರೂ ಭೇಟಿ ನೀಡಿದರು.

ಚೀನಾ ಪರ ಒಲವುಳ್ಳ ಅಲ್ಲಿನ ಅಧ್ಯಕ್ಷ ಮೊಹಮ್ಮದ್‌ ಮುಯಿಝು ಅವರು ಕೆಲವೊಂದು ತೀಕ್ಷ್ಣ ಹೇಳಿಕೆಗಳನ್ನು ನೀಡಿದ್ದರು. ಇದಾದ ನಂತರ ಮಾಲ್ದೀವ್ಸ್‌ನಲ್ಲಿದ್ದ ಭಾರತ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮುಯಿಝು ಅವರು ಮೇ 10ರ ಗಡುವು ನೀಡಿದ್ದರು. ಅದರಂತೆಯೇ ಭಾರತದ ಸೈನಿಕರು ಸ್ವದೇಶಕ್ಕೆ ಮರಳಿದ್ದರು. ಇವು ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದ್ದವು.

ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಮುಯಿಝು ಅವರಿಗೂ ಭಾರತ ಆಹ್ವಾನ ನೀಡಿತ್ತು. ಇದನ್ನು ಸ್ವೀಕರಿಸಿದ್ದ ಮುಯಿಝು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಔತಣಕೂಟದಲ್ಲೂ ಪಾಲ್ಗೊಂಡಿದ್ದರು.

ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರೊಂದಿಗೂ ಮುಯಿಝು ಮಾತುಕತೆ ನಡೆಸಿ, ಉಭಯ ರಾಷ್ಟ್ರಗಳು ಒಗ್ಗೂಡಿ ಕಾರ್ಯನಿರ್ವಹಿಸಲು ಮುಂದೆ ಬಂದಿವೆ ಎಂದಿದ್ದರು. 

ಇದಾದ ನಂತರ ಉಭಯ ರಾಷ್ಟ್ರಗಳ ನಡುವೆ ಹಳಸಿದ್ದ ಸಂಬಂಧವನ್ನು ಸರಿಪಡಿಸುವ ಪ್ರಯತ್ನಕ್ಕೆ ಎರಡೂ ರಾಷ್ಟ್ರಗಳು ಮುಂದಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT