ನವದೆಹಲಿ: ಅನ್ಯಾಯದ ವಿರುದ್ಧದ ಹೋರಾಟದಲ್ಲಿ 'ಇಂಡಿಯಾ' ಮೈತ್ರಿಕೂಟ ಸದಾ ನಿಮ್ಮೊಂದಿಗೆ ಇದೆ ಎಂದು ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂದೇಶ ನೀಡಿದರು.
ಶುಕ್ರವಾರ 56ನೇ ವರ್ಷಕ್ಕೆ ಕಾಲಿಟ್ಟ ಕೇಜ್ರಿವಾಲ್ ಅವರಿಗೆ ರಾಹುಲ್ ಗಾಂಧಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕೇಜ್ರಿವಾಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯ ತಿಳಿಸಿರುವ ರಾಹುಲ್, 'ನೀವು ಕ್ಷೇಮ ಹಾಗೂ ಖುಷಿಯಾಗಿದ್ದೀರಿ' ಎಂದು ನಂಬಿದ್ದೇನೆ ಎಂದು ಬರೆದಿದ್ದಾರೆ.
ಅನ್ಯಾಯದ ವಿರುದ್ಧದ ಹೋರಾಟದಲ್ಲಿ 'ಇಂಡಿಯಾ' ನಿಮ್ಮೊಂದಿಗೆ ಇದೆ ಎಂದು ಅವರು ಉಲ್ಲೇಖಿಸಿದರು.
ಆಮ್ ಆದ್ಮಿ ಪಕ್ಷವು (ಎಎಪಿ) 'ಇಂಡಿಯಾ' ಮೈತ್ರಿಕೂಟದ ಭಾಗವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು.
ದೆಹಲಿ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದ್ದರೂ ಸಂಬಂಧಿತ ಪ್ರಕರಣದಲ್ಲಿ ಸಿಬಿಐ ಬಂಧಿಸಿದ್ದರಿಂದ ಜೈಲಿನಲ್ಲಿದ್ದಾರೆ.