ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲರ ನಿರ್ಮೂಲನೆಯ ಸನಿಹ ಭಾರತ: ಗೃಹ ಸಚಿವ ಅಮಿತ್ ಶಾ

Published 1 ಡಿಸೆಂಬರ್ 2023, 10:42 IST
Last Updated 1 ಡಿಸೆಂಬರ್ 2023, 10:43 IST
ಅಕ್ಷರ ಗಾತ್ರ

ಹಝಾರಿಬಾಗ್ (ಜಾರ್ಖಂಡ್): ‘ದೇಶದಲ್ಲಿ ನಕ್ಸಲ್‌ವಾದದ ಸಂಪೂರ್ಣ ನಿರ್ಮೂಲನೆಯ ಕಾಲ ಸನ್ನಿಹಿತವಾಗಿದೆ. ಈ ಹೋರಾಟದಲ್ಲಿ ಜಯ ಸಾಧಿಸುವ ದೃಢ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದರು.

ಅರೆಸೇನಾ ಪಡೆಯ 59ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಗಡಿ ಭದ್ರತಾ ಪಡೆ ಯೋಧರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಕಳೆದ ಹತ್ತು ವರ್ಷಗಳಲ್ಲಿ ನಕ್ಸಲ್‌ ಹಿಂಸಾಚಾರ ಶೇ 52ರಷ್ಟು ಇಳಿಮುಖವಾಗಿದೆ. ನಕ್ಸಲರಿಂದ ಹತ್ಯೆಗೀಡಾಗುವವರ ಸಂಖ್ಯೆ ಶೇ 70ರಷ್ಟು ಇಳಿದಿದೆ. ಜತೆಗೆ ನಕ್ಸಲ್‌ ಪೀಡಿತ ಜಿಲ್ಲೆಗಳ ಸಂಖ್ಯೆ ಶೇ 96ರಿಂದ ಶೇ 45ಕ್ಕೆ ತಗ್ಗಿದೆ. ಹಾಗೆಯೇ ನಕ್ಸಲರ ದಾಳಿ ಎದುರಿಸಬೇಕಿದ್ದ ಪೊಲೀಸ್‌ ಠಾಣೆಗಳ ಸಂಖ್ಯೆ 495ರಿಂದ 176ಕ್ಕೆ ಇಳಿದಿದೆ’ ಎಂದರು.

‘ನಕ್ಸಲರ ವಿರುದ್ಧದ ಕೊನೆಯ ಹಾಗೂ ನಿರ್ಣಾಯಕ ಹೋರಾಟದಲ್ಲಿ ಗಡಿಭದ್ರತಾ ಪಡೆ, ಸಿಆರ್‌ಪಿಎಫ್‌ ಹಾಗೂ ಐಟಿಬಿಪಿ ಯೋಧರು ಪಾಲ್ಗೊಂಡಿದ್ದಾರೆ. ದೇಶದಿಂದ ನಕ್ಸಲ್‌ವಾದವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ದೃಢ ಸಂಕಲ್ಪ ಮಾಡಿದ್ದೇವೆ’ ಎಂದು ಶಾ ಹೇಳಿದರು.

‘ಜಾರ್ಖಂಡ್ ಸೇರಿದಂತೆ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿರುವ ಎಡಪಂಥೀಯ ತೀವ್ರಗಾಮಿಗಳನ್ನು ನಿರ್ಮೂಲನೆ ಮಾಡುವ ಹೋರಾಟದಲ್ಲಿ ಯಶಸ್ಸಿನ ಸಮೀಪ ಇದ್ದೇವೆ. ಈ ನಿಟ್ಟಿನಲ್ಲಿ ಬೂರಪಹಾರ್ ಹಾಗೂ ಚಕ್ರಬಂಧ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿರುವ ಸೇನಾಪಡೆ, ಅಲ್ಲಿ ಮಾವೋವಾದಿಗಳ ಹಿಡಿತದಲ್ಲಿದ್ದ ಪ್ರದೇಶಗಳನ್ನು ಸಾರ್ವಜನಿಕ ಮುಕ್ತಗೊಳಿಸಿದ್ದಾರೆ’ ಎಂದು ಹೇಳಿದರು.

‘ಈ ಹೋರಾಟದಲ್ಲಿ ನಮ್ಮ ಜಯ ಖಂಡಿತಾ. ಇದಕ್ಕಾಗಿ 2019ರಿಂದ ಹೊಸದಾಗಿ 199 ಭದ್ರತಾ ಪಡೆಗಳ ಕ್ಯಾಂಪ್‌ಗಳನ್ನು ಸ್ಥಾಪಿಸಲಾಗಿದೆ. ನರೇಂದ್ರ ಮೋದಿ ಆಡಳಿತದ ಕಳೆದ 10 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿರುವ ನಕ್ಸಲ್‌ ಪ್ರದೇಶಗಳಲ್ಲಿನ ಹೋರಾಟದಲ್ಲಿ ನಮ್ಮ ಸೇನೆ ಜಯ ಸಾಧಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆ ಸಂಪೂರ್ಣ ಹಿಡಿತ ಸಾಧಿಸಿದೆ’ ಎಂದು ಅಮಿತ್ ಶಾ ಹೇಳಿದರು.

1965ರಲ್ಲಿ ಸ್ಥಾಪನೆಯಾದ ಅರೆ ಸೇನಾ ಪಡೆಯುವ ಸದ್ಯ 2.65 ಲಕ್ಷ ಯೋಧರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT