ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ರಷ್ಯಾ: ಯುದ್ಧವಿಮಾನ ಅಭಿವೃದ್ಧಿ ಯೋಜನೆ ಅತಂತ್ರ

5ನೇ ತಲೆಮಾರಿನ ಯುದ್ಧವಿಮಾನ ರೂಪಿಸಲು ಒಪ್ಪಂದ ಮಾಡಿಕೊಂಡಿದ್ದ ಭಾರತ
Last Updated 8 ಜುಲೈ 2018, 19:38 IST
ಅಕ್ಷರ ಗಾತ್ರ

ನವದೆಹಲಿ: ಭಾರತ–ರಷ್ಯಾಗಳು ಜಂಟಿಯಾಗಿ ‘5ನೇ ತಲೆಮಾರಿನ ಯುದ್ಧವಿಮಾನ’ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಯೋಜನೆಯಲ್ಲಿ ಮುಂದುವರೆಯುವ ಬಗ್ಗೆ ಭಾರತೀಯ ವಾಯುಪಡೆ ಮತ್ತು ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್‌ಎಎಲ್‌) ಭಿನ್ನ ನಿಲುವು ಹೊಂದಿದೆ. ಹೀಗಾಗಿ 11 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಯೋಜನೆಯ ಭವಿಷ್ಯ ಅತಂತ್ರವಾಗಿದೆ.

ಯೋಜನೆಯ ವೆಚ್ಚ ತೀರಾ ದೊಡ್ಡದು. ಹೀಗಾಗಿ ಪ್ರತಿ ವಿಮಾನಕ್ಕೆ ವಿನಿಯೋಗವಾಗುವ ಮೊತ್ತವೂ ವಿಪರೀತವಾಗಲಿದೆ. ವೆಚ್ಚ ಮತ್ತು ವಿಮಾನದಿಂದ ಆಗುವ ಅನುಕೂಲಗಳು ಪರಸ್ಪರ ತಾಳೆಯಾಗುವುದಿಲ್ಲ. ಹೀಗಾಗಿ ಯೋಜನೆಯನ್ನು ಕೈಬಿಡುವುದೇ ಒಳ್ಳೆಯದು ಎಂದು ಭಾರತೀಯ ವಾಯುಪಡೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಯಾವ ದೇಶವೂ ವಿಮಾನದ ತಂತ್ರಜ್ಞಾನವನ್ನು ಈವರೆಗೆ ಭಾರತಕ್ಕೆ ನೀಡಿಲ್ಲ. ಈ ಯೋಜನೆಯಲ್ಲಿ ಅಂತಹ ತಂತ್ರಜ್ಞಾನವೂ ನಮ್ಮ ಕೈವಶವಾಗುವ ಸಾಧ್ಯತೆ ಇದೆ. ಇದರಿಂದ ರಕ್ಷಣಾ ಕ್ಷೇತ್ರದಲ್ಲಿ ನಮ್ಮ ಸ್ಥಾನ–ಸಾಮರ್ಥ್ಯ ಬದಲಾಗಲಿದೆ. ಹೀಗಾಗಿ ಯೋಜನೆಯನ್ನು ಅಂತಿಮಗೊಳಿಸುವುದು ಅತ್ಯಗತ್ಯ ಎಂದು ಎಚ್‌ಎಎಲ್ ಅಭಿಪ್ರಾಯಪಟ್ಟಿದೆ.

ಟೇಕಾಫ್ ಆಗದ ಯೋಜನೆ
* 2007ರಲ್ಲಿ ಈ ಯೋಜನೆಗೆ ಭಾರತ ಮತ್ತು ರಷ್ಯಾಗಳು ಒಮ್ಮತ ಸೂಚಿಸಿದ್ದವು

* ₹ 2 ಲಕ್ಷ ಕೋಟಿ (3,000 ಕೋಟಿ ಅಮೆರಿಕನ್ ಡಾಲರ್)/ಯೋಜನೆಯ ಅಂದಾಜು ವೆಚ್ಚ

* ಒಪ್ಪಂದದ ಅಂತಿಮ ರೂಪ ಇನ್ನೂ ಸಿದ್ಧವಾಗಿಲ್ಲ

* ಯೋಜನೆಯ ವೆಚ್ಚ ಹಂಚಿಕೆಯ ಬಗ್ಗೆ ಎರಡೂ ದೇಶಗಳು ಒಮ್ಮತಕ್ಕೆ ಬಂದಿಲ್ಲ

* ವಿಮಾನದ ಸ್ವರೂಪ–ಸಾಮರ್ಥ್ಯದ ಬಗ್ಗೆ ಕರಡನ್ನೂ ಸಿದ್ಧಪಡಿಸಿಲ್ಲ

* ಎಷ್ಟು ವಿಮಾನಗಳನ್ನು ತಯಾರಿಸಬೇಕು ಎಂಬುದೂ ನಿರ್ಧಾರವಾಗಿಲ್ಲ

* ತಂತ್ರಜ್ಞಾನ ವರ್ಗಾವಣೆ ಸಂಬಂಧವೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ

* ಮನೋಹರ್ ಪರ್ರೀಕರ್ ರಕ್ಷಣಾ ಸಚಿವರಾಗಿದ್ದಾಗ 2016ರಲ್ಲಿ ಮತ್ತೆ ಮಾತುಕತೆ ಆರಂಭವಾಗಿತ್ತಾದರೂ, ಒಮ್ಮತ ಸಾಧ್ಯವಾಗಲಿಲ್ಲ

ಭಾರತದ ಷರತ್ತುಗಳು
* ಯೋಜನೆಯ ವೆಚ್ಚ ಸರಿಯಾಗಿ ಹಂಚಿಕೆಯಾಗಬೇಕು

* ವಿಮಾನದಲ್ಲಿ ಬಳಕೆಯಾಗಿರುವ ತಂತ್ರಜ್ಞಾನದ ಮೇಲೆ ರಷ್ಯಾ ಹೊಂದಿರುವಷ್ಟೇ ಅಧಿಕಾರ ಭಾರತಕ್ಕೂ ಇರಬೇಕು

* ವಿಮಾನದಲ್ಲಿರುವ ತಂತ್ರಜ್ಞಾನ ಮತ್ತು ತಂತ್ರಾಂಶಗಳ ರಹಸ್ಯ ಸಂಖ್ಯೆಯನ್ನು (ಕೋಡ್‌ ವರ್ಡ್) ನಮಗೂ ನೀಡಬೇಕು

* ನಮ್ಮ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಮಾರ್ಪಡಿಸಲು ಮತ್ತು ಬದಲಿಸಲು ಅವಕಾಶ ಇರಬೇಕು

* ‘ಈ ಎಲ್ಲಾ ಷರತ್ತುಗಳನ್ನು ರಷ್ಯಾ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿಯೇ ಯೋಜನೆ ನನೆಗುದಿಗೆ ಬಿದ್ದಿದೆ. ಆದರೆ ಯೋಜನೆಯನ್ನು ಭಾರತ ಇನ್ನೂ ತಿರಸ್ಕರಿಸಿಲ್ಲ. ನಮ್ಮ ಬಾಗಿಲು ಇನ್ನೂ ತೆರೆದಿದೆ’ ಎಂದು ರಾಜತಾಂತ್ರಿಕ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಏನಿರಲಿದೆ ಇಂತಹ ವಿಮಾನದಲ್ಲಿ
* ಗಾಳಿಯನ್ನು ಸರಾಗವಾಗಿ ಸೀಳಿಕೊಂಡು ಮುನ್ನುಗ್ಗಬಲ್ಲ ದೇಹದ ವಿನ್ಯಾಸ

* ಯಾವುದೇ ರೇಡಾರ್‌ಗಳಿಗೆ ಸಿಲುಕದಂತಹ ರೇಡಾರ್ ನಿರೋಧಕ ವ್ಯವಸ್ಥೆ ಇರಬೇಕು

* ಗುರಿ ದಿಕ್ಕು ಬದಲಿಸಿದರೂ, ಅದನ್ನು ಬೆನ್ನಟ್ಟಿ ಧ್ವಂಸ ಮಾಡುವ ಸಾಮರ್ಥ್ಯವಿರುವ ಕ್ಷಿಪಣಿ ಹೊಂದಿರಬೇಕು

* ಸೂಪರ್‌ಕ್ರೂಸ್ ಸಾಮರರ್ಥ್ಯವಿರಬೇಕು

* ಪ್ರತಿ ಗಂಟೆಗೆ 1,235 ಕಿ.ಮೀ.ಗಿಂತಲೂ (ಶಬ್ದದ ವೇಗ) ಹೆಚ್ಚು ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಸೂಪರ್‌ಕ್ರೂಸ್ ಎನ್ನಲಾಗುತ್ತದೆ.ಯಾವುದೇ ಯುದ್ಧವಿಮಾನ ದೀರ್ಘಕಾಲ ಈ ವೇಗದಲ್ಲಿ ಚಲಿಸಲು ಸಾಧ್ಯವಿಲ್ಲ. ಕೆಲವು ಕ್ಷಣಗಳ ಕಾಲ ಮಾತ್ರ ಈ ವೇಗದಲ್ಲಿ ಚಲಿಸುತ್ತವೆ. ದಾಳಿ ನಡೆಸಿ, ಅಲ್ಲಿಂದತ್ವರಿತವಾಗಿ ತಪ್ಪಿಸಿಕೊಳ್ಳುವಲ್ಲಿ ಈ ಸಾಮರ್ಥ್ಯ ನೆರವಿಗೆ ಬರಲಿದೆ

* ನಿಯಂತ್ರಣ ಕೊಠಡಿ, ಸಹ ವಿಮಾನಗಳು, ಎದುರಾಳಿ ವಿಮಾನಗಳು, ರೇಡಾರ್‌ಗಳು, ನಕ್ಷೆ ಮೊದಲಾದ ಮಾಹಿತಿಗಳನ್ನು ಹೆಚ್ಚು ನಿಖರವಾಗಿ ನೀಡಬಲ್ಲ ತಂತ್ರಜ್ಞಾನಗಳು ಇರಬೇಕು

* ರಷ್ಯಾ ಈಗ ಅಭಿವೃದ್ಧಿಪಡಿಸಿರುವ 5ನೇ ತಲೆಮಾರಿನ ಯುದ್ಧವಿಮಾನ ಸುಖೋಯ್ ಎಸ್‌ಯು57. ಇದು 2019ರಲ್ಲಿ ರಷ್ಯಾ ಸೇನೆಗೆ ಹಸ್ತಾಂತರವಾಗಲಿದೆ. ಭಾರತ–ರಷ್ಯಾಗಳು ಜಂಟಿಯಾಗಿ ಅಭಿವೃದ್ಧಿಪಡಿಸಲು ಯೋಜಿಸಿದ್ದ ಯುದ್ಧವಿಮಾನವು ಇದರ ಸುಧಾರಿತ ರೂಪದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT