ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌3ಎನ್‌2: ದೇಶದಲ್ಲಿ ಇಬ್ಬರ ಸಾವು–ತಿಂಗಳಾಂತ್ಯಕ್ಕೆ ಕ್ಷೀಣ ಸಾಧ್ಯತೆ

ಚಿಕ್ಕಮಕ್ಕಳು ಮತ್ತು ವೃದ್ಧರ ಕುರಿತು ಹೆಚ್ಚಿನ ಗಮನ– ತಜ್ಞರ ಅಭಿಮತ
Last Updated 10 ಮಾರ್ಚ್ 2023, 15:38 IST
ಅಕ್ಷರ ಗಾತ್ರ

ನವದೆಹಲಿ: ‘ಎಚ್3ಎನ್‌2 ವೈರಸ್ ಸೋಂಕಿನಿಂದ ಕರ್ನಾಟಕದ ಹಾಸನ ಜಿಲ್ಲೆ ಹಾಗೂ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಸಾವಿಗೀಡಂತಾಗಿದೆ.

‘ಎಚ್‌3ಎನ್‌2 ಸೋಂಕಿನಿಂದ ಹರಿಯಾಣದಲ್ಲಿ ಸಾವಿಗೀಡಾದ ವ್ಯಕ್ತಿಯು ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರಿಗೆ ಎಚ್‌3ಎನ್‌2 ಸೋಂಕು ಇರುವುದು ಜನವರಿ 17ರಂದು ನಡೆಸಿದ ಪರೀಕ್ಷೆಯಿಂದ ದೃಢಪಟ್ಟಿತ್ತು. ಫೆ. 8ರಂದು ಮನೆಯಲ್ಲೇ ಮೃತಪಟ್ಟಿದ್ದಾರೆ’ ಎಂದು ರೋಹಟಕ್‌ನ ಪಿಜಿಐಎಂಎಸ್ ಆಸ್ಪತ್ರೆಯ ಮೂಲಗಳು ಹೇಳಿವೆ.

‘ರೋಗನಿರೋಧಕ ಶಕ್ತಿ ದುರ್ಬಲವಾಗಿರುವ ಚಿಕ್ಕಮಕ್ಕಳು ಮತ್ತು ವೃದ್ಧರಲ್ಲಿ ಎಚ್‌3ಎನ್‌2 ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇನ್‌ಪ್ಲುಯೆಂಜಾ ಸಂಬಂಧಿತ ಈ ವೈರಸ್‌ನಿಂದಾಗಿ ತೀವ್ರವಾದ ಉಸಿರಾಟದ ಸೋಂಕು ಉಂಟಾಗುತ್ತದೆ. ಈ ರೀತಿಯ ಪ್ರಕರಣಗಳು ಕೆಲ ತಿಂಗಳುಗಳಿಂದ ವಿಶ್ವದೆಲ್ಲೆಡೆಯಿಂದ ವರದಿಯಾಗುತ್ತಿವೆ. ಇದು ಋತುಮಾನಕ್ಕೆ ಅನುಗುಣವಾಗಿ ಕಾಣಿಸಿಕೊಳ್ಳುವ ಇನ್‌ಪ್ಲುಯೆಂಜಾ ಸೋಂಕು. ಹೀಗಾಗಿ ಈ ತಿಂಗಳ ಅಂತ್ಯದ ವೇಳೆಗೆ ಕ್ಷೀಣಿಸಲಿದೆ’ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.

ಸಾಮಾನ್ಯವಾಗಿ ಭಾರತದಲ್ಲಿ ವರ್ಷಕ್ಕೆರಡು ಬಾರಿ ಇನ್‌ಫ್ಲುಯೆಂಜಾ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಒಂದು ಜನವರಿಯಿಂದ ಮಾರ್ಚ್‌ವರೆಗೆ ಮತ್ತೊಂದು ಮಳೆಗಾಲದಲ್ಲಿ ಇಂಥ ಪ್ರಕರಣಗಳು ಕಂಡುಬರುತ್ತವೆ.

‘ಜನವರಿ 2ರಿಂದ ಮಾರ್ಚ್ 5ರವರೆಗೆ ದೇಶದಲ್ಲಿ ಎಚ್‌3ಎನ್‌2 ಸೋಂಕಿನ ಒಟ್ಟು 451 ಪ್ರಕರಣಗಳು ವರದಿಯಾಗಿವೆ. ಇನ್‌ಫ್ಲುಯೆಂಜಾದ ಸಬ್‌ಟೈಪ್ ಆಗಿರುವ ಎಚ್‌3ಎನ್‌2 ವೈರಸ್ ಸೋಂಕಿನ ಪ್ರಕರಣಗಳು ಈ ವರ್ಷದ ಆರಂಭದಿಂದಲೇ ವರದಿಯಾಗುತ್ತಿವೆ. ರೋಗಿಗಳ ಸ್ಯಾಂಪಲ್‌ಗಳನ್ನು ಪರೀಕ್ಷಿಸಿದಾಗ ಇದು ವೈರಸ್ ಸೋಂಕಿನಿಂದಾಗಿರುವುದು ದೃಢಪಟ್ಟಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.

‘ಎಚ್‌3ಎನ್‌2ಸೇರಿದಂತೆ ಇನ್‌ಫ್ಲುಯೆಂಜಾ ವೈರಸ್‌ಗೆ ಸಂಬಂಧಿಸಿದಂತೆ ಮಾರ್ಚ್‌ 9ರವರೆಗೆ ದೇಶದಲ್ಲಿ ಒಟ್ಟು 3,038 ಪ್ರಕರಣಗಳು ವರದಿಯಾಗಿವೆ. ಜನವರಿಯಲ್ಲಿ 1,245, ಫೆಬ್ರವರಿಯಲ್ಲಿ 1,307 ಹಾಗೂ ಮಾರ್ಚ್‌ನಲ್ಲಿ 486 ಪ್ರಕರಣಗಳು ವರದಿಯಾಗಿವೆ’ ಎಂದು ಆರೋಗ್ಯದ ಸಮಗ್ರ ಮಾಹಿತಿ ವೇದಿಕೆಯ (ಐಡಿಎಸ್‌ಪಿ–ಐಎಚ್ಐಪಿ) ಅಂಕಿ–ಅಂಶಗಳು ತಿಳಿಸಿವೆ.

ಈ ವರ್ಷದ ಫೆಬ್ರುವರಿ 28ರ ತನಕ ದೇಶದಲ್ಲಿ 28,955 ಎಚ್‌1ಎನ್‌1 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಬಹುತೇಕ ಪ್ರಕರಣಗಳು ತಮಿಳುನಾಡಿನಿಂದ (545) ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 170, ಗುಜರಾತಿನಲ್ಲಿ 74, ಕೇರಳದಲ್ಲಿ 42 ಹಾಗೂ ಪಂಜಾಬ್‌ನಲ್ಲಿ 28 ಪ್ರಕರಣಗಳು ವರದಿಯಾಗಿವೆ.

ರಾಜ್ಯಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ

ನವದೆಹಲಿ: ದೇಶದಲ್ಲಿ ಎಚ್‌3ಎನ್‌2 ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಅವರು ಶುಕ್ರವಾರ ಸಭೆ ನಡೆಸಿದ್ದು, ‘ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜಾಗರೂಕವಾಗಿರಬೇಕು. ಪ್ರಕರಣಗಳ ಮೇಲ್ವಿಚಾರಣೆ ನಡೆಸಬೇಕು’ ಎಂದು ಸಲಹೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ‘ಪರಿಸ್ಥಿತಿಯನ್ನು ಪರಿಹರಿಸಲು ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡಲು ಸರ್ಕಾರವು ರಾಜ್ಯಗಳೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿದೆ’ ಎಂದಿದ್ದಾರೆ.

ಐಸಿಎಂಆರ್ ಮಾರ್ಗಸೂಚಿ

ದೇಶದಲ್ಲಿ ಇನ್‌ಫ್ಲುಯೆಂಜಾ ಸಂಬಂಧಿ ಎಚ್‌3ಎನ್‌2 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಕಳೆದ ವಾರವಷ್ಟೇ ಅಖಿಲ ಭಾರತ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್‌) ಮಾರ್ಗಸೂಚಿಗಳನ್ನು ಸೂಚಿಸಿದೆ.

* ರೋಗಲಕ್ಷಣಗಳಿದ್ದರೆ ಸಾಬೂನು ಬಳಸಿ ಕೈಗಳನ್ನು ತೊಳೆಯಬೇಕು

* ಮಾಸ್ಕ್ ಧರಿಸಬೇಕು. ಕಿಕ್ಕಿರಿದ ಜನಸಂದಣಿಯಲ್ಲಿ ಓಡಾಡಬಾರದು

* ಕೆಮ್ಮುವಾಗ, ಸೀನುವಾಗ ಕಡ್ಡಾಯವಾಗಿ ಕರವಸ್ತ್ರ ಬಳಸಬೇಕು

*ವೈದ್ಯರ ಅನುಮತಿ ಇಲ್ಲದೇ ಆ್ಯಂಟಿಬಯಾಟಿಕ್‌ಗಳನ್ನು ಬಳಸಬಾರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT