ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಮೊದಲ ರಡಾರ್‌ ನಿಗ್ರಹ ಕ್ಷಿಪಣಿ 'ರುದ್ರಂ 1' ಪರೀಕ್ಷೆ ಯಶಸ್ವಿ

Last Updated 9 ಅಕ್ಟೋಬರ್ 2020, 12:22 IST
ಅಕ್ಷರ ಗಾತ್ರ

ನವದೆಹಲಿ: ಶತ್ರು ಪಡೆಯ ರಡಾರ್‌ಗಳು ಹಾಗೂ ಕಣ್ಗಾವಲು ವ್ಯವಸ್ಥೆಯನ್ನು ನಾಶ ಪಡಿಸುವ ಸಾಮರ್ಥ್ಯ ಹೊಂದಿರುವ 'ರುದ್ರಂ 1' ರಡಾರ್‌ ನಿಗ್ರಹ ಕ್ಷಿಪಣಿಯ (ಆ್ಯಂಡಿ ರೇಡಿಯೇಷನ್‌ ಮಿಸೈಲ್‌) ಪರೀಕ್ಷೆ ಶುಕ್ರವಾರ ಯಶಸ್ವಿಯಾಗಿದೆ. ಭಾರತೀಯ ವಾಯುಪಡೆಯು ಸುಖೋಯ್‌–30ಎಂಕೆಐ ಯುದ್ಧ ವಿಮಾನಗಳ ಮೂಲಕ ಈ ಕ್ಷಿಪಣಿಯನ್ನು ಪ್ರಯೋಗಿಸಬಹುದಾಗಿದೆ.

ಶಬ್ದಕ್ಕಿಂತ ಎರಡು ಪಟ್ಟು ಹೆಚ್ಚು ವೇಗದಲ್ಲಿ ನುಗ್ಗುವ ಸಾಮರ್ಥ್ಯವನ್ನು ಕ್ಷಿಪಣಿ ಹೊಂದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ರುದ್ರಂ 1 ಹೊಸ ತಲೆಮಾರಿನ ಕ್ಷಿಪಣಿ (NGARM) ಅಭಿವೃದ್ಧಿ ಪಡಿಸಿದೆ. ಒಡಿಶಾದ ಬಾಲಾಸೋರ್‌ನಲ್ಲಿ ಬೆಳಿಗ್ಗೆ 10:30 ಕ್ಷಿಪಣಿಯ ಪರೀಕ್ಷೆ ನಡೆಸಲಾಗಿದೆ.

'ಇದರಿಂದಾಗಿ ಶತ್ರು ಪಡೆಯ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸುವ ಕಾರ್ಯಾಚರಣೆಗಳನ್ನು ನಡೆಸಲು ಭಾರತೀಯ ವಾಯುಪಡೆ ಸಮರ್ಥವಾಗಲಿದೆ' ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಪ್ರಸ್ತುತ ಸುಖೋಯ್‌–30ಎಂಕೆಐ ಯುದ್ಧ ವಿಮಾನಗಳಲ್ಲಿ ರುದ್ರಂ ಕ್ಷಿಪಣಿ ಅಳವಡಿಸಲಾಗಿದ್ದು, ಕ್ಷಿಪಣಿ ಸಾಗುವ ದೂರವು ಯುದ್ಧ ವಿಮಾನ ಹಾರಾಟ ನಡೆಸಿರುವ ಎತ್ತರವನ್ನು ಅವಲಂಬಿಸಿರುತ್ತದೆ. 500 ಮೀಟರ್‌ನಿಂದ 15 ಕಿ.ಮೀ.ನಷ್ಟು ಎತ್ತರದಿಂದಲೂ ಕ್ಷಿಪಣಿ ಪ್ರಯೋಗಿಸಬಹುದಾಗಿದ್ದು, 250 ಕಿ.ಮೀ. ವ್ಯಾಪ್ತಿಯಲ್ಲಿ ಗುರಿಗಳಿಗೆ ಅಪ್ಪಳಿಸುವ ಸಾಮರ್ಥ್ಯವಿದೆ.

ರಡಾರ್‌ಗಳು ಹಾಗೂ ಎಲೆಕ್ಟ್ರೊ ಆಪ್ಟಿಕಲ್‌ ಟ್ರ್ಯಾಕಿಂಗ್‌ ವ್ಯವಸ್ಥೆಗಳ ಮೂಲಕ ಕ್ಷಿಪಣಿಯ ಪ್ರಯೋಗ ಮತ್ತು ಪರಿಣಾಮಗಳನ್ನು ಗಮನಿಸಲಾಗಿದೆ. ಕ್ಷಿಪಣಿ ಪ್ರಯೋಗಿಸುವುದಕ್ಕೂ ಮುನ್ನ ಹಾಗೂ ಪ್ರಯೋಗದ ನಂತರವೂ ಅದನ್ನು ಗುರಿಗೆ ನಿಗದಿ ಪಡಿಸುವ ಅವಕಾಶವಿದೆ. ವಾಯು ಮಾರ್ಗದಿಂದ ಭೂಮಿಯತ್ತ ಸಾಗುವ ರುದ್ರಂ ಕ್ಷಿಪಣಿಯನ್ನು ಅಮೆರಿಕ ನೌಕಾಪಡೆಯು 2017ರಲ್ಲಿ ಅಳವಡಿಸಿಕೊಂಡಿರುವ 'ಎಜಿಎಂ–88ಇ ಅಡ್ವಾನ್ಸ್‌ಡ್ ಆ್ಯಂಟಿ–ರೇಡಿಯೇಷನ್‌ ಗೈಡೆಡ್‌ ಮಿಸೈಲ್‌ಗೆ' ಹೋಲಿಸಲಾಗುತ್ತಿದೆ.

ರುದ್ರಂ ದೇಶೀಯವಾಗಿ ಸಿದ್ಧಪಡಿಸಲಾಗಿರುವ ದೇಶದ ಮೊದಲ ರಡಾರ್‌ ನಿಗ್ರಹ ಕ್ಷಿಪಣಿಯಾಗಿದೆ. ಡಿಆರ್‌ಡಿಒ ಭಾರತೀಯ ವಾಯುಪಡೆಗಾಗಿ ಅಭಿವೃದ್ಧಿ ಪಡಿಸಿರುವ ಈ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ. ಡಿಆರ್‌ಡಿಒ ಹಾಗೂ ಸಾಧನೆಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಅಭಿನಂದನೆಗಳು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT