ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದೂ ರಾಷ್ಟ್ರವಾಗಿಸಲು ಯತ್ನಿಸಿದರೆ ಪಾಕಿಸ್ತಾನಕ್ಕೆ ಬಂದ ಗತಿ ಬರಲಿದೆ: ಗೆಹಲೋತ್‌

Last Updated 18 ಆಗಸ್ಟ್ 2022, 11:37 IST
ಅಕ್ಷರ ಗಾತ್ರ

ಅಹಮದಾಬಾದ್‌: ಆಡಳಿತರೂಢ ಬಿಜೆಪಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಪ್ರಯತ್ನಿಸಿದರೆ ಪಾಕಿಸ್ತಾನಕ್ಕೆ ಬಂದಿರುವ ಗತಿಯೇ ಬರಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ಗುಜರಾತ್‌ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಗೆಹಲೋತ್‌ ಅವರು ಕಾಂಗ್ರೆಸ್‌ನ ಹಿರಿಯ ವೀಕ್ಷಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಚುನಾವಣಾ ಪೂರ್ವ ತಯಾರಿ ನಿಟ್ಟಿನಲ್ಲಿ ಪಕ್ಷದ ನಾಯಕರ ಜೊತೆ ಗುರುವಾರ ಸಭೆಯಲ್ಲಿ ಪಾಲ್ಗೊಂಡಿದ್ದ ಗೆಹಲೋತ್‌, ಬಿಜೆಪಿ ಕೇವಲ ಧರ್ಮದ ಸಂಘರ್ಷಗಳನ್ನು ಸೃಷ್ಟಿಸಿ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಆರೋಪಿಸಿದರು.

'ರಾಷ್ಟ್ರದಾದ್ಯಂತ ಹೋರಾಟಗಾರರು ಮತ್ತು ಪತ್ರಕರ್ತರು ಸೇರಿದಂತೆ ಅನೇಕ ಮಂದಿಯನ್ನು ಬಂಧಿಸಲಾಗಿದೆ. ಬಿಜೆಪಿ ನಿರಂಕುಶ ಪ್ರಭುತ್ವ ನಡೆಸುತ್ತಿದೆ. ಕೇವಲ ಧರ್ಮದ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳನ್ನು ಗೆಲ್ಲುತ್ತಿದೆ. ಈ ಪಕ್ಷಕ್ಕೆ ಯಾವುದೇ ಸಿದ್ಧಾಂತ, ಕಾರ್ಯನೀತಿ ಅಥವಾ ಮಾಧರಿ ಆಡಳಿತ ಇಲ್ಲ. ಇದು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಪ್ರಯತ್ನಿಸಿದರೆ ಪಾಕಿಸ್ತಾನಕ್ಕೆ ಬಂದಿರುವ ಗತಿಯೇ ಬರಲಿದೆ. ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವುದು ಸುಲಭ. ಅಡಾಲ್ಫ್‌ ಹಿಟ್ಲರ್‌ ಕೂಡ ಇದನ್ನೇ ಅಳವಡಿಸಿಕೊಂಡಿದ್ದ' ಎಂದು ಗೆಹಲೋತ್‌ ವಿವರಿಸಿದರು.

ಗುಜರಾತ್‌ ಮಾದರಿ ಎಂಬ ಹೆಸರಲ್ಲಿ ರಾಷ್ಟ್ರದ ಜನರನ್ನು ಬಿಜೆಪಿ ಮೂರ್ಖರನ್ನಾಗಿಸಿದೆ ಎಂದು ಹರಿಹಾಯ್ದರು.

2017ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಸಮೀಪದಲ್ಲಿದ್ದೆವು. ಆದರೆ ದುರಾದೃಷ್ಟವಶಾತ್‌, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ರಾಜ್ಯದಲ್ಲಿ ಬೀಡು ಬಿಟ್ಟರು ಮತ್ತು ಪ್ರಚಾರದ ವೇಳೆ ಬಾಲಿವುಡ್‌ ನಟನಂತೆ ಅಭಿನಯಿಸಿದರು. ನಾವು ಸೋತೆವು. ಅನುಕಂಪವನ್ನು ಗಿಟ್ಟಿಸಿಕೊಳ್ಳಲು ಕಾಂಗ್ರೆಸ್‌ ನಾಯಕ ಮಣಿ ಶಂಕರ್‌ ಐಯ್ಯರ್‌ ಅವರ ಹೇಳಿಕೆಯನ್ನೇ ತಿರುಚಿದರು. ಮಣಿ ಶಂಕರ್‌ ಅವರು ತಮ್ಮನ್ನು 'ನೀಚ ಆದ್ಮಿ' ಎಂದು ನಿಂದಿಸಿದರೆಂದು ಪ್ರಚಾರದ ವೇಳೆ ಹೇಳಿಕೊಂಡರು ಎಂದು ಗೆಹಲೋತ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT