ರಾಂಚಿ: ಜಾರ್ಖಂಡ್‌ನ ಬೊಕರೊ ಜಿಲ್ಲೆಯಲ್ಲಿ ಸರಕು ಸಾಗಣೆ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಇದರಿಂದಾಗಿ ಹಲವು ರೈಲುಗಳ ಸಂಚಾರ ವ್ಯತ್ಯಯವಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
'ಉಕ್ಕು ಸಾಗಿಸುತ್ತಿದ್ದ ರೈಲಿನ ಎರಡು ಬೋಗಿಗಳು ಬೊಕರೊ ಜಿಲ್ಲೆಯ ತುಪ್ಕದಿಹ್ ನಿಲ್ದಾಣದ ಸಮೀಪ ಬುಧವಾರ ರಾತ್ರಿ 9ಕ್ಕೆ ಹಳಿ ತಪ್ಪಿವೆ. ಇದರಿಂದಾಗಿ 14 ಎಕ್ಸ್‌ಪ್ರೆಸ್ ರೈಲುಗಳೂ ಸೇರಿದಂತೆ 15 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು' ಎಂದು ಆಗ್ನೇಯ ರೈಲ್ವೆಯ ಆದ್ರಾ ವಿಭಾಗದ ಅಧಿಕಾರಿ ಸುಮಿತ್ ನರುಲಾ ತಿಳಿಸಿದ್ದಾರೆ.
ಈ ರೈಲು ಬೊಕಾರೊ ಉಕ್ಕಿನ ಘಟಕದಿಂದ ಸರಕು ಸಾಗಿಸುತ್ತಿತ್ತು. ರೈಲಿನ ಬೋಗಿಗಳು ತುಪ್ಕದಿಹ್ ಹಾಗೂ ಬೊಕರೊ ನಿಲ್ದಾಣಗಳ ನಡುವಿನ ಮುಖ್ಯ ಹಳಿಯಿಂದ ಜಾರಿದ್ದವು.
'ಹಳಿ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ' ಎಂದು ನರುಲಾ ಹೇಳಿದ್ದಾರೆ.