ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಾಂಡರ್‌ಗಳ ಸಮಾವೇಶ:ಜಂಟಿ ಕಮಾಂಡ್ ರಚನೆ ಬಗ್ಗೆ ಸಶಸ್ತ್ರ ಪಡೆಗಳ ಮುಖ್ಯಸ್ಥರ ಚರ್ಚೆ

Published 4 ಸೆಪ್ಟೆಂಬರ್ 2024, 14:21 IST
Last Updated 4 ಸೆಪ್ಟೆಂಬರ್ 2024, 14:21 IST
ಅಕ್ಷರ ಗಾತ್ರ

ನವದೆಹಲಿ: ಯುದ್ಧ ಸನ್ನದ್ಧತೆ, ದಾಳಿ ಸಾಮರ್ಥ್ಯ ವೃದ್ಧಿ ಮೂಲಕ ದೇಶದ ಭದ್ರತೆಗೆ ಎದುರಾಗುವ ಸವಾಲುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ‘ಜಂಟಿ ಕಮಾಂಡ್‌’ಗಳ ರಚನೆ ಮತ್ತು ‘ನಿಯಂತ್ರಣ ಕೇಂದ್ರ’ಗಳ ಸ್ಥಾಪನೆಯ ಅಗತ್ಯತೆಯನ್ನು ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರು ಬುಧವಾರ ಪ್ರತಿಪಾದಿಸಿದ್ದಾರೆ.

ಜೊತೆಗೆ, ಶಸ್ತ್ರಾಸ್ತ್ರಗಳ ಸಾಗಣೆ ಹಾಗೂ ಯೋಧರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ಕಾರ್ಯಕ್ಕೆ ವೇಗ ನೀಡುವುದಕ್ಕೆ ಸಂಬಂಧಿಸಿ ಕೇಂದ್ರಗಳನ್ನು ಸ್ಥಾಪಿಸಲು ಸಹ ಒಲವು ವ್ಯಕ್ತಪಡಿಸಿದ್ದಾರೆ.

ಲಖನೌದಲ್ಲಿ ಆರಂಭವಾದ, ಮೂರು ಪಡೆಗಳ ಜಂಟಿ ಕಮಾಂಡರ್‌ಗಳ ಎರಡು ದಿನಗಳ ಸಮಾವೇಶದಲ್ಲಿ ಈ ಕುರಿತು ವ್ಯಾಪಕ ಚರ್ಚೆಗಳು ನಡೆದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಡಿಎಸ್‌ ಜನರಲ್‌ ಅನಿಲ್‌ ಚೌಹಾಣ್‌, ಸೇನೆ, ವಾಯುಪಡೆ ಹಾಗೂ ನೌಕಾಪಡೆಗಳ ಮುಖ್ಯಸ್ಥರು ಹಾಗೂ ಇತರ ಉನ್ನತ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಡಿಎಸ್‌ ಜನರಲ್‌ ಅನಿಲ್‌ ಚೌಹಾಣ್‌, ‘ದೇಶದ ಭದ್ರತೆಗೆ ಹೊಸ ಸವಾಲುಗಳು ಎದುರಾಗುತ್ತಿರುವ ಕಾರಣ, ಭದ್ರತಾ ಪಡೆಗಳು ಸನ್ನದ್ಧತೆಯಿಂದ ಇರುವುದು ಅಗತ್ಯ. ಇದಕ್ಕಾಗಿ ಮೂರು ಪಡೆಗಳು ಒಟ್ಟಾಗಿ ಕಾರ್ಯಾಚರಣೆ ನಡೆಸಲು ಅನುವಾಗುವಂತೆ ಜಂಟಿ ಕಮಾಂಡ್‌ ರಚಿಸಬೇಕು’ ಎಂದರು.

‘ಕಾರ್ಯಾಚರಣೆ ಸನ್ನದ್ಧತೆಗಾಗಿ ಸೇನೆಯ ಮೂರು ಪಡೆಗಳನ್ನು ಆಧುನೀಕರಣಗೊಳಿಸಬೇಕು’ ಎಂದೂ ಹೇಳಿದರು. 

ಚೀನಾ ಮತ್ತು ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿಗಳು ಸೇರಿದಂತೆ ದೇಶದ ಭದ್ರತೆಗೆ ಒದಗಿರುವ ಸವಾಲುಗಳ ಕುರಿತು ಪರಾಮರ್ಶೆಯೂ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಸಮಾವೇಶವನ್ನು ಉದ್ದೇಶಿಸಿ ಗುರುವಾರ ಮಾತನಾಡುವರು.

ಎರಡು ದಿನಗಳ ಸಮಾವೇಶದಲ್ಲಿ, ಹಣಕಾಸು, ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಸೇನಾಪಡೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.

ಮೂರು ಪಡೆಗಳನ್ನು ಒಳಗೊಂಡ ‘ಸಮಗ್ರ ಥಿಯೇಟರ್‌ ಕಮಾಂಡ್‌’ಗಳನ್ನು ರಚಿಸಬೇಕು ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT