ನವದೆಹಲಿ (ಪಿಟಿಐ): ‘1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಹಾಗೂ ಆಪರೇಷನ್ ಬ್ಲೂಸ್ಟಾರ್‌ಗೆ ಅವಕಾಶ ನೀಡಿದ್ದು; ಇವರೆಡೂ ಇಂದಿರಾ ಗಾಂಧಿ ಅವರು ಮಾಡಿದ್ದ ದೊಡ್ಡ ತಪ್ಪುಗಳು’ ಎಂದು ಹಿರಿಯ ಕಾಂಗ್ರೆಸ್ ನಾಯಕ ಕೆ. ನಟವರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ ಅವರು ದೇಶ ಕಂಡ ಮಹಾನ್ ಹಾಗೂ ಪ್ರಬಲ ಪ್ರಧಾನಮಂತ್ರಿ ಆಗಿದ್ದರು ಎಂದಿದ್ದಾರೆ.
1966–71ರಲ್ಲಿ ಇಂದಿರಾ ಗಾಂಧಿ ಅವರ ಆಡಳಿತದಲ್ಲಿ ನಾಗರಿಕ ಸೇವೆ ಅಧಿಕಾರಿಯಾಗಿ ಕೆಲಸ ಮಾಡಿದ್ದ ನಟವರ್ ಸಿಂಗ್, 80ರ ದಶಕದಲ್ಲಿ ಕಾಂಗ್ರೆಸ್ ಪಕ್ಷ ಸೇರಿ, ರಾಜೀವ್ ಗಾಂಧಿ ಸಂಪುಟದಲ್ಲಿ ಸಚಿವರಾಗಿದ್ದರು.
‘ಇಂದಿರಾ ವ್ಯಕ್ತಿತ್ವವನ್ನು ಗಂಭೀರ, ತೀವ್ರ, ನಿರ್ದಯಿ ಎಂದು ಹಲವು ಬಾರಿ ಚಿತ್ರಿಸಲಾಗಿದೆ. ಕಾಳಜಿಯುಳ್ಳ, ಆಕರ್ಷಕ ವ್ಯಕ್ತತ್ವದ ಅವರನ್ನು ಮಾನವತಾವಾದಿ, ಆಳ ಅಧ್ಯಯನ ಮಾಡುವ, ಉತ್ತಮ ಅಭಿರುಚಿ ಇರುವ ವ್ಯಕ್ತಿಯಂತೆ ಅಪರೂಪಕ್ಕೆ ಕರೆಯಲಾಗಿದೆ’ ಎಂದು ನಟವರ್ ಹೇಳಿದ್ದಾರೆ.
‘ಟ್ರೆಜರ್ಡ್ ಇಪಿಸಲ್ಸ್’ ಹೆಸರಿನ ತಮ್ಮ ಪುಸ್ತಕದಲ್ಲಿ ಈ ಅಭಿಪ್ರಾಯಗಳನ್ನು ಅವರು ವ್ಯಕ್ತಪಡಿಸಿದ್ದಾರೆ. ಸ್ನೇಹಿತರು, ಸಮಕಾಲೀನರು, ಸಹೋದ್ಯೋಗಿಗಳು ನಿಯಮಿತವಾಗಿ ಬರೆದ ಪತ್ರಗಳ ಸಂಗ್ರಹ ಇಲ್ಲಿದೆ. ಸರ್ಕಾರಿ ಅಧಿಕಾರಿಯಾಗಿದ್ದಾಗ, ವಿದೇಶದಲ್ಲಿ ರಾಯಭಾರಿಯಾಗಿದ್ದಾಗ ಹಾಗೂ ವಿದೇಶಾಂಗ ಸಚಿವರಾಗಿದ್ದಾಗ ಬರೆದ ಪತ್ರಗಳನ್ನೂ ಇಲ್ಲಿ ಸಂಗ್ರಹಿಸಲಾಗಿದೆ.
ಇಂದಿರಾ, ಇ.ಎಂ ಫಾರ್ಸ್ಟರ್, ಸಿ.ರಾಜಗೋಪಾಲಾಚಾರಿ, ಲಾರ್ಡ್ ಮೌಂಟ್ ಬ್ಯಾಟನ್, ಜವಾಹರಲಾಲ್ ನೆಹರೂ ಅವರ ಇಬ್ಬರು ಸಹೋದರಿಯರಾದ ವಿಜಯಲಕ್ಷ್ಮಿ ಪಂಡಿತ್ ಮತ್ತು ಕೃಷ್ಣಾ ಹುಥೀಸಿಂಗ್, ಆರ್.ಕೆ. ನಾರಾಯಣ್, ನೀರಜ್ ಸಿ.ಚೌಧರಿ, ಮುಲ್ಕ್‌ರಾಜ್ ಆನಂದ್ ಮೊದಲಾದವರ ಪತ್ರಗಳನ್ನು ಇದರಲ್ಲಿ ಪ್ರಕಟಿಸಲಾಗಿದೆ.
ಇಲ್ಲಿರುವ ಪ್ರತಿಯೊಂದು ಪತ್ರವೂ ತಾವು ಜಗತ್ತನ್ನು ನೋಡುವ ದೃಷ್ಟಿಕೋನಕ್ಕೆ ಹೊಸ ದಿಕ್ಕು ನೀಡಿವೆ ಎಂದು ನಟವರ್ ಹೇಳಿದ್ದಾರೆ.
ಅಪ್ಪ ಆಗಿದ್ದರಿಂದ ಹಿಡಿದು ರಾಜಕೀಯದವರೆಗೆ.. ಪುಸ್ತಕಗಳು, ಜನ್ಮದಿನದ ಶುಭಾಶಯಗಳು, ಶೀಘ್ರ ಚೇತರಿಕೆ ಹಾರೈಕೆಗಳು.. ಹೀಗೆ ಹಲವು ವಿಷಯಗಳನ್ನು ನಟವರ್ ಅವರಿಗೆ ಇಂದಿರಾ ಬರೆದ ಪತ್ರಗಳುಒಳಗೊಂಡಿವೆ. 1980ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕ್ಲೀನ್‌ಸ್ವೀಪ್ ಮಾಡಿದಾಗ ಬರೆದ ಪತ್ರದಲ್ಲಿ ನಿಜವಾದ ಸವಾಲು ಈಗ ಮುಂದಿದೆ ಎಂದು ಇಂದಿರಾ ವಿವರಿಸಿದ್ದರು.