ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ದುರಂತ ನಿಧನದಿಂದ ಆಘಾತವಾಗಿದೆ: ಪ್ರಧಾನಿ ಮೋದಿ

Published 20 ಮೇ 2024, 6:37 IST
Last Updated 20 ಮೇ 2024, 6:37 IST
ಅಕ್ಷರ ಗಾತ್ರ

ನವದೆಹಲಿ: ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ (63), ವಿದೇಶಾಂಗ ವ್ಯವಹಾರಗಳ ಸಚಿವ ಅಮಿರ್ ಅಬ್ದೊಲ್ಲಾಹಿಯಾನ್ ಹಾಗೂ ಕೆಲ ಹಿರಿಯ ಅಧಿಕಾರಿಗಳು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ ಅಧ್ಯಕ್ಷ ಡಾ. ಸೈಯದ್ ಇಬ್ರಾಹಿಂ ರೈಸಿ ಅವರ ದುರಂತ ನಿಧನದಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ. ಭಾರತ-ಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವಲ್ಲಿ ಅವರ ಕೊಡುಗೆ ಸ್ಮರಣೀಯ. ರೈಸಿ ಅವರ ಕುಟುಂಬ ಮತ್ತು ಇರಾನ್ ಜನತೆಗೆ ನನ್ನ ಸಂತಾಪಗಳು. ಈ ದುಃಖದ ಸಮಯದಲ್ಲಿ ನಾವು ಇರಾನ್ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ’ ಎಂದು ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಇರಾನ್‌ ಅಧ್ಯಕ್ಷ ಡಾ. ಸೈಯದ್ ಇಬ್ರಾಹಿಂ ರೈಸಿ ಅವರು ಆಘಾತಕಾರಿ ನಿಧನದಿಂದಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದುಃಖ ಮತ್ತು ನಿರಾಸೆಗೊಂಡಿದೆ. ಭಾರತ ಮತ್ತು ಇರಾನ್ ನಡುವಿನ ಅರ್ಥಪೂರ್ಣ ಸಂಬಂಧ ಶತಮಾನಗಳಿಂದ ಗುರುತಿಸಲ್ಪಟ್ಟಿದೆ. ರೈಸಿ ಅವರ ಕುಟುಂಬ ಮತ್ತು ಇರಾನ್ ಜನತೆಗೆ ಭಾರತೀಯರ ಪರವಾಗಿ ನನ್ನ ಸಂತಾಪಗಳು. ಈ ದುಃಖದ ಸಮಯದಲ್ಲಿ ನಾವು ಇರಾನ್ ಜನರೊಂದಿಗೆ ನಿಲ್ಲುತ್ತೇವೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಭಾನುವಾರ ಅಜೆರ್‌ ಬೈಜಾನ್‌ ಪ್ರಾಂತ್ಯದ ಗಡಿಯ ಗುಡ್ಡಪ್ರದೇಶಗಳ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾಗಿತ್ತು.

‘ಅಪಘಾತಕ್ಕೂ ಮುನ್ನ ಹೆಲಿಕಾಪ್ಟರ್‌ ನಿಯಂತ್ರಣ ಘಟಕದ ಸಂಪರ್ಕ ಕಡಿದುಕೊಂಡಿದ್ದು, ಅತ್ಯಂತ ವೇಗವಾಗಿ ಭೂಸ್ಪರ್ಶ ಮಾಡಿದೆ’ ಎಂದು ಇರಾನ್‌ನ ರಾಷ್ಟ್ರೀಯ ಮಾಧ್ಯಮವು ವರದಿ ಮಾಡಿತ್ತು.

ಹೆಲಿಕಾಪ್ಟರ್‌ ನಾಪ‍‌ತ್ತೆಯಾಗಿರುವ ಗುಡ್ಡ ಪ್ರದೇಶಗಳಲ್ಲಿ ದಟ್ಟನೆಯ ಮಂಜು ಮುಸುಕಿದ್ದರಿಂದ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗೆ ತೊಡಕು ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT