ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್ ಅಧ್ಯಕ್ಷ‌ರಿದ್ದ ಹೆಲಿಕಾಪ್ಟರ್ ಅಪಘಾತ: ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ

Published 20 ಮೇ 2024, 2:50 IST
Last Updated 20 ಮೇ 2024, 2:50 IST
ಅಕ್ಷರ ಗಾತ್ರ

ನವದೆಹಲಿ: ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಭಾನುವಾರ ಅಜರ್‌ಬೈಜಾನ್ ಪ್ರಾಂತ್ಯದ ಗಡಿಯ ಪರ್ವತ ಪ್ರದೇಶಗಳ ವ್ಯಾಪ್ತಿಯಲ್ಲಿ ಅಪಘಾತಕ್ಕೆ ಈಡಾಗಿದ್ದು, ಅದರ ನೆಲೆ ಪತ್ತೆಯಾಗಿಲ್ಲ.

‘ಅಪಘಾತಕ್ಕೂ ಮುನ್ನ ನಿಯಂತ್ರಣ ಘಟಕದ ಸಂಪರ್ಕವನ್ನು ಹೆಲಿಕಾಪ್ಟರ್‌ ಕಡಿದುಕೊಂಡಿದ್ದು, ಅನಿಯಂತ್ರಿತ ರೀತಿಯಲ್ಲಿ ಭೂಸ್ಪರ್ಶ ಮಾಡಿದೆ’ ಎಂದು ಇರಾನ್‌ನ ಮಾಧ್ಯಮ ವರದಿ ಮಾಡಿದೆ.

ಘಟನೆ ಸಂಬಂಧ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಮೋದಿ, ‘ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಕುರಿತಾದ ವರದಿ ಗಮನಿಸಿದ್ದೇನೆ. ಘಟನೆ ಬಗ್ಗೆ ತೀವ್ರ ಕಳವಳವಿದೆ. ಈ ಸಂಕಷ್ಟದ ಸಮಯದಲ್ಲಿ ನಾವು ಇರಾನ್ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಜತೆಗೆ, ಅಧ್ಯಕ್ಷರು ಮತ್ತು ಅವರ ಪರಿವಾರದ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

63 ವರ್ಷ ವಯಸ್ಸಿನ, ಅಧ್ಯಕ್ಷ ಇಬ್ರಾಹಿಂ ರೈಸಿ ಅವರ‌ ಸುರಕ್ಷತೆ ಕುರಿತಂತೆ ಇರಾನ್‌ನಲ್ಲಿ ಆತಂಕ ಮನೆಮಾಡಿದೆ. ಹೆಲಿಕಾಪ್ಟರ್‌ನಲ್ಲಿ ರೈಸಿ ಅವರಲ್ಲದೇ, ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಅಮೀರ್ ಅಬ್ದೊಲ್ಲಾಹಿಯಾಂ ಹಾಗೂ ಕೆಲ ಹಿರಿಯ ಅಧಿಕಾರಿಗಳು ಇದ್ದರು.

ಹೆಲಿಕಾಪ್ಟರ್‌ ‘ನಾಪ‍‌ತ್ತೆ’ಯಾಗಿರುವ ಪರ್ವತ ಪ್ರದೇಶಗಳಲ್ಲಿ ದಟ್ಟನೆಯ ಮಂಜು ಮುಸುಕಿದ್ದು, ಶೋಧ ಕಾರ್ಯಕ್ಕೆ ತೊಡಕಾಗಿದೆ. ಶೋಧ ಹಾಗೂ ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ.

‘ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಜೋಲ್ಫಾ ವಲಯದಲ್ಲಿ ಅ‍ಪಘಾತಕ್ಕೀಡಾಗಿದೆ’ ಎಂದು ಇರಾನ್‌ನ ರಾಷ್ಟ್ರೀಯ ಸುದ್ದಿ ವಾಹಿನಿ ವರದಿ ಮಾಡಿದೆ. ‘ಇದು ಅಪಘಾತ’ ಎಂದು ಕೆಲ ಅಧಿಕಾರಿಗಳು ಹೇಳಿದ್ದಾರೆ.

ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯ ಕಷ್ಟಕರವಾಗಿದೆ. ಅಪಘಾತ ಸ್ಥಳ ಪತ್ತೆ ಮಾಡುವುದು ಹಾಗೂ ಅಲ್ಲಿಗೆ ತಲುಪುವುದು ದುಸ್ತರವಾಗಿದೆ ಎಂದು ವಾಹಿನಿಯೊಂದು ವರದಿ ಮಾಡಿದೆ.

ಶ್ವಾನದಳದ ನೆರವು ಹಾಗೂ ಡ್ರೋನ್‌ಗಳ ಸಹಾಯವನ್ನೂ ಒದಗಿಸಿ, 40ಕ್ಕೂ ಹೆಚ್ಚು ತಂಡಗಳನ್ನು ರಕ್ಷಣಾ ಕಾರ್ಯಕ್ಕಾಗಿ ಅಪಘಾತ ನಡೆದಿರುವ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಐಆರ್‌ಎನ್‌ಎ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ಸೇನಾಯೋಧರು, ಭದ್ರತಾ ಸಿಬ್ಬಂದಿ, ಪೊಲೀಸರ ತಂಡಗಳನ್ನೂ ನಿಯೋಜಿಸಲಾಗಿದೆ ಎಂದು ಸೇನ ಮುಖ್ಯಸ್ಥ ಮೊಹಮ್ಮದ್‌ ಬಘೇರಿ ತಿಳಿಸಿದ್ದಾರೆ. ಅಣೆಕಟ್ಟು ಉದ್ಘಾಟಿಸಲು ಬಂದಿದ್ದರು: ಅಜರ್‌ಬೈಜಾನ್‌ನಲ್ಲಿ ಅರಾಸ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟು ಉದ್ಘಾಟನೆಗಾಗಿ ರೈಸಿ ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ಅಜರ್‌ಬೈಜಾನ್ ಅಧ್ಯಕ್ಷ ಇಲ್ಹಮ್‌ ಅಲಿಯೆವ್ ಅವರು ಇದ್ದರು. ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ ಜೊತೆಗೆ ಬೆಂಗಾವಲಿನ ಎರಡು ಹೆಲಿಕಾಪ್ಟರ್‌ಗಳು ಹಾರಾಟ ಆರಂಭಿಸಿದ್ದವು. ಅವು ಸುರಕ್ಷಿತವಾಗಿ ನಿಗದಿತ ತಾಣ ತಲುಪಿವೆ ಎಂದು ತಾನಿಂ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT