ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬ್ರಿಟಿಷ್ ಪ್ರಜೆಯಾಗಿದ್ದು, ಬ್ರಿಟನ್ ಸರ್ಕಾರಕ್ಕೆ ವಾರ್ಷಿಕ ರಿಟರ್ನ್ ಸಲ್ಲಿಸಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ರಾಹುಲ್ ಅವರು ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎನ್ನಲಾದ ವಾರ್ಷಿಕ ರಿಟರ್ನ್ ಪ್ರತಿಯನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಸ್ವಾಮಿ, ‘ಇದು ರಾಹುಲ್ ಗಾಂಧಿ ಅವರು ಬ್ರಿಟಿಷ್ ಪ್ರಜೆಯಾಗಿ ಬ್ರಿಟನ್ ಸರ್ಕಾರಕ್ಕೆ ಸಲ್ಲಿಸಿದ ವಾರ್ಷಿಕ ರಿಟರ್ನ್ ಆಗಿದೆ. ಆದರೆ, ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳದಂತೆ ಸೋನಿಯಾ ಗಾಂಧಿ ಅವರಿಂದ ಮೋದಿಗೆ ಬ್ಲ್ಯಾಕ್ ಮೇಲ್ ಮಾಡಲಾಗಿದೆಯೇ’ ಎಂದು ಪ್ರಶ್ನಿಸಿದ್ದಾರೆ.
This is Rahul Gandhi’s Annual Return filed with the British Government as a British citizen. Is Modi blackmailed by Sonia to not take action? pic.twitter.com/iz5YLJtmIC
— Subramanian Swamy (@Swamy39) August 10, 2024
ಸುಬ್ರಮಣಿಯನ್ ಸ್ವಾಮಿ ಅವರು ಬಿಜೆಪಿಯ ಭಾಗವಾಗಿದ್ದರೂ ಆಗಾಗ್ಗೆ ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಈಚೆಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಟೈಟಾನಿಕ್ ಹಡಗಿನಂತೆ ಮುಳುಗಲಿದೆ ಎಂದು ಸ್ವಾಮಿ ಟೀಕಿಸಿದ್ದರು.
ಬಾಂಗ್ಲಾದೇಶದ ಅಶಾಂತಿಯ ಬಗ್ಗೆ ಮೋದಿಯನ್ನು ಗುರಿಯಾಗಿಸಿದ್ದ ಸ್ವಾಮಿ, ‘ಮುಸ್ಲಿಮರು ಬಾಂಗ್ಲಾದೇಶದ ಲೇಡಿ ಪ್ರಧಾನಮಂತ್ರಿಯನ್ನು (ಶೇಖ್ ಹಸೀನಾ) ಹೊರಹಾಕಿದಾಗ ಮೋದಿ ನಡುಗುತ್ತಿದ್ದಾರೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮೋದಿ ಯಾವಾಗ ಬೇಕಿದ್ದರೂ ಕೈಕೊಡಬಹುದು ಎಂದು ಸ್ವಾಮಿ ವ್ಯಂಗ್ಯವಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.