ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ISIS ಭಾರತ ಘಟಕದ ಮುಖ್ಯಸ್ಥ ಸೇರಿ ಇಬ್ಬರ ಬಂಧನ

Published 20 ಮಾರ್ಚ್ 2024, 16:41 IST
Last Updated 20 ಮಾರ್ಚ್ 2024, 16:41 IST
ಅಕ್ಷರ ಗಾತ್ರ

ಗುವಾಹಟಿ: ಐಎಸ್‌ಐಎಸ್ ಭಯೋತ್ಪಾದಕ ಸಂಘಟನೆಯ ಭಾರತ ಘಟಕದ ಮುಖ್ಯಸ್ಥ ಮತ್ತು ಆತನ ಸಹಚರನನ್ನು ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಗ್ಲಾದೇಶದ ಗಡಿ ದಾಟುತ್ತಿದ್ದ ಅವರನ್ನು ಸೆರೆಹಿಡಿಯಲಾಯಿತು ಎಂದೂ ಅವರು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಧರ್ಮಶಾಲಾ ಪ್ರದೇಶದಲ್ಲಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ, ಅವರನ್ನು ಗುವಾಹಟಿಯ ಎಸ್‌ಟಿಎಫ್ ಕಚೇರಿಗೆ ಕರೆತರಲಾಯಿತು ಎಂದು ಅಸ್ಸಾಂ ಪೊಲಿಸ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ(ಸಿಪಿಆರ್‌ಒ) ಪ್ರಣಬ್ ಜ್ಯೋತಿ ಗೋಸ್ವಾಮಿ ತಿಳಿಸಿದ್ದಾರೆ.

‘ಬಂಧಿತರ ಗುರುತು ಪತ್ತೆ ಮಾಡಲಾಗಿದೆ. ಬಂಧಿತ ಹ್ಯಾರಿಸ್ ಫಾರೂಕಿ ಅಲಿಯಾಸ್ ಹ್ಯಾರಿಸ್ ಅಜ್ಮಲ್ ಫಾರೂಕಿ ಡೆಹ್ರಾಡೂನ್‌ನ ಚಕ್ರತಾ ನಿವಾಸಿಯಾಗಿದ್ದು,, ಐಎಸ್‌ಐಎಸ್‌ನ ಭಾರತ ಘಟಕದ ಮುಖ್ಯಸ್ಥ’ ಎಂದು ಹೇಳಿದ್ದಾರೆ.

ಈತನ ಸಹಚರ ಪಾಣಿಪತ್‌ನ ಅನುರಾಗ್ ಸಿಂಗ್ ಅಲಿಯಾಸ್ ರೆಹಾನ್ ಇಸ್ಲಾಂಗೆ ಮತಾಂತರಗೊಂಡಿದ್ದು, ಈತನ ಪತ್ನಿ ಬಾಂಗ್ಲಾದೇಶ ಮೂಲದವರು ಎಂದು ತಿಳಿದುಬಂದಿರುವುದಾಗಿ ಹೇಳಿದ್ಧಾರೆ.

'ಈ ಇಬ್ಬರೂ ಐಎಸ್‌ಐಎಸ್‌ನಿಂದ ಬಹಳ ಪ್ರಭಾವಿ ನಾಯಕರಾಗಿದ್ದು, ಭಾರತದಲ್ಲಿ ಐಎಸ್‌ಐಎಸ್‌ಗೆ ನೇಮಕ, ಭಯೋತ್ಪಾದನೆಗೆ ಹಣದ ನೆರವು ಮತ್ತು ಐಇಡಿಗಳನ್ನು ಬಳಸಿ ದೇಶದಾದ್ಯಂತ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು’ ಎಂದು ಸಿಪಿಆರ್‌ಒ ತಿಳಿಸಿದ್ದಾರೆ.

ಈ ಇಬ್ಬರ ವಿರುದ್ಧ ಎನ್‌ಐಎ, ಎಟಿಎಸ್‌ನ ದೆಹಲಿ ಮತ್ತು ಲಖನೌ ಘಟಕಗಳಲ್ಲಿ ಹಲವು ಪ್ರಕರಣಗಳ ವಿಚಾರಣೆ ಬಾಕಿ ಇದೆ. ಹೀಗಾಗಿ, ಅಸ್ಸಾಂನ ಎಸ್‌ಟಿಎಫ್ ಈ ಇಬ್ಬರನ್ನೂ ಹೆಚ್ಚಿನ ತನಿಖೆಗೆ ಎನ್‌ಐಎ ವಶಕ್ಕೆ ನೀಡಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT