ನವದೆಹಲಿ: ಉತ್ತರ ಪ್ರದೇಶ ಮತ್ತು ದೆಹಲಿಯಿಂದ ಕಾರ್ಯಾಚರಿಸುತ್ತಿರುವ ಐಎಸ್ಐಎಸ್ ಉಗ್ರ ಸಂಘಟನೆ ಪ್ರಭಾವಿತ ಘಟಕವು ದೇಶದ ಪ್ರಮುಖ ಸ್ಥಳಗಳಲ್ಲಿ ಹಾಗೂ ಗಣ್ಯರನ್ನು ಗುರಿಯಾಗಿಸಿ ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸಿತ್ತು ಎಂದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬುಧವಾರ ಬಹಿರಂಗ ಪಡಿಸಿದೆ.
ಹದಿನೇಳಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ, ಶೋಧ ಕಾರ್ಯ ನಡೆಸಿರುವ ಎನ್‌ಐಎ ಅಧಿಕಾರಿಗಳು ಒಟ್ಟು 16 ಮಂದಿಯನ್ನು ವಿಚಾರಣೆಗೆ ಒಳಪಡಿಸಿತ್ತು. ಇವರಲ್ಲಿ ಹತ್ತು ಜನರನ್ನು ಬಂಧಿಸಲಾಗಿದ್ದು, ಉಳಿದ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಮಸೀದಿಯಲ್ಲಿ ಕೆಲಸ ಮಾಡುತ್ತಿದ್ದ ಇಸ್ಲಾಂ ಅನುಯಾಯಿ ಈ ತಂಡದ ನಾಯಕತ್ವ ವಹಿಸಿದ್ದಾನೆ.
ಈ ತಂಡದಲ್ಲಿ ಸಿವಿಲ್ ಎಂಜಿನಿಯರ್, ಪದವಿ ವಿದ್ಯಾರ್ಥಿ ಹಾಗೂ ಆಟೋ–ರಿಕ್ಷಾ ಚಾಲಕ ಸೇರಿದಂತೆ ಹಲವರು ಇದ್ದಾರೆ. ’ಹರ್ಕತ್ ಉಲ್ ಹರ್ಬ್ ಎ ಇಸ್ಲಾಂ’ ಎಂದು ಈ ಗುಂಪನ್ನು ಹೆಸರಿಸಿಕೊಂಡಿದ್ದು, ದೆಹಲಿ ಸೇರಿ ಉತ್ತರ ಭಾರತದಲ್ಲಿ ಆತ್ಮಾಹುತಿ ದಾಳಿಗೆ ಸಿದ್ಧತೆ ನಡೆಸಿದ್ದರು.
#WATCH NIA conducts a raid in Delhi's Jafrabad area in connection with a new ISIS module styled as 'Harkat ul Harb e Islam' . pic.twitter.com/GL1GjOa1tq
— ANI (@ANI) December 26, 2018
ರಾಕೆಟ್ ಲಾಂಚರ್ ವಶ: ಎನ್‌ಎಐ ವಿವಿಧ ಸ್ಥಳಗಳಲ್ಲಿ ನಡೆಸಿರುವ ದಾಳಿಯಲ್ಲಿ ಸುಮಾರು 25 ಕೆ.ಜಿ. ಸ್ಫೋಟಕ ತಯಾರಿಕಾ ರಾಸಾಯನಿಕ ವಸ್ತುಗಳು, 12 ಪಿಸ್ತೂಲ್, ಆತ್ಮಾಹುತಿ ದಾಳಿಗೆ ನಡೆಸಲು ಸಹಕಾರಿಯಾಗುವ ಒಳಕವಚಗಳು, 100ಕ್ಕೂ ಹೆಚ್ಚು ಅಲಾರ್ಮ್ ಗಡಿಯಾರಗಳು(ಬಾಂಬ್‌ಗಳಲ್ಲಿ ಟೈಮರ್‌ಗಳಾಗಿ ಬಳಸಲು), 100ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು(ರಿಮೋಟ್ ಸಾಧನಗಳಾಗಿ ಬಳಸಿ ಬಾಂಬ್ ಸ್ಫೋಟಿಸಲು), 135 ಸಿಮ್ ಕಾರ್ಡ್, ಲ್ಯಾಪ್‌ಟಾಪ್‌ಗಳು, ₹7.5 ಲಕ್ಷ ನಗದು ಹಾಗೂ ಸ್ಥಳೀಯ ನಿರ್ಮಿತ ರಾಕೆಟ್ ಲಾಂಚರ್ ವಶಕ್ಕೆ ಪಡೆಯಲಾಗಿದೆ.
ಆರ್‌ಎಸ್‌ಎಸ್ ಕಚೇರಿ ಟಾರ್ಗೆಟ್: ದೆಹಲಿ ಪೊಲೀಸ್ ಮುಖ್ಯ ಕಚೇರಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಪ್ರಾದೇಶಿಕ ಕಚೇರಿಯನ್ನು ಗಣರಾಜ್ಯೋತ್ಸವದ ದಿನದಂದು ಸ್ಫೋಟಿಸಲು ಸಂಚು ರೂಪಿಸಿದ್ದರು.
ಎನ್‌ಐಎ ಕಾರ್ಯಾಚರಣೆಯ ಪ್ರಮುಖ ಅಂಶಗಳು
* ಈ ಗುಂಪನ್ನು ನಾಲ್ಕು ತಿಂಗಳ ಹಿಂದೆ ರೂಪಿಸಿಕೊಳ್ಳಲಾಗಿತ್ತು ಹಾಗೂ ಗುಂಪಿಗೆ ಸೇರಿದವರಿಗೆ ಸ್ಥಳೀಯವಾಗಿಯೇ ತರಬೇತಿ ನೀಡಲಾಗುತ್ತಿತ್ತು
* ದೆಹಲಿಯ ಜಫರಾಬಾದ್‌ನಲ್ಲಿ ಗುಂಪಿನ ಮುಖಂಡ ಮುಫ್ತಿ ಸೊಹೈಲ್‌ನನ್ನು ಬಂಧಿಸಲಾಗಿದೆ. ಈತ ಇಸ್ಲಾಂ ಅನುಯಾಯಿಯಾಗಿರುವ ಈತ ಮಸೀದಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ
* ವಿದೇಶದಲ್ಲಿರುವ ವ್ಯಕ್ತಿ ನೀಡುತ್ತಿದ್ದ ಸೂಚನೆಗಳನ್ನು ಅನುಸರಿಸುತ್ತಿದ್ದ ಗುಂಪು. ಆ ವಿದೇಶಿ ವ್ಯಕ್ತಿಯನ್ನು ಪತ್ತೆ ಮಾಡುವ ಕಾರ್ಯ ಚುರುಕಾಗಿದೆ
* ಮುಫ್ತಿ ಸೊಹೈಲ್ ಉತ್ತರ ಪ್ರದೇಶದ ಅಮರೋಹಾ ಮೂಲದವನಾಗಿದ್ದು, ಅದೇ ಸ್ಥಳದ ಇನ್ನೂ ನಾಲ್ವರು ಗುಂಪಿನ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು
* ಗುಂಪಿನ ಚಟುವಟಿಕೆಗಳಿಗೆ ಸಂಬಂಧಿಸಿ ಮಾಹಿತಿಗಳನ್ನು ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಮ್ ಆ್ಯಪ್ ಹಾಗೂ ಮತ್ತೊಂದು ಸಂದೇಶ ರವಾನೆ ಆ್ಯಪ್ ಮೂಲಕ ನಡೆಸುತ್ತಿದ್ದರು
(ಮೂಲ ವರದಿ ಎನ್‌ಡಿಟಿವಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.