ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2040ರ ಹೊತ್ತಿಗೆ ಚಂದ್ರನ ಅಂಗಳಕ್ಕೆ ಮೊದಲ ಗಗನಯಾನಿ: ಇಸ್ರೊ ಯೋಜನೆ

Published 12 ಡಿಸೆಂಬರ್ 2023, 14:53 IST
Last Updated 12 ಡಿಸೆಂಬರ್ 2023, 14:53 IST
ಅಕ್ಷರ ಗಾತ್ರ

ತಿರುವನಂತಪುರ: ‘ಚಂದ್ರಯಾನ–3ರ ಯಶಸ್ಸಿನ ನಂತರ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), 2040ರ ಹೊತ್ತಿಗೆ ಚಂದ್ರನ ಅಂಗಳಕ್ಕೆ ಮೊದಲ ಗಗನಯಾನಿಯನ್ನು ಕಳುಹಿಸುವ ಯೋಜನೆ ಹೊಂದಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದ್ದಾರೆ.

ಮನೋರಮಾ ಇಯರ್‌ಬುಕ್ 2024ಕ್ಕೆ ಬರೆದ ವಿಶೇಷ ಲೇಖನದಲ್ಲಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.

‘ಗಗನಯಾನ’ ಎಂಬ ಯೋಜನೆಯಡಿ ಸದ್ಯ ಭೂಮಿಯ ಕೆಳಕಕ್ಷೆಗೆ ಗಗನಯಾನಿಗಳನ್ನು ಕಳುಹಿಸಿ, ಮೂರು ದಿನಗಳ ನಂತರ ಅವರನ್ನು ಸುರಕ್ಷಿತವಾಗಿ ಮರಳಿ ಭೂಮಿಗೆ ಕರೆತರುವ ತನ್ನ ಚೊಚ್ಚಲ ಯೋಜನೆಯ ಸಿದ್ಧತೆಯಲ್ಲಿದ್ದೇವೆ. ಇದಕ್ಕಾಗಿ ಭಾರತೀಯ ವಾಯುಸೇನೆಯ ನಾಲ್ವರು ಪೈಲಟ್‌ಗಳೂ ಆಯ್ಕೆಗೊಂಡಿದ್ದಾರೆ. ಬೆಂಗಳೂರಿನಲ್ಲಿರುವ ಇಸ್ರೊ ಕೇಂದ್ರ ಕಚೇರಿಯಲ್ಲಿ ಸದ್ಯ ಇವರು ತರಬೇತಿ ಪಡೆಯುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಮಾನವಸಹಿತ ಗಗನಯಾನಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದೆ. ಇದರಲ್ಲಿ ಗಗನಯಾನಿಗಳನ್ನು ಸುರಕ್ಷಿತವಾಗಿ ಕರೆದೊಯ್ಯುವ ವಾಹನ, ಅವರು ಬಾಹ್ಯಾಕಾಶದಲ್ಲಿ ಇರಲು ಅನುಕೂಲಕರವಾದ ನೌಕೆ, ಅದರಲ್ಲಿ ಅವರ ಸುರಕ್ಷತೆಗೆ ಅಗತ್ಯವಿರುವ ಸಾಧನಗಳನ್ನು ಅಳವಡಿಸುವ ಕಾರ್ಯದಲ್ಲಿ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ’ ಎಂದು ವಿವರಿಸಿದ್ದಾರೆ.

’ಒಂದೇ ಮಾದರಿಯ ಮಾನವರಹಿತ ಯೋಜನೆಯಲ್ಲಿ ಏರ್‌ ಡ್ರಾಪ್ ಟೆಸ್ಟ್‌ ಹಾಗೂ ಅಪಾಯದ ಸಂದರ್ಭದಲ್ಲಿ ನೌಕೆಯಿಂದ ಹೊರಕ್ಕೆ ಚಿಮ್ಮುವ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಗಗನಯಾನಿಗಳಿಗೆ ಭೂಮಿಯಲ್ಲಿರುವ ವಾತಾವರಣದಂತೆಯೇ ಗಗನಯಾನಕ್ಕೆ ನೌಕೆಯನ್ನು ಸಿದ್ಧಪಡಿಸಲಾಗುತ್ತಿದೆ. 2023ರ ಅ. 21ರಂದು ಮೊದಲ ಪರೀಕ್ಷಾರ್ಥ ವಾಹನದ ಉಡ್ಡಯನವೂ ಯಶಸ್ವಿಯಾಗಿದೆ. ಅಪಾಯದ ಸಂದರ್ಭದಲ್ಲಿ ಪಾರಾಗಲು ಬಳಸಿದ ಸಾಧನವು ಯಶಸ್ವಿಯಾಗಿದ್ದು, ಕಳುಹಿಸಲಾಗಿದ್ದ ಮಾದರಿಯು ಬಂಗಾಳ ಕೊಲ್ಲಿಯಲ್ಲಿ ಯಶಸ್ವಿಯಾಗಿ ಇಳಿದಿದೆ’ ಎಂದು ಸೋಮನಾಥ್ ಹೇಳಿದ್ದಾರೆ.

‘ಈ ಎಲ್ಲಾ ಪ್ರಕ್ರಿಯೆಗಳು ಸಕಾರಾತ್ಮಕವಾಗಿ ಸಾಗಿದ್ದು, 2025ರ ಹೊತ್ತಿಗೆ ಮಾನವ ಸಹಿತ ಗಗನಯಾನ ಯೋಜನೆ ಜಾರಿಗೊಳಿಸುವ ಯೋಜನೆಯನ್ನು ಇಸ್ರೊ ಹೊಂದಿದೆ. ಸದ್ಯ ಸೂರ್ಯನ ಅಧ್ಯಯನ ನಡೆಸುತ್ತಿರುವ ಆದಿತ್ಯ ಎಲ್‌1 ಯೋಜನೆ ಕೂಡಾ ಇಸ್ರೊ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ’ ಎಂದಿದ್ದಾರೆ.

’ಪ್ರಧಾನಮಂತ್ರಿ ಅವರ ಮಹತ್ವಾಕಾಂಕ್ಷೆಯ ಭಾರತೀಯ ಅಂತರಿಕ್ಷ ನಿಲ್ದಾಣದ ಸ್ಥಾಪನೆ ಯೋಜನೆಗೆ 2035ರ ಗುರಿ ಹಾಕಿಕೊಳ್ಳಲಾಗಿದೆ. ಇದರೊಂದಿಗೆ ಅಂತರಗ್ರಹ ಪರಿಶೋಧನೆಯಲ್ಲಿ ಶುಕ್ರ ಹಾಗೂ ಮಂಗಳ ಗ್ರಹಗಳ ಅಧ್ಯಯನ ನಡೆಸಲಾಗುವುದು. ಆ ಮೂಲಕ ಜಾಗತಿಕ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಬಲಿಷ್ಠಗೊಳಿಸುವುದು ನಮ್ಮ ಉದ್ದೇಶ’ ಎಂದು ಸೋಮನಾಥ್ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT