ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಯಾನ: ಮೊದಲ ಪರೀಕ್ಷಾ ಉಡಾವಣೆ ಯಶಸ್ವಿ

Published 21 ಅಕ್ಟೋಬರ್ 2023, 14:26 IST
Last Updated 21 ಅಕ್ಟೋಬರ್ 2023, 14:26 IST
ಅಕ್ಷರ ಗಾತ್ರ

ಚೆನ್ನೈ/ ಶ್ರೀಹರಿಕೋಟ (ಆಂಧ್ರಪ್ರದೇಶ): ಆರಂಭದಲ್ಲಿ ಕಂಡುಬಂದ ಕೆಲ ತಾಂತ್ರಿಕ ತೊಂದರೆಗಳನ್ನು ಸಮರ್ಥವಾಗಿ ನಿವಾರಿಸಿದ ಇಸ್ರೊ, ಮಾನವ ಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಕೈಗೊಳ್ಳುವ ಸರಣಿ ಪರೀಕ್ಷೆಗಳ ಪೈಕಿ ಮೊದಲ ಪರೀಕ್ಷಾ ಉಡಾವಣೆಯನ್ನು ಶನಿವಾರ ಯಶಸ್ವಿಯಾಗಿ ನಡೆಸಿತು.

ಇತ್ತೀಚೆಗಷ್ಟೆ ಚಂದ್ರಯಾನ–3ರ ಯಶಸ್ವಿನಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ದಾಖಲಿಸಿದ್ದ ಭಾರತವು ಮತ್ತೊಂದು ‘ವಿಕ್ರಮ’ದತ್ತ ಮುನ್ನಡೆದಿರುವುದನ್ನು ಪರೀಕ್ಷಾ ಉಡಾವಣೆ ಸಾರಿದಂತಾಗಿದೆ.

‘ಗಗನಯಾನಿಗಳು ಪಯಣಿಸುವ ಕೋಶ’ವನ್ನು (‌ಕ್ರೂ ಮಾಡ್ಯೂಲ್‌) ಹೊತ್ತ ರಾಕೆಟ್‌ (ಜಿಎಸ್‌ಎಲ್‌ವಿ) ದಟ್ಟ ಹೊಗೆಯನ್ನು ಉಗುಳುತ್ತಾ ರಭಸದಿಂದ ‌ನಭಕ್ಕೆ ಚಿಮ್ಮಿತು. 17 ಕಿ.ಮೀ.ನಷ್ಟು ಎತ್ತರ ತಲುಪಿದ್ದ ರಾಕೆಟ್‌ನಿಂದ ಪ್ರತ್ಯೇಕಗೊಂಡ ‘ಕ್ರೂ ಮಾಡ್ಯೂಲ್‌’, ಬಂಗಾಳ ಕೊಲ್ಲಿಯಲ್ಲಿ ಪೂರ್ವ ನಿರ್ಧರಿತ ಸ್ಥಳದಲ್ಲಿ ಕರಾರುವಾಕ್ಕಾಗಿ ಇಳಿಯುವ ಮೂಲಕ ಇಸ್ರೊ ವಿಜ್ಞಾನಿಗಳ ಕುಶಾಗ್ರಮತಿ–ಪ್ರಯತ್ನಗಳಿಗೆ ಸಾಕ್ಷಿಯಾಯಿತು.

ಇಸ್ರೊ ನಡೆಸಿರುವ ಮೊದಲ ಪರೀಕ್ಷಾ ಉಡಾವಣೆಯು ದೇಶದ ಮೊದಲ ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮವನ್ನು ಸಾಧಿಸುವ ನಿಟ್ಟಿನಲ್ಲಿ ಇಟ್ಟ ಪ್ರಮುಖ ಹೆಜ್ಜೆಯಾಗಿದೆ. ಇಸ್ರೊ ವಿಜ್ಞಾನಿಗಳಿಗೆ ಶುಭಾಶಯಗಳು
ನರೇಂದ್ರ ಮೋದಿ, ಪ್ರಧಾನಿ

ರಾಕೆಟ್‌ನಿಂದ ಬೇರ್ಪಟ್ಟ ಕ್ರೂ ಮಾಡ್ಯೂಲ್‌ ಬೀಳಲಾರಂಭಿಸಿ, ಅದಕ್ಕೆ ಅಳವಡಿಸಿದ್ದ ಪ್ಯಾರಾಚೂಟ್‌ಗಳು ತೆರೆದುಕೊಳ್ಳುತ್ತಿದ್ದಂತೆಯೇ, ಇತ್ತ ನಿಯಂತ್ರಣ ಕೇಂದ್ರದಲ್ಲಿದ್ದ ವಿಜ್ಞಾನಿಗಳು ಹಾಗೂ ಇತರ ತಾಂತ್ರಿಕ ಸಿಬ್ಬಂದಿಯ ಹರ್ಷೋದ್ಗಾರಕ್ಕೆ ಪಾರವೇ ಇರಲಿಲ್ಲ; ಕರತಾಡನವೂ ಮುಗಿಲು ಮುಟ್ಟಿತ್ತು.

ಇತ್ತ, ಸನ್ನದ್ಧರಾಗಿಯೇ ಇದ್ದ ನೌಕಾಪಡೆಯ ಈಸ್ಟರ್ನ್‌ ಕಮಾಂಡ್‌ನ ಸಿಬ್ಬಂದಿ, ಬಂಗಾಳ ಕೊಲ್ಲಿಯಲ್ಲಿ ಇಳಿದಿದ್ದ ಕ್ರೂ ಮಾಡ್ಯೂಲ್‌ ವಶಕ್ಕೆ ಪಡೆದರು. 

ಪರೀಕ್ಷಾ ಉಡಾವಣೆಯ ಯಶಸ್ಸಿನಿಂದ ಬೀಗುತ್ತಿದ್ದ ಇಸ್ರೊ ಮುಖ್ಯಸ್ಥ ಎಸ್‌.ಸೋಮನಾಥ್‌ ಅವರು ‘ಮಿಷನ್‌ ಕಂಟ್ರೋಲ್‌ ಸೆಂಟರ್‌‘ನಿಂದ ಮಾತನಾಡಿ, ‘ಮೊದಲ ಪರೀಕ್ಷಾ ಉಡಾವಣೆ ಯಶಸ್ವಿಯಾಗಿದೆ ಎಂದು ಘೋಷಿಸಲು ಸಂತಸವಾಗುತ್ತದೆ. ಬಂಗಾಳ ಕೊಲ್ಲಿಯಲ್ಲಿ ಇಳಿದಿದ್ದ ಕ್ರೂ ಮಾಡ್ಯೂಲನ್ನು ಚೆನ್ನೈ ಬಂದರಿಗೆ ತರಲಾಗಿದೆ’ ಎಂದು ಹೇಳಿದರು.

ಮೊದಲ ಪರೀಕ್ಷಾ ಉಡಾವಣೆ ಯಶಸ್ವಿಯಾಗಿರುವುದಕ್ಕೆ ಇಸ್ರೊ ವಿಜ್ಞಾನಿಗಳಿಗೆ ಅಭಿನಂದನೆಗಳು. ಮಾನವಸಹಿತ ಗಗನಯಾನ ಕಾರ್ಯಕ್ರಮ ಕುರಿತ ಕಾರ್ಯ 2007ರಿಂದಲೇ ನಡೆದಿತ್ತು. ಈಗ ಅದು ಸಾಕಾರಗೊಳ್ಳುತ್ತಿರುವುದು ಖುಷಿ ತಂದಿದೆ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ 

‘ಗಗನಯಾನ ಸಂದರ್ಭದಲ್ಲಿ ರಾಕೆಟ್‌ ಅವಘಡಕ್ಕೆ ತುತ್ತಾದ ಸಂದರ್ಭದಲ್ಲಿ ಗಗನಯಾನಿಗಳು ಅಲ್ಲಿಂದ ಪಾರಾಗುವುದು ಹೇಗೆ ಎಂಬುದರ ಪ್ರಾತ್ಯಕ್ಷಿಕೆಯೇ ಈ ಪರೀಕ್ಷಾ ಉಡಾವಣೆಯ ಉದ್ದೇಶವಾಗಿತ್ತು’ ಎಂದು ಹೇಳಿದರು.

‘400 ಕಿ.ಮೀ. ಎತ್ತರದಲ್ಲಿರುವ ಭೂ ಕೆಳ ಕಕ್ಷೆಗೆ ಮಾನವರನ್ನು ಕಳಿಸುವುದು. ಮೂರು ದಿನಗಳ ಕಾಲ ಅಂತರಿಕ್ಷ ಯಾನ ನಡೆಸಿದ ನಂತರ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆ ತರುವುದು ಗಗನಯಾನ ಕಾರ್ಯಕ್ರಮದ ಗುರಿಯಾಗಿದೆ’ ಎಂದೂ ಸೋಮನಾಥ್‌ ಹೇಳಿದರು.

ಹರ್ಷೋದ್ಗಾರ

ಕೆಲ ತಿಂಗಳ ಹಿಂದೆ ಚಂದ್ರಯಾನ–3ರ ಗಗನನೌಕೆ ಉಡಾವಣೆ ವೇಳೆ ಶ್ರೀಹರಿಕೋಟದ ಉಡ್ಡಯನ ಕೇಂದ್ರಕ್ಕೆ ಸಮೀಪದಲ್ಲಿ ‌ಜಮಾಯಿಸಿದ್ದ ರೀತಿಯಲ್ಲಿಯೇ ಈ ಬಾರಿಯೂ ಜನರು ಬಂಗಾಳ ಕೊಲ್ಲಿ ತೀರದಲ್ಲಿ ಜಮಾಯಿಸಿದ್ದರು.

ಕ್ರೂ ಮಾಡ್ಯೂಲ್‌ ಹೊತ್ತ ರಾಕೆಟ್‌ ಆಕಾಶಕ್ಕೆ ಚಿಮ್ಮಿ, ಕೆಲ ಹೊತ್ತಿನ ನಂತರ ಕ್ರೂ ಮಾಡ್ಯೂಲ್‌ ಬಂಗಾಳ ಕೊಲ್ಲಿಯಲ್ಲಿನ ನಿಗದಿತ ಸ್ಥಳದಲ್ಲಿ ಸುರಕ್ಷಿತವಾಗಿ ಇಳಿದದ್ದನ್ನು ಜನರು ಕಣ್ತಂಬಿಕೊಂಡು, ಸಂಭ್ರಮಿಸಿದರು.

ಮೊದಲು ಆತಂಕ...ಮತ್ತೆ ಗೆಲುವಿನ ನಗೆ–ಸಂಭ್ರಮ

ಮಾನವ ಸಹಿತ ಗಗನಯಾನಕ್ಕೂ ಮೊದಲು ಕೈಗೊಂಡಿದ್ದ ಮೊದಲ ಪರೀಕ್ಷಾ ಉಡಾವಣೆಗೆ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಶನಿವಾರ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದರೂ ಬೆಳಿಗ್ಗೆ ಪ್ರತಿಕೂಲ ಹವಾಮಾನದಿಂದಾಗಿ ವಿಜ್ಞಾನಿಗಳ ಮೊಗದಲ್ಲಿ ನಗು ಮಾಯವಾಗಿತ್ತು. ಹೀಗಾಗಿ ಮೊದಲು ಬೆಳಿಗ್ಗೆ 8ಕ್ಕೆ ನಿಗದಿಯಾಗಿದ್ದ ಉಡ್ಡಯನವನ್ನು 8.30ಕ್ಕೆ ನಂತರ ಮತ್ತೆ 15 ನಿಮಿಷಗಳಷ್ಟು ಮುಂದೂಡಲಾಯಿತು.

‘ಕ್ರೂ ಮಾಡ್ಯೂಲ್‌’ ಹೊತ್ತ ರಾಕೆಟ್‌ ಆಕಾಶಕ್ಕೆ ಚಿಮ್ಮಲು 4 ಸೆಕೆಂಡುಗಳು ಬಾಕಿ ಇದ್ದಾಗ ನಿಯಂತ್ರಣ ಕೇಂದ್ರದ ಕಂಪ್ಯೂಟರ್‌ ಪರದೆಗಳ ಮೇಲೆ ಮೂಡಿದ ‘ಹೋಲ್ಡ್‌’ ಎಂಬ ಸಂದೇಶ ವಿಜ್ಞಾನಿಗಳಲ್ಲಿ ಆತಂಕ ಮನೆ ಮಾಡಲು ಕಾರಣವಾಯಿತು.

‘ಪರೀಕ್ಷಾ ಉಡಾವಣೆ ಮೇಲೆ ಕಣ್ಗಾಲಿಸಿರುವ ವ್ಯವಸ್ಥೆಯಲ್ಲಿ ಕಂಡುಬಂದಿದ್ದ ವ್ಯತ್ಯಾಸವೇ ಈ ಸಂದೇಶ ಬರಲು ಕಾರಣವಾಗಿತ್ತು. ಬಹಳ ತ್ವರಿತವಾಗಿಯೇ ಸಮಸ್ಯೆಯನ್ನು ಪತ್ತೆ ಮಾಡಿ ಸರಿಪಡಿಸಿದೆವು’ ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾ‌ಥ್‌ ಮಾಹಿತಿ ನೀಡಿದರು.

ಮಾನವ ಸಹಿತ ಗಗನಯಾನ ಸಂದರ್ಭದಲ್ಲಿ ರಾಕೆಟ್‌ನಲ್ಲಿ ಅವಘಡ ಸಂಭವಿಸಿದ ವೇಳೆ ಕ್ರೂ ಮಾಡ್ಯೂಲ್‌ನಲ್ಲಿರುವ ಗಗನಯಾನಿಗಳು ಸುರಕ್ಷಿತವಾಗಿ ಪಾರಾಗುವುದೇ ಈ ಬಾಹ್ಯಾಕಾಶ ಕಾರ್ಯಕ್ರಮದ ಮಹತ್ವದ ಭಾಗ. ಇಂದು ನಡೆದ ಮೊದಲ ಪರೀಕ್ಷಾ ಉಡಾವಣೆ ಯಶಸ್ವಿಯಾಗಿದೆ. ಹಕ್ಕಿಯೊಂದು ತನ್ನ ಮರಿಯನ್ನು ಸುರಕ್ಷಿತ ತಾಣಕ್ಕೆ ಒಯ್ಯುವ ರೀತಿಯಲ್ಲಿಯೇ ಈ ಪ್ರಾತ್ಯಕ್ಷಿಕೆ ನಡೆದಿದೆ.
ಆರ್‌.ಹಟ್ಟನ್‌, ಕ್ರೂ ಮಾಡ್ಯೂಲ್‌ ವಿನ್ಯಾಸ ಮತ್ತು ಅಭಿವೃದ್ಧಿ ಕಾರ್ಯಕ್ರಮದ ನಿರ್ದೇಶಕ

‘ಉಡ್ಡಯನಕ್ಕೆ ಅಗತ್ಯವಿದ್ದ ಅನಿಲಗಳನ್ನು ಪುನಃ ಭರ್ತಿ ಮಾಡಲಾಯಿತು. ನಂತರ ಉಡ್ಡಯನ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ಹಂತಗಳ ವ್ಯವಸ್ಥೆಗಳು ಸುಸ್ಥಿತಿಯಲ್ಲಿವೇ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಲಾಯಿತು. ನಿಯಂತ್ರಣ ಕೇಂದ್ರದ ಕಂಪ್ಯೂಟರ್‌ಗಳು ಉಡ್ಡಯನಕ್ಕೆ ಮುದ್ರೆ ಒತ್ತಿದ ನಂತರ 34.9 ಕೆ.ಜಿ ಭಾರದ ನೌಕೆಯನ್ನು ಹೊತ್ತ ರಾಕೆಟ್‌ ನಭಕ್ಕೆ ಚಿಮ್ಮಿತು’ ಎಂದು ವಿವರಿಸಿದರು.

‘ಉಡ್ಡಯನ ವ್ಯವಸ್ಥೆಯಲ್ಲಿದ್ದ ದೋಷವನ್ನು ನಮ್ಮ ತಂಡ ಪತ್ತೆ ಹಚ್ಚಿ ಅಷ್ಟೇ ತ್ವರಿತವಾಗಿ ಸರಿಪಡಿಸಿರುವುದು ನನಗೆ ಸಂತಸ ತಂದಿದೆ. ಗಗನಯಾನ ಕಾರ್ಯಕ್ರಮದ ಭಾಗವಾಗಿರುವ ಪ್ರತಿಯೊಬ್ಬರಿಗೂ ಇದು ದೊಡ್ಡ ತರಬೇತಿಯೇ ಸರಿ’ ಎಂದೂ ಹೇಳಿದರು.

ಮಾನವ ಸಹಿತ ಗಗನಯಾನ ಪೂರ್ವಭಾವಿಯಾಗಿ ಇಸ್ರೊ ಕೈಗೊಂಡಿದ್ದ ಮೊದಲ ಪರೀಕ್ಷಾ ಉಡಾವಣೆಯ ಭಾಗವಾದ ಕ್ರೂ ಮಾಡ್ಯೂಲ್‌ ಹೊತ್ತ ರಾಕೆಟ್‌ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್‌ ಬಾಹ್ಯಾಕಾಶ ಕೇಂದ್ರದ ಉಡ್ಡಯನ ನೆಲೆಯಿಂದ ‌ಶನಿವಾರ ನಭಕ್ಕೆ ಚಿಮ್ಮಿತು – ಪಿಟಿಐ ಚಿತ್ರ 
ಮಾನವ ಸಹಿತ ಗಗನಯಾನ ಪೂರ್ವಭಾವಿಯಾಗಿ ಇಸ್ರೊ ಕೈಗೊಂಡಿದ್ದ ಮೊದಲ ಪರೀಕ್ಷಾ ಉಡಾವಣೆಯ ಭಾಗವಾದ ಕ್ರೂ ಮಾಡ್ಯೂಲ್‌ ಹೊತ್ತ ರಾಕೆಟ್‌ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್‌ ಬಾಹ್ಯಾಕಾಶ ಕೇಂದ್ರದ ಉಡ್ಡಯನ ನೆಲೆಯಿಂದ ‌ಶನಿವಾರ ನಭಕ್ಕೆ ಚಿಮ್ಮಿತು – ಪಿಟಿಐ ಚಿತ್ರ 
ಮಾನವ ಸಹಿತ ಗಗನಯಾನ ಪೂರ್ವಭಾವಿಯಾಗಿ ಇಸ್ರೊ ಕೈಗೊಂಡಿದ್ದ ಮೊದಲ ಪರೀಕ್ಷಾ ಉಡಾವಣೆಯನ್ನು ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿದ್ದ ಶಾಲಾ ಮಕ್ಕಳು ವೀಕ್ಷಿಸಿ ಸಂಭ್ರಮಿಸಿದರು –ಪಿಟಿಐ ಚಿತ್ರ 

Sriharikota: Students gather for the launch of ISRO
ಮಾನವ ಸಹಿತ ಗಗನಯಾನ ಪೂರ್ವಭಾವಿಯಾಗಿ ಇಸ್ರೊ ಕೈಗೊಂಡಿದ್ದ ಮೊದಲ ಪರೀಕ್ಷಾ ಉಡಾವಣೆಯನ್ನು ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿದ್ದ ಶಾಲಾ ಮಕ್ಕಳು ವೀಕ್ಷಿಸಿ ಸಂಭ್ರಮಿಸಿದರು –ಪಿಟಿಐ ಚಿತ್ರ  Sriharikota: Students gather for the launch of ISRO
ರಾಕೆಟ್‌ನಿಂದ ಪ್ರತ್ಯೇಕಗೊಂಡ ಕ್ರೂ ಮಾಡ್ಯೂಲ್‌ ಬಂಗಾಳ ಕೊಲ್ಲಿಯಲ್ಲಿ ಪೂರ್ವನಿಗದಿತ ಸ್ಥಳದಲ್ಲಿ ಶನಿವಾರ ಇಳಿಯಿತು –ಪಿಟಿಐ ಚಿತ್ರ 
ರಾಕೆಟ್‌ನಿಂದ ಪ್ರತ್ಯೇಕಗೊಂಡ ಕ್ರೂ ಮಾಡ್ಯೂಲ್‌ ಬಂಗಾಳ ಕೊಲ್ಲಿಯಲ್ಲಿ ಪೂರ್ವನಿಗದಿತ ಸ್ಥಳದಲ್ಲಿ ಶನಿವಾರ ಇಳಿಯಿತು –ಪಿಟಿಐ ಚಿತ್ರ 
ರಾಕೆಟ್‌ನಿಂದ ಪ್ರತ್ಯೇಕಗೊಂಡ ಕ್ರೂ ಮಾಡ್ಯೂಲ್‌ ಬಂಗಾಳ ಕೊಲ್ಲಿಯಲ್ಲಿ ಪೂರ್ವನಿಗದಿತ ಸ್ಥಳದಲ್ಲಿ ಶನಿವಾರ ಇಳಿಯಿತು –ಪಿಟಿಐ ಚಿತ್ರ 
ರಾಕೆಟ್‌ನಿಂದ ಪ್ರತ್ಯೇಕಗೊಂಡ ಕ್ರೂ ಮಾಡ್ಯೂಲ್‌ ಬಂಗಾಳ ಕೊಲ್ಲಿಯಲ್ಲಿ ಪೂರ್ವನಿಗದಿತ ಸ್ಥಳದಲ್ಲಿ ಶನಿವಾರ ಇಳಿಯಿತು –ಪಿಟಿಐ ಚಿತ್ರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT