ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರ ಪ್ರತಿಭಟನೆ | ಪ್ರಚಾರಕ್ಕಾಗಿಯೇ ಅರ್ಜಿ ಸಲ್ಲಿಸಬೇಡಿ: ಸುಪ್ರೀಂ ಕೋರ್ಟ್‌

Published 4 ಮಾರ್ಚ್ 2024, 13:33 IST
Last Updated 4 ಮಾರ್ಚ್ 2024, 13:33 IST
ಅಕ್ಷರ ಗಾತ್ರ

ನವದೆಹಲಿ: ‘ರೈತರ ಪ್ರತಿಭಟನೆಗೆ ಸಂಬಂಧಿಸಿದ ವಿಷಯಗಳು ತೀರಾ ಗಂಭೀರವಾದವು. ಇದಕ್ಕೆ ಸಂಬಂಧಿಸಿದಂತೆ ಕೇವಲ ಪ್ರಚಾರಕ್ಕಾಗಿ ಸಾರ್ವಜನಿತ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬಾರದು’ ಎಂದು ಸುಪ್ರೀಂ ಕೋರ್ಟ್‌ ಕಿವಿಮಾತು ಹೇಳಿದೆ. 

ಸಿಖ್‌ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಗ್ನೋಸ್ಟೋಸ್ ಥಿಯೋಸ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠವು ಈ ಮಾತು ಹೇಳಿತು.

ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ರೈತರ ಹಕ್ಕನ್ನು ಕೇಂದ್ರ ಮತ್ತು ಕೆಲ ರಾಜ್ಯ ಸರ್ಕಾರಗಳು ಹತ್ತಿಕ್ಕುತ್ತಿವೆ ಎಂದು ಅರ್ಜಿದಾರರು ಆರೋಪಿಸಿದ್ದರು. ಅರ್ಜಿಯನ್ನು ಗಮನಿಸುತ್ತಿದ್ದಂತೆ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಅದನ್ನು ವಾಪಸು ಪಡೆಯುವಂತೆಯೂ ಸೂಚಿಸಿತು.

‘ಕೇವಲ ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಬಾರದು. ನಿಜವಾಗಿ ಗಂಭೀರತೆ ಮತ್ತು ಬದ್ಧತೆ ಉಳ್ಳವರು ಮಾತ್ರ ಅರ್ಜಿ ಸಲ್ಲಿಸಬೇಕು. ದಿನಪತ್ರಿಕೆಗಳನ್ನು ನೀವು ಗಮನಿಸಿದ್ದೇ ಆಗಿದ್ದರೆ ಹೈಕೋರ್ಟ್‌ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವುದೂ ನಿಮಗೆ ತಿಳಿದಿರುತ್ತದೆ’ ಎಂದು ಪೀಠ ಹೇಳಿತು.

‘ಹೈಕೋರ್ಟ್‌ ಈ ಬಗ್ಗೆ ಈಗಾಗಲೇ ಕೆಲವು ನಿರ್ದೇಶನಗಳನ್ನು ನೀಡಿದೆ ಎಂಬುದು ನಿಮಗೆ ಗೊತ್ತಿರಬೇಕು. ಮುಂದಿನ ಬಾರಿ ಎಚ್ಚರಿಕೆಯಿಂದಿರಿ. ಇವು ಸಂಕೀರ್ಣವಾದ ವಿಷಯಗಳು. ಹೆಚ್ಚಿನ ಅಧ್ಯಯನವನ್ನು ಮಾಡಿ’ ಎಂದು ಅರ್ಜಿದಾರರ ಪರ ವಕೀಲರಿಗೆ ತಾಕೀತು ಮಾಡಿತು.

‘ನವದೆಹಲಿಗೆ ಸಂಪರ್ಕ ಕಲ್ಪಿಸುವ ಗಡಿಯನ್ನು ಮುಚ್ಚಿರುವ ಕೇಂದ್ರ, ಕೆಲ ರಾಜ್ಯ ಸರ್ಕಾರಗಳು ರೈತರಿಗೆ ಬೆದರಿಕೆ ಒಡ್ಡಿವೆ. ನಿಷೇಧಾಜ್ಧೆ ಹೇರಿವೆ. ಕೆಲವರನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿರ್ಬಂಧಿಸಲಾಗಿದೆ’ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT