ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು | ಅಮರನಾಥ ಯಾತ್ರೆಗೆ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್ ಸಿನ್ಹಾ ಚಾಲನೆ

Published 30 ಜೂನ್ 2023, 13:10 IST
Last Updated 30 ಜೂನ್ 2023, 13:10 IST
ಅಕ್ಷರ ಗಾತ್ರ

ಜಮ್ಮು: ಅಮರನಾಥ ಯಾತ್ರೆಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್ ಸಿನ್ಹಾ ಶುಕ್ರವಾರ, ಇಲ್ಲಿನ ಭಗವತಿ ನಗರದಲ್ಲಿರುವ ಶಿಬಿರದಲ್ಲಿ ಚಾಲನೆ ನೀಡಿದರು.

ದಕ್ಷಿಣ ಕಾಶ್ಮೀರದಲ್ಲಿನ ಹಿಮಾಲಯ ಪರ್ವತದ 3,880 ಮೀಟರ್ ಎತ್ತರದಲ್ಲಿನ ಗುಹೆಯೊಳಗಿರುವ ಶಿವನ ದರ್ಶನ ಪಡೆಯಲು 3,400 ಯಾತ್ರಿಗಳ ಮೊದಲ ತಂಡ, ಬಹು ಹಂತದ ಭದ್ರತೆಯೊಂದಿಗೆ ಬೇಸ್‌ ಕ್ಯಾಂಪ್‌ನಿಂದ ಪ್ರಯಾಣ ಆರಂಭಿಸಿತು.

ಸಿಆರ್‌ಪಿಎಫ್‌ ಪೊಲೀಸರು ಯಾತ್ರಿಗಳ ತಂಡಕ್ಕೆ ಬೆಂಗಾವಲಾಗಿ ಭದ್ರತೆ ಒದಗಿಸಿದ್ದಾರೆ. ಸೇನೆ, ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಯಾತ್ರೆ ಸಾಗುವ ಹಾದಿಯುದ್ದಕ್ಕೂ ರಕ್ಷಣೆಗೆ ಸಜ್ಜಾಗಿದ್ದಾರೆ.

62 ದಿನದ ಈ ಯಾತ್ರೆ ಅನಂತನಾಗ್ ಜಿಲ್ಲೆಯ ನೂನ್ವಾನ್‌–ಪಹಲ್‌ಗಾಮ್‌ನ ಸಾಂಪ್ರದಾಯಿಕ 48 ಕಿ.ಮೀ. ದೂರದ ಮಾರ್ಗ ಹಾಗೂ ಗಂಡೇರಬಾಲ್ ಜಿಲ್ಲೆಯಲ್ಲಿರುವ 14 ಕಿ.ಮೀ. ದೂರದ ಕಡಿದಾದ ಬಾಲ್‌ಟಾಲ್‌ ಮಾರ್ಗದಲ್ಲಿ ಶನಿವಾರದಿಂದ ಶುರುವಾಗಲಿದೆ.

‘ಈಗಾಗಲೇ 3.5 ಲಕ್ಷ ಯಾತ್ರಿಗಳು ಹೆಸರು ನೋಂದಾಯಿಸಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಜಮ್ಮುವಿನಲ್ಲಿ 33 ವಸತಿ ಕೇಂದ್ರ ಸ್ಥಾಪಿಸಲಾಗಿದೆ. ನೋಂದಣಿ ಕೇಂದ್ರಗಳಲ್ಲಿ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ (ಆರ್‌ಎಫ್‌ಐಡಿ) ಟ್ಯಾಗ್‌ ನೀಡಲಾಗುವುದು. ಇದನ್ನು ಪಡೆಯುವುದು ಕಡ್ಡಾಯ. ತತ್ಕಾಲ್‌ ನೋಂದಣಿಗಾಗಿ ವೈಷ್ಣವಿಧಾಮ, ಮಹಾಜನ ಸಭಾ, ಪಂಚಾಯತ್ ಘರ್‌ನಲ್ಲಿ ಯಾತ್ರಿಗಳಿಗಾಗಿಯೂ; ಸಂತರಿಗಾಗಿ ಗೀತಾ ಭವನ ಮತ್ತು ರಾಮಮಂದಿರದಲ್ಲಿ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ’ ಎಂದು ಜಮ್ಮು ಜಿಲ್ಲಾಧಿಕಾರಿ ಅವ್ನಿ ಲಾವಾಸಾ ತಿಳಿಸಿದ್ದಾರೆ.

‘ಅಮರನಾಥ ಯಾತ್ರೆಯ ಮೊದಲ ತಂಡಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ. ಸ್ಥಳೀಯ ಆಡಳಿತ ಯಾತ್ರಿಗಳಿಗೆ ಸಕಲ ಸೌಲಭ್ಯ ಕಲ್ಪಿಸಿದೆ’ ಎಂದು ಬಿಜೆಪಿ ಮುಖಂಡ ದೇವೇಂದರ್‌ ಸಿಂಗ್ ರಾಣಾ ತಿಳಿಸಿದರು.

‘ನಾಗ್ಪುರದಿಂದ ಮೊದಲ ಬಾರಿಗೆ ನಾವು 19 ಮಂದಿ ಅಮರನಾಥ ಯಾತ್ರೆಗೆ ಬಂದಿದ್ದೇವೆ. ಶಿವನ ಹಿಮಲಿಂಗವನ್ನು ಪ್ರಥಮ ಬಾರಿಗೆ ದರ್ಶಿಸುವ ತಂಡ ನಮ್ಮದೇ ಆಗಲಿದೆ’ ಎಂದು ಸುಶೀಲ್‌ಕುಮಾರ್‌ ಹೇಳಿದರು.

‘ಒಂಬತ್ತನೇ ಬಾರಿಗೆ ಯಾತ್ರೆಗೆ ಬಂದಿರುವೆ. ಜಗತ್ತಿನಲ್ಲಿ ಶಿವನೇ ಸರ್ವಶ್ರೇಷ್ಠ. ಇಲ್ಲಿಗೆ ಭೇಟಿ ನೀಡಿದ ಬಳಿಕ ನನ್ನ ಮನಸ್ಸಿಗೆ ಸಮಾಧಾನ ದೊರೆಯಲಿದೆ’ ಎಂದರು ಉತ್ತರಪ್ರದೇಶದ ಎನ್‌.ಕೆ.ಮಿಶ್ರಾ.

‘ಕೋವಿಡ್‌ನಿಂದ ನನ್ನ ಅತ್ತೆ–ಮಾವನ ಅಮರನಾಥ ಯಾತ್ರೆಯ ಕನಸು ಈಡೇರಿರಲಿಲ್ಲ. ಆಗ ಅವರಿಗೆ ನಾನು ಮಾತು ಕೊಟ್ಟಿದ್ದೆ. ಅದರಂತೆ ಇಬ್ಬರನ್ನೂ ಈ ಬಾರಿ ಯಾತ್ರೆಗೆ ಕರೆದುಕೊಂಡು ಬಂದಿರುವೆ. ಇದು ನನ್ನಲ್ಲಿ ಸಂತಸ ಮೂಡಿಸಿದೆ’ ಎಂದು ಕೋಲ್ಕತ್ತಾದ ಮಹಿಳೆ ಗುಡ್ಡಿಚೌಧರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT