ಛತ್ರಪತಿ ಸಂಭಾಜಿನಗರ: ಮರಾಠ ಸಮುದಾಯಕ್ಕೆ ಮೀಸಲಾತಿಯ ಅಗತ್ಯವನ್ನು ಪ್ರಶ್ನಿಸಿದ ಬಲಪಂಥೀಯ ನಾಯಕ ಸಂಭಾಜಿ ಭಿಡೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ವಿರುದ್ಧ ಮರಾಠ ಮೀಸಲು ಹೋರಾಟಗಾರ ಮನೋಜ್ ಜಾರಂಗೆ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಂಗೆ, ‘ಫಡಣವೀಸ್ ಅವರ ಮಾತುಗಳನ್ನೇ ಭಿಡೆ ಮಾತನಾಡುತ್ತಿದ್ದಾರೆ. ಫಡಣವೀಸ್, ನನ್ನ ವಿರುದ್ಧ ಭಿಡೆ ಅವರನ್ನು ಹೊಸ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ಮರಾಠ ಸಮುದಾಯವು ಬಿಜೆಪಿ ಮತ್ತು ಫಡಣವೀಸ್ ಅವರಿಂದ ದೂರ ಹೋಗುತ್ತಿದೆ’ ಎಂದರು.
ಇದೇ ವೇಳೆ, ಜಾರಂಗೆ ಅವರು ತಾವು ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮರಾಠ ಸಮುದಾಯದ ಜನರ ಸಂಖ್ಯೆಯ ಕುರಿತು ಮಾತನಾಡಿದ್ದ ಸಚಿವ ಛಗನ್ ಭುಜಬಲ್ ಅವರ ವಿರುದ್ಧವೂ ಕಿಡಿಕಾರಿದರು.
ಆ.13ರಂದು ನಾಸಿಕ್‌ನಲ್ಲಿ ಜಾರಂಗೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ 8,000 ಮರಾಠರು ಮಾತ್ರವೇ ಭಾಗಿಯಾಗಿದ್ದರು ಎಂದು ಭುಜಬಲ್ ಹೇಳಿದ್ದರು.
‘ಬೀದಿಗಿಳಿದ ಮರಾಠರ ಸಂಖ್ಯೆಯ ಕುರಿತು ಭುಜಬಲ್ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದಾದರೆ ಅವರನ್ನು ಆರ್‌ಟಿಒ ಅಧಿಕಾರಿಯನ್ನಾಗಿ ಮಾಡಬಹುದಿತ್ತು. ವಾಹನಗಳಲ್ಲಿ ಬರುವ ಮರಾಠರನ್ನು ಎಣಿಸಲು ಕೈಯಲ್ಲಿ ಸೀಟಿ ಕೊಟ್ಟು ನಿಲ್ಲಿಸಬಹುದಿತ್ತು’ ಎಂದು ವ್ಯಂಗ್ಯವಾಡಿದರು.