ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು: ಆಡಳಿತದ ವಿರೋಧದ ನಡುವೆಯೇ ಸ್ವರ್ಗದ ಜಠಾಧಾರಿ ದೇಗುಲಕ್ಕೆ ದಲಿತರ ಪ್ರವೇಶ

Last Updated 17 ನವೆಂಬರ್ 2021, 10:53 IST
ಅಕ್ಷರ ಗಾತ್ರ

ಕಾಸರಗೋಡು:ಶತಮಾನಗಳಿಂದ ದಲಿತರಿಗೆ ಪ್ರವೇಶ ನಿಷೇಧವಾಗಿದ್ದ ಕರ್ನಾಟಕ ಗಡಿ ಭಾಗದ ಎಣ್ಮಕಜೆ ಗ್ರಾಮದ ಸ್ವರ್ಗದ ಜಠಾಧಾರಿ ದೇವಸ್ಥಾನಕ್ಕೆ ಪತ್ತಿಕಜಾತಿ ಕ್ಷೇಮ ಸಮಿತಿ (ಪಿಕೆಎಸ್‌) ಮೂಲಕ ದಲಿತರ ಪ್ರವೇಶವಾಗಿದ್ದು, ದಲಿತ ಸಮುದಾಯದಲ್ಲಿ ನಿರಾಳ ಭಾವ ಮೂಡಿದೆ.

ಮೇಲ್ಜಾತಿಯವರಿಗಷ್ಟೇ ದೇವಸ್ಥಾನ ಪ್ರವೇಶ, ದಲಿತರು, ಕೆಳಜಾತಿಯವರಿಗೆ ಈ ಅರ್ಹತೆ ಇಲ್ಲ ಎಂದು ಪ್ರತಿಪಾದಿಸುತ್ತಲೇ ಬಂದಿರುವ ದೇವಸ್ಥಾನದ ಆಡಳಿತ ವರ್ಗ ಈಗಲೂ ದಲಿತರ ಪ್ರವೇಶಕ್ಕೆ ವಿರೋಧ ಸೂಚಿಸಿದ್ದು, ಹೊಸ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಇದೇ ಊರಿನವರಾದ ದಲಿತ ಸಮುದಾಯಕ್ಕೆ ಸೇರಿದ ಕೃಷ್ಣ ಮೋಹನ ಅವರು ಮೂರು ವರ್ಷಗಳ ಹಿಂದೆ ಈ ದೇವಸ್ಥಾನದ 18 ಮೆಟ್ಟಿಲನ್ನು ಹತ್ತಿ, ದೇವಸ್ಥಾನದ ಆವರಣದೊಳಗೆ ಪ್ರವೇಶಿಸಿದ್ದರು. ಆಗ ಗದ್ದಲ ಏರ್ಪಟ್ಟು ಪೊಲೀಸರೂ ಸ್ಥಳಕ್ಕೆ ಬರಬೇಕಾಯಿತು. ದೇವಸ್ಥಾನದೊಳಗೆ ದಲಿತರೂ ಪ್ರವೇಶಿಸಬಹುದು ಎಂದು ಆಗ ತಿಳಿಸಲಾಗಿತ್ತು. ದಲಿತರ ಪ್ರವೇಶವನ್ನೂ ಯಾವುದೇ ಕಾರಣಕ್ಕೂ ಒಪ್ಪದ ದೇವಸ್ಥಾನ ಆಡಳಿತ ಮಂಡಳಿ, ಕೀಲಿ ಕಳೆದುಹೋಗಿದೆ ಎಂದು ಹೇಳಿ, ದೇವಸ್ಥಾನವನ್ನು ಸಂಪೂರ್ಣ ಮುಚ್ಚಿಬಿಟ್ಟಿತು. ದಲಿತರು ಮಾತ್ರವಲ್ಲ, ಇತರ ಯಾವ ಸಮುದಾಯದವರೂ ಕಳೆದ ಮೂರು ವರ್ಷಗಳಿಂದ ದೇವಸ್ಥಾನದೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಲಾಗಿತ್ತು.

ಆದರೆ ಕೆಲವು ದಿನಗಳ ಹಿಂದೆ ಪಿಕೆಎಸ್‌ ನೇತೃತ್ವದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಜನರ ಗುಂಪು ದೇವಾಲಯದ 18 ಮೆಟ್ಟಿಲುಗಳನ್ನು ಏರಿ ದೇವಾಲಯವನ್ನು ಪ್ರವೇಶಿಸಿದೆ. ಕೃಷ್ಣ ಮೋಹನ್‌ ಸಹ ಈ ತಂಡದಲ್ಲಿದ್ದರು.

ಕೇರಳದಲ್ಲಿ 1947ರಿಂದಲೂ ದಲಿತರ ದೇವಸ್ಥಾನ ಪ್ರವೇಶ ನಿಷೇಧವನ್ನು ತೆಗೆದು ಹಾಕಲಾಗಿದೆ. ಆದರೆ ಸಾಕಷ್ಟು ಕಡೆಗಳಲ್ಲಿ ಈಗಲೂ ದಲಿತರು, ಸಮಾಜದಲ್ಲಿ ಕೆಳವರ್ಗದವರೆಂದು ಗುರುತಿಸಿಕೊಂಡವರಿಗೆ ದೇವಸ್ಥಾನದ ಆವರಣ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಅಂತಹ ದೇವಸ್ಥಾನಗಳಲ್ಲಿ ಸ್ವರ್ಗದ ಈ ದೇವಸ್ಥಾನವೂ ಒಂದೆನಿಸಿತ್ತು.

’ದೇವಸ್ಥಾನ ಪ್ರವೇಶಕ್ಕಷ್ಟೇ ನಿಷೇಧವಲ್ಲ, ದೇವಸ್ಥಾನದಲ್ಲಿ ನಡೆಯುತ್ತಿದ್ದ ತೆಯ್ಯಂ ಅನ್ನು ಸಹ ದಲಿತರು ದೂರದಿಂದಲೇ ನೋಡಬೇಕಿತ್ತು. ದೇವರಿಗೆ ನೇರವಾಗಿ ದಕ್ಷಿಣೆ ಹಾಕುವಂತಿರಲಿಲ್ಲ. ಇದೊಂದು ಅತ್ಯಂತ ಅಮಾನವೀಯವಾದ ತಾರತಮ್ಯದ ನೀತಿಯಾಗಿತ್ತು‘ ಎಂದು ಪಿಕೆಎಸ್‌ ಜಿಲ್ಲಾ ಕಾರ್ಯದರ್ಶಿ ಬಿ.ಎಂ.ಪ್ರದೀಪ್ ಹೇಳಿದರು.

’ರಾಜ್ಯದಲ್ಲಿ ಕೆಲವೆಡೆ ಈಗಲೂ ಇಂತಹ ತಾರತಮ್ಯ ಧೋರಣಿ ಇರುವುದು ನಿಜ, ಸರ್ಕಾರದ ಆದೇಶವೊಂದರಿಂದಲೇ ಇದನ್ನು ನಿವಾರಿಸಲು ಸಾಧ್ಯವಿಲ್ಲ, ಸಮಾಜವೇ ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕಾಗಿದೆ‘ ಎಂದು ರಾಜ್ಯದ ಸಮಾಜ ಕಲ್ಯಾಣ ಸಚಿವ ಕೆ.ರಾಧಾಕೃಷ್ಣನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT