ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಜಾಟ್‌ ಸಿಟ್ಟು: ಧ್ರುವೀಕರಣ ನೆಚ್ಚಿದ ಬಿಜೆಪಿ

ಅಮಿತ್‌ ಶಾ, ಯೋಗಿ, ಸ್ಮೃತಿ ಇರಾನಿ ಪ್ರಚಾರ: 2013ರ ಮುಜಫ್ಫರ್‌ನಗರ ಗಲಭೆಯ ಉಲ್ಲೇಖ
Last Updated 29 ಜನವರಿ 2022, 21:04 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ರಾಜಕೀಯವಾಗಿ ಅತ್ಯಂತ ಪ್ರಭಾವಿಯಾಗಿರುವ ‘ಜಾಟ್‌’ ಸಮುದಾಯ ಮತ್ತು ರೈತರ ಆಕ್ರೋಶದಿಂದ ಆಗಲಿರುವ ಹಾನಿ ಸರಿಪಡಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಫೆಬ್ರುವರಿ 10ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಈ ಪ್ರದೇಶದಲ್ಲಿ ಬಿಜೆಪಿಯ ಹಿರಿಯ ಮುಖಂಡರೆಲ್ಲ ಮನೆಮನೆ ಪ್ರಚಾರ ನಡೆಸುತ್ತಿದ್ದಾರೆ. ಮತದಾರರ ಜತೆಗೆ ಸಂವಾದ ನಡೆಸುತ್ತಿದ್ದಾರೆ. ಎಲ್ಲೆಡೆಯೂ ‘ಹಿಂದುತ್ವ’ ಕಾರ್ಯಸೂಚಿಯನ್ನು ಮುಂದಕ್ಕೆ ತರಲು ಯತ್ನಿಸಲಾಗುತ್ತಿದೆ. ಕೋಮು ಧ್ರುವೀಕರಣದ ಯತ್ನ ಎದ್ದು ಕಾಣುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪ‍ ಮುಖ್ಯಮಂತ್ರಿ ದಿನೇಶ್‌ ಶರ್ಮಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ಪ್ರದೇಶದ ವಿವಿಧ ಭಾಗಗಳಲ್ಲಿ ಶನಿವಾರ ಪ್ರಚಾರ ನಡೆಸಿದ್ದಾರೆ.

ಶರ್ಮಾ ಅವರನ್ನು ಬಿಟ್ಟು ಉಳಿದ ಮೂವರು ನಾಯಕರು 2013ರ ಮುಜಫ್ಫರ್‌ನಗರ ಕೋಮು ಗಲಭೆಯನ್ನು ತಮ್ಮ ಪ್ರಚಾರದಲ್ಲಿ ಉಲ್ಲೇಖಿಸಿದ್ದಾರೆ.
ಸಮಾಜವಾದಿ ಪಕ್ಷವು (ಎಸ್‌ಪಿ) ಅಧಿಕಾರಕ್ಕೆ ಬಂದರೆ ಕೋಮು ಗಲಭೆ ನಡೆಯಲಿದೆ ಎಂಬ ಎಚ್ಚರಿಕೆಯನ್ನು ಈ ನಾಯಕರು ನೀಡಿದ್ದಾರೆ.

ಈ ಪ್ರದೇಶದಲ್ಲಿ 2013ರಲ್ಲಿ ಕೋಮುಗಲಭೆಗೆ ಕಾರಣವಾದ ಇಬ್ಬರು ಜಾಟ್‌ ಯುವಕರ ಹತ್ಯೆಯನ್ನೂ ಬಿಜೆಪಿ ಮುಖಂಡರು ನೆನಪಿಸುತ್ತಿದ್ದಾರೆ.

‘ಮುಜಫ್ಫರ್‌ನಗರದಲ್ಲಿ 2013ರಲ್ಲಿ ನಡೆದ ಕೋಮು ಗಲಭೆಯನ್ನು ನೀವು ಮರೆತಿದ್ದೀರಾ’ ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ. ಸಂತ್ರಸ್ತರನ್ನು ಗಲಭೆಕೋರರೆಂದೂ ಗಲಭೆಕೋರರನ್ನು
ಸಂತ್ರಸ್ತರೆಂದೂ ಪರಿಗಣಿಸಲಾಗಿತ್ತು ಎಂದು ಮಜಫ್ಫರ್‌ನಗರದಲ್ಲಿ ಶಾ ಆರೋಪಿಸಿದ್ದಾರೆ.

ಸ್ಮೃತಿ ಇರಾನಿ ಅವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. 2013ರ ಮುಜಫ್ಫರ್‌ನಗರ ಗಲಭೆಯಲ್ಲಿ ಮೃತರಾದ ಸಚಿನ್‌ ಮತ್ತು ಗೌರವ್‌ ಸೋದರರ ತ್ಯಾಗವನ್ನು ನೀವು ಮರೆಯಲು ಸಾಧ್ಯವೇ ಎಂದು ಅವರು ಮೀರಠ್‌ನಲ್ಲಿ ಪ್ರಶ್ನಿಸಿದ್ದಾರೆ (ತಮ್ಮ ಸಹೋದರಿಯನ್ನು ಚುಡಾಯಿಸುವುದನ್ನು ತಡೆಯಲು ಯತ್ನಿಸಿದಾಗ ಇವರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ).

‘ಸಹೋದರಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ಈ ಸಹೋದರರು ಪ್ರಾಣ ತೆತ್ತರು. ಅವರು ತ್ಯಾಗವನ್ನು ನೀವು ಮರೆಯಲೇಬಾರದು’ ಎಂದು ಮೀರಠ್‌ನಲ್ಲಿ ಮತದಾರರ ಜತೆಗಿನ ಸಂವಾದದಲ್ಲಿ ಸ್ಮೃತಿ ಹೇಳಿದ್ದಾರೆ.

ಗಾಜಿಯಾಬಾದ್‌ ಮತ್ತು ಬಾಗ್‌ಪತ್‌ನಲ್ಲಿ ಪ್ರಚಾರ ನಡೆಸಿದ ಯೋಗಿ ಆದಿತ್ಯನಾಥ ಅವರು ಕೋಮು ಗಲಭೆಯನ್ನು ಉಲ್ಲೇಖಿಸಿದ್ದಲ್ಲದೆ, ಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟಕ್ಕೆ ಮತ ಹಾಕದಂತೆ ಜನರಿಗೆ ಎಚ್ಚರಿಕೆ ನೀಡಿದರು.

‘ನಾವು ನಿಮಗೆ ಗಲಭೆಮುಕ್ತ ರಾಜ್ಯವನ್ನು ಕೊಟ್ಟಿದ್ದೇವೆ. ಕಾಶಿ ಮತ್ತು ಮಥುರಾದಂತಹ ಹಿಂದೂ ಧಾರ್ಮಿಕ ಕೇಂದ್ರಗಳನ್ನು ನಾವು ನವೀಕರಿಸಿದ್ದೇವೆ. ಅವರು ಕಬರ್‌ಸ್ತಾನಗಳನ್ನು (ಸ್ಮಶಾನ) ಕಟ್ಟಿದ್ದಾರೆ. 2013ರ ಗಲಭೆ ನಿಮಗೆ ನೆನಪಿಲ್ಲವೇ’ ಎಂದು ಸಂವಾದದಲ್ಲಿ ಯೋಗಿ ಅವರು ಪ್ರಶ್ನಿಸಿದ್ದಾರೆ.

ಬಿಜೆಪಿಯು ಹಿಂದುತ್ವವನ್ನು ಹೆಚ್ಚು ಆಕ್ರಮಣಕಾರಿಯಾಗಿಯೇ ಮುಂದಕ್ಕೆ ತಂದಿದೆ. ಜಾಟ್‌ ಸಮುದಾಯದ ಸಿಟ್ಟು ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂಬ ಭಾವನೆ ಬಿಜೆಪಿಯಲ್ಲಿ ಇದೆ. ಸಮುದಾಯದ ಮನವೊಲಿಸುವ ಯತ್ನ ಫಲ ಕೊಟ್ಟಿಲ್ಲ ಎಂಬುದನ್ನು ಇದು ಸಮರ್ಥಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಜಾಟ್‌ ಪ್ರಾಬಲ್ಯದ ಪ್ರದೇಶದಲ್ಲಿ 2017ರ ಚುನಾವಣಾ ಫಲಿತಾಂಶದ ಪುನರಾವರ್ತನೆಯು ಕೋಮು ಧ್ರುವೀಕರಣದಿಂದ ಮಾತ್ರ ಸಾಧ್ಯ ಎಂಬುದು ಬಿಜೆಪಿಯ ನಂಬಿಕೆ. ಹಾಗಾಗಿಯೇ, ಹಿಂದುತ್ವವನ್ನು ಆಕ್ರಮಣಕಾರಿಯಾಗಿಪ್ರತಿಪಾದಿಸಲಾಗುತ್ತಿದೆ ಎಂದು ಲಖನೌದ ರಾಜಕೀಯ ವಿಶ್ಲೇಷಕರೊಬ್ಬರುಹೇಳಿದ್ದಾರೆ.

ಬಿಜೆಪಿಯ ಇಷ್ಟೊಂದು ನಾಯಕರು ಈ ಪ್ರದೇಶಕ್ಕೆ ಲಗ್ಗೆ ಇಟ್ಟಿರುವುದು ಗಮನಿಸಿದರೆ, ಪರಿಸ್ಥಿತಿಯ ಸಂಪೂರ್ಣ ಅರಿವು ಅವರಿಗೆ ಆಗಿದೆ ಅನಿಸುತ್ತದೆ ಎಂದು ಎಸ್‌ಪಿ ಮುಖಂಡರು ಹೇಳಿದ್ಧಾರೆ. ‘ಬಿಜೆಪಿ ಸೋಲು ಒಪ್ಪಿಕೊಂಡಂತೆ ಕಾಣಿಸುತ್ತಿದೆ. ಹಾಗಾಗಿಯೇ ಆ ಪಕ್ಷವು ಹಿಂದುತ್ವ ಮತ್ತು ಧ್ರುವೀಕರಣದ ಮೊರೆ ಹೋಗಿದೆ’ ಎಂದು ಎಸ್‌ಪಿ ಮುಖಂಡರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT