ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಪ್ರಮಾದದಿಂದಾಗಿ ಕಾಶ್ಮೀರ ಸಮಸ್ಯೆ: ಅಮಿತ್ ಶಾ

ಲೋಕಸಭೆಯಲ್ಲಿ ಅಮಿತ್ ಶಾ ವಾಗ್ದಾಳಿ, ವಿರೋಧ ಪಕ್ಷದ ಸದಸ್ಯರಿಂದ ಸಭಾತ್ಯಾಗ
Published 6 ಡಿಸೆಂಬರ್ 2023, 16:59 IST
Last Updated 6 ಡಿಸೆಂಬರ್ 2023, 16:59 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಎರಡು ಪ್ರಮುಖ ಪ್ರಮಾದಗಳಿಂದಾಗಿ ಜಮ್ಮು ಮತ್ತು ಕಾಶ್ಮೀರದ ಜನ ಕಷ್ಟ ಅನುಭವಿಸಬೇಕಾಯಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರಿದರು. ಇಡೀ ಕಾಶ್ಮೀರವನ್ನು ಗೆದ್ದುಕೊಳ್ಳುವ ಮೊದಲೇ ಕದನ ವಿರಾಮ ಘೋಷಿಸಿದ್ದು ಹಾಗೂ ಸಮಸ್ಯೆಯನ್ನು ವಿಶ್ವಸಂಸ್ಥೆಯ ಅಂಗಳಕ್ಕೆ ಒಯ್ದಿದ್ದು ಆ ಪ್ರಮಾದಗಳು ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ, ಜಮ್ಮು ಮತ್ತು ಕಾಶ್ಮೀರ ಮರುವಿಂಗಡಣೆ (ತಿದ್ದುಪಡಿ) ಮಸೂದೆ ಮೇಲಿನ ಚರ್ಚೆಗೆ ಉತ್ತರ ನೀಡಿದ ಶಾ ಅವರು, ನೆಹರೂ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ಕಾಶ್ಮೀರದ ವಿಚಾರ ಪ್ರಸ್ತಾಪವಾದಾಗಲೆಲ್ಲ ಬಿಜೆಪಿ ನಾಯಕರು ನೆಹರೂ ಅವರನ್ನು ಅನಗತ್ಯವಾಗಿ ಟೀಕಿಸುತ್ತಾರೆ ಎಂದರು. ಎರಡೂ ಮಸೂದೆಗಳಿಗೆ ಲೋಕಸಭೆಯು ಬುಧವಾರ ಅಂಗೀಕಾರ ನೀಡಿದೆ.

ನೆಹರೂ ಅವರು ಸರಿಯಾದ ಹೆಜ್ಜೆ ಇರಿಸಿದ್ದಿದ್ದರೆ ಕಾಶ್ಮೀರದ ಬಹುದೊಡ್ಡ ಭಾಗವೊಂದನ್ನು ಬಿಟ್ಟುಕೊಡಬೇಕಾಗಿ ಬರುತ್ತಿರಲಿಲ್ಲ, ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಭೂಭಾಗ ಆಗಿರುತ್ತಿತ್ತು ಎಂದು ಶಾ ಹೇಳಿದರು. ‘ನೆಹರೂ ಅವರ ಅವಧಿಯಲ್ಲಿ ಆದ ಎರಡು ಪ್ರಮಾದಗಳು, ಅವರ ತೀರ್ಮಾನದ ಕಾರಣದಿಂದಾಗಿಯೇ ಆದವು ಎಂಬುದನ್ನು ನಾನು ಜವಾಬ್ದಾರಿಯಿಂದಲೇ ಹೇಳುತ್ತಿದ್ದೇನೆ’ ಎಂದರು.

‘ನೆಹರೂ ಅವರು ಮೂರು ದಿನ ತಡವಾಗಿ ಕದನವಿರಾಮ ಘೋಷಿಸಿದ್ದಿದ್ದರೆ ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಭಾಗ ಆಗಿರುತ್ತಿತ್ತು’ ಎಂದು ಗೃಹ ಸಚಿವರು ಹೇಳಿದರು. ಶಾ ಅವರು ನೆಹರೂ ಬಗ್ಗೆ ಆಡಿದ ಮಾತುಗಳಿಗೆ ವಿರೋಧ ಪಕ್ಷಗಳ ಸದಸ್ಯರು ಆಕ್ಷೇಪಿಸಿ, ಸಭಾತ್ಯಾಗ ನಡೆಸಿದರು. ನಂತರ ಅವರು ತಮ್ಮ ಸ್ಥಾನಗಳಿಗೆ ಮರಳಿದರು.

ಗೃಹ ಸಚಿವರು ‘ಹಿಮಾಲಯನ್ ಬ್ಲಂಡರ್’ (ನೆಹರೂ ಅವರ ಕೆಲವು ನಡೆಗಳ ಪರಿಣಾಮವಾಗಿ 1962ರಲ್ಲಿ ಚೀನಾದೊಂದಿಗೆ ಯುದ್ಧ ನಡೆಸಬೇಕಾದ ಸನ್ನಿವೇಶ ಸೃಷ್ಟಿಯಾಗಿದ್ದು) ಬಗ್ಗೆಯೂ ಮಾತನಾಡಬೇಕು ಎಂದು ಬಿಜೆಡಿ ಸದಸ್ಯ ಭರ್ತೃಹರಿ ಮಹ್ತಾಬ್ ಆಗ್ರಹಿಸಿದರು. ‘ನಾನು ಎರಡು ಪ್ರಮಾದಗಳ ಬಗ್ಗೆ ಹೇಳಿದ್ದಕ್ಕೆ ಅವರು ಬೇಸರಗೊಂಡಿದ್ದಾರೆ. ಹಿಮಾಲಯನ್ ಬ್ಲಂಡರ್ ಪದ ಬಳಸಿದ್ದಿದ್ದರೆ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿಬಿಡುತ್ತಿದ್ದರು’ ಎಂದು ಶಾ ಚಟಾಕಿ ಹಾರಿಸಿದರು.

ಕದವಿರಾಮ ಘೋಷಿಸಿದ್ದು ತಪ್ಪು ಎಂದು ನೆಹರೂ ಅವರು ನಂತರದಲ್ಲಿ ಹೇಳಿದ್ದರು ಎಂದು ಶಾ ಉಲ್ಲೇಖಿಸಿದರು.

ಎರಡು ಮಸೂದೆಗಳ ಪೈಕಿ ಒಂದು ಮಸೂದೆಯು, ಕಾಶ್ಮೀರಿ ವಲಸಿಗ ಸಮುದಾಯದ ಇಬ್ಬರನ್ನು ಅಲ್ಲಿನ ವಿಧಾನಸಭೆಗೆ ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸುತ್ತದೆ. ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಒಂದು ಸ್ಥಾನವನ್ನು ಪಾಕ್ ಆಕ್ರಮಿತ ಕಾಶ್ಮೀರದಿಂದ ನೆಲೆ ಕಳೆದುಕೊಂಡು ಬಂದವರಿಗೆ ಮೀಸಲಿಡಲು ಮಸೂದೆ ಅವಕಾಶ ಕಲ್ಪಿಸಿದೆ ಎಂದು ಶಾ ವಿವರಿಸಿದರು.

‘ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು’

‘ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಮರುವಿಂಗಡಣೆ ಕಾರ್ಯ ಪೂರ್ಣಗೊಂಡ ನಂತರದಲ್ಲಿ ಜಮ್ಮು ಪ್ರದೇಶದಲ್ಲಿ 43 ಕ್ಷೇತ್ರಗಳು ಇರಲಿವೆ ಕಾಶ್ಮೀರ ಕಣಿವೆಯಲ್ಲಿ 47 ಸ್ಥಾನಗಳು ಇರಲಿವೆ’ ಎಂದು ಅಮಿತ್ ಶಾ ಹೇಳಿದರು. ‘ಪಾಕ್ ಆಕ್ರಮಿತ ಕಾಶ್ಮೀರದ ಜನರಿಗಾಗಿ 24 ಸ್ಥಾನಗಳನ್ನು ಮೀಸಲಾಗಿ ಇಡಲಾಗಿದೆ. ಏಕೆಂದರೆ ಆದು ನಮ್ಮ ಭೂಭಾಗ’ ಎಂದು ಶಾ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯಗಳು ಶೂನ್ಯಕ್ಕೆ ಇಳಿಯಬೇಕು ಎಂಬ ಗುರಿಯನ್ನು ಹೊಂದಲಾಗಿದ್ದು ಅದನ್ನು 2026ಕ್ಕೆ ಮೊದಲು ಸಾಧಿಸಿ ತೋರಿಸಲಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT