ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು ವಿದ್ಯಾರ್ಥಿ ಒಕ್ಕೂಟಕ್ಕೆ ಎರಡೂವರೆ ದಶಕದ ಬಳಿಕ ದಲಿತ ಅಧ್ಯಕ್ಷ

Published 25 ಮಾರ್ಚ್ 2024, 5:15 IST
Last Updated 25 ಮಾರ್ಚ್ 2024, 5:15 IST
ಅಕ್ಷರ ಗಾತ್ರ

ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (ಜೆಎನ್‌ಎಸ್‌ಯು) ಅಧ್ಯಕ್ಷರಾಗಿ ಎಡ ಸಂಘಟನೆಗಳ ಅಭ್ಯರ್ಥಿ ಧನಂಜಯ್‌ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಎರಡೂವರೆ ದಶಕದ ಬಳಿಕ ದಲಿತರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ.

ತೀವ್ರ ಹಣಾಹಣಿಗೆ ಸಾಕ್ಷಿಯಾದ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ ಅಂಗಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಎದುರು, ಎಡ ಸಂಘಟನೆಗಳ ಒಕ್ಕೂಟ ಕ್ಲೀನ್‌ ಸ್ವೀಪ್‌ ಸಾಧಿಸಿದೆ.

ನಾಲ್ಕು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಜೆಎನ್‌ಎಸ್‌ಯು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (ಎಐಎಸ್‌ಎ) ಧನಂಜಯ್‌, ಎಬಿವಿಪಿ ಅಭ್ಯರ್ಥಿ ಉಮೇಶ್‌ ಸಿ. ಅಜ್ಮೀರಾ ಎದುರು ಗೆಲುವು ಸಾಧಿಸಿದರು. ಧನಂಜಯ್‌ 2,598 ಮತಗಳನ್ನು ಪಡೆದರೆ, ಉಮೇಶ್‌ಗೆ 1,676 ಮತಗಳಷ್ಟೇ ಬಂದವು.

ಧನಂಜಯ್‌ ಬಿಹಾರದ ಗಯಾ ಜಿಲ್ಲೆಯವರು. 1996-97ರಲ್ಲಿ ಚುನಾಯಿತರಾಗಿದ್ದ ಬಟ್ಟಿ ಲಾಲ್‌ ಭೈರ್ವಾ ಅವರ ಬಳಿಕ, ಜೆಎನ್‌ಎಸ್‌ಯು ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ದಲಿತ ಎಂಬ ಖ್ಯಾತಿ ಅವರದ್ದಾಯಿತು.

ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಮಾತನಾಡಿದ ಧನಂಜಯ್‌, 'ಈ ವಿಜಯವು, ಜೆಎನ್‌ಯು ವಿದ್ಯಾರ್ಥಿಗಳು ಧ್ವೇಷ ಮತ್ತು ಹಿಂಸೆಯನ್ನು ಧಿಕ್ಕರಿಸಿರುವುದರ ಜನಾಭಿಪ್ರಾಯವಾಗಿದೆ. ವಿದ್ಯಾರ್ಥಿಗಳು ಮತ್ತೊಮ್ಮೆ ನಮ್ಮ ಮೇಲೆ ವಿಶ್ವಾಸ ತೋರಿದ್ದಾರೆ. ಅವರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮುಂದುವರಿಸುತ್ತೇವೆ. ಅವರಿಗಾಗಿ ಕೆಲಸ ಮಾಡುತ್ತೇವೆ' ಎಂದು ಭರವಸೆ ನೀಡಿದ್ದಾರೆ.

'ವಿವಿ ಆವರಣದಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತೆ, ಶುಲ್ಕ ಕಡಿತ, ವಿದ್ಯಾರ್ಥಿ ವೇತನ ಹೆಚ್ಚಳ, ಮೂಲಸೌಕರ್ಯ ಅಭಿವೃದ್ಧಿ ಮತ್ತು ನೀರಿನ ಸಮಸ್ಯೆ ಸೇರಿದಂತೆ ವಿದ್ಯಾರ್ಥಿಗಳ ಅಗತ್ಯಗಳಿಗಾಗಿ ವಿದ್ಯಾರ್ಥಿ ಸಂಘಟನೆ ಕೆಲಸ ಆರಂಭಿಸಲಿದೆ' ಎಂದೂ ಹೇಳಿದ್ದಾರೆ.

ಸ್ಟೂಡೆಂಟ್ಸ್ ಫೆಡರೇಷನ್‌ ಆಫ್‌ ಇಂಡಿಯಾದ (ಎಸ್‌ಎಫ್‌ಐ) ಅವಿಜಿತ್‌ ಘೋಷ್‌ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಅವರು ಎಬಿವಿಪಿಯ ದೀಪಿಕಾ ಶರ್ಮಾ ಅವರನ್ನು 927 ಮತಗಳ ಅಂತರದಿಂದ ಸೋಲಿಸಿದ್ದಾರೆ. ಘೋಷ್‌ 2,409 ಮತಗಳನ್ನು ಪಡೆದರೆ, ದೀಪಿಕಾಗೆ 1,482 ಮತಗಳು ದೊರೆತಿವೆ.

ಬಿರ್ಸಾ ಅಂಬೇಡ್ಕರ್‌ ಫುಲೆ ವಿದ್ಯಾರ್ಥಿ ಸಂಘಟನೆಯ (ಬಿಎಪಿಎಸ್‌ಎ) ಅಭ್ಯರ್ಥಿ ಪ್ರಿಯಾಂಶಿ ಆರ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಆರ್ಯ ಒಟ್ಟು 2,887 ಮತೆ ಪಡೆದರು. ಅವರ ಪ್ರತಿಸ್ಪರ್ಧಿ ಅರ್ಜುನ್‌ ಆನಂದ್‌ 1961 ಮತಗಳನ್ನು ಪಡೆದರು.

ಜಂಟಿ ಕಾರ್ಯದರ್ಶಿ ಸ್ಥಾನಕ್ಕೂ ಎಡ ಸಂಘಟನೆಗಳ ಮೊಹಮ್ಮದ್‌ ಸಾಜಿದ್‌ ಚುನಾಯಿತರಾಗಿದ್ದಾರೆ.

ಎಡ ಸಂಘಟನೆಗಳ ಒಕ್ಕೂಟದಲ್ಲಿ, ಎಐಎಸ್‌ಎ, ಎಸ್‌ಎಫ್‌ಐ, ಬಿಎಪಿಎಸ್‌ಎ ಜೊತೆಗೆ, ಡೆಮಾಕ್ರಟಿಕ್‌ ಸ್ಟೂಡೆಂಟ್ಸ್ ಫೆಡರೇಷನ್‌ (ಡಿಎಸ್ಎಫ್‌) ಮತ್ತು ಆಲ್‌ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಷನ್‌ (ಎಐಎಸ್‌ಎಫ್‌) ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT