ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

JNU ಚುನಾವಣೆ: ವಿವಿ ಆವರಣದಲ್ಲಿ ನೀತಿ ಸಂಹಿತೆ ಜಾರಿ, ಪ್ರಚಾರಕ್ಕೆ ಹಲವು ನಿಯಮ

Published 10 ಮಾರ್ಚ್ 2024, 4:46 IST
Last Updated 10 ಮಾರ್ಚ್ 2024, 4:46 IST
ಅಕ್ಷರ ಗಾತ್ರ

ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಚುನಾವಣಾ ಸಮಿತಿಯ ಪೂರ್ವಾನುಮತಿ ಇಲ್ಲದೆ ವಿವಿಯ ಆವರಣದಲ್ಲಿ ಯಾವುದೇ ಪೋಸ್ಟರ್‌ಗಳು ಅಥವಾ ಕರಪತ್ರಗಳನ್ನು ಬಳಸುವಂತಿಲ್ಲ ಎಂದು ವಿವಿ ಸೂಚಿಸಿದೆ.

ಜೆಎನ್‌ಯು ವಿದ್ಯಾರ್ಥಿ ಸಂಘಟನೆಗೆ (ಜೆಎನ್‌ಯುಎಸ್‌ಯು) ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಸಮಿತಿಯು ನೀತಿ ಸಂಹಿತೆ ಜಾರಿಗೊಳಿಸಿದ್ದು, ಪ್ರಚಾರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಲಾಗಿದೆ. 

'ಚುನಾವಣೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸುವ ಸಲುವಾಗಿ ಚುನಾವಣಾ ಸಮಿತಿಯು ಭಾಗಶಃ ನೀತಿ ಸಂಹಿತೆ ಜಾರಿಗೊಳಿಸಿದೆ. ಶಾಂತಿಯುತವಾಗಿ ಮತ್ತು ಶಿಸ್ತಿನಿಂದ ಚುನಾವಣೆ ನಡೆಯುವಂತೆ ನೋಡಿಕೊಳ್ಳಲು ಸಮಿತಿಯೊಂದಿಗೆ ಕೈಜೋಡಿಸುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡುತ್ತೇವೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚುನಾವಣಾ ಸಮಿತಿಯ ಅನುಮತಿ ಇಲ್ಲದೆ, ಪೋಸ್ಟರ್‌ಗಳು ಅಥವಾ ಕರಪತ್ರಗಳನ್ನು ಬಳಸುವುದನ್ನು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಲಿದೆ. ನಿಯಮಗಳ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸುವ ವಿದ್ಯಾರ್ಥಿಗಳು ಮತ್ತು ಅವರ ಸಂಘಟನೆಗಳು, ಕೈಯಿಂದಲೇ ಮಾಡಿದ ಪೋಸ್ಟರ್‌ಗಳು ಮತ್ತು ಅವುಗಳ ಜೆರಾಕ್ಸ್‌ ಪ್ರತಿಗಳನ್ನಷ್ಟೇ ಪ್ರಚಾರದ ಸಂದರ್ಭದಲ್ಲಿ ಬಳಸಬಹುದಾಗಿದೆ.

ವಿದ್ಯಾರ್ಥಿಗಳು ವಿವಿ ಆವರಣದಲ್ಲಿರುವ ಕಟ್ಟಡಗಳು, ರಸ್ತೆಗಳು, ವಿದ್ಯುತ್‌ ಕಂಬಗಳು, ಬಸ್ಟ್‌ ನಿಲ್ದಾಣ, ಮರಗಳು ಹಾಗೂ ಇನ್ನಿತರ ಸ್ಥಳಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸುವಂತಿಲ್ಲ. ವಿವಿಯ ಆಸ್ತಿಗೆ ಹಾನಿ ಮಾಡುವಂತಿಲ್ಲ. ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಉದ್ದೇಶಕ್ಕಾಗಿ ನಡೆಸುವ ಯಾವುದೇ ಕಾರ್ಯಕ್ರಮಗಳಿಗೆ ಚುನಾವಣಾ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ವಿದ್ಯಾರ್ಥಿಗಳನ್ನುದ್ದೇಶಿಸಿ ಸಾರ್ವಜನಿಕವಾಗಿ ಪ್ರಚಾರ ನಡೆಸುವುದು, ಮೆರವಣಿಗೆಗೆ ವಾಹನಗಳು ಇಲ್ಲವೇ ಪ್ರಾಣಿಗಳನ್ನು ಬಳಸುವುದಕ್ಕೂ ನಿಷೇಧ ಹೇರಲಾಗಿದೆ.

ಜೆಎನ್‌ಯುಎಸ್‌ಯು ಚುನಾವಣೆಯು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಕಳೆದ ಚುನಾವಣೆಯು 2019ರಲ್ಲಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT