ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಶ್ಚಿಮ ಬಂಗಾಳ- ರಾಜ್ಯಸಭಾ ಚುನಾವಣೆ: ಸಾಗರಿಕಾ ಘೋಷ್, ಸುಷ್ಮಿತಾ ದೇವ್ ಕಣಕ್ಕೆ

Published 11 ಫೆಬ್ರುವರಿ 2024, 12:22 IST
Last Updated 11 ಫೆಬ್ರುವರಿ 2024, 12:22 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಪತ್ರಕರ್ತೆ ಸಾಗರಿಕಾ ಘೋಷ್ ಮತ್ತು ಮಾಜಿ ಸಂಸದೆ ಸುಷ್ಮಿತಾ ದೇವ್ ಅವರು ಟಿಎಂಸಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲಿದ್ದಾರೆ. ಪಕ್ಷವು ಭಾನುವಾರ ಈ ವಿಷಯ ಪ್ರಕಟಿಸಿದೆ.

ಟಿಎಂಸಿಯ ನಾಲ್ವರು ರಾಜ್ಯಸಭಾ ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಈ ಪೈಕಿ ಮೊಹಮ್ಮದ್ ನದೀಮುಲ್ ಹಕ್ ಅವರಿಗೆ ಪಕ್ಷವು ಟಿಕೆಟ್ ನೀಡಿದೆ. ಲೋಕಸಭೆಯ ಮಾಜಿ ಸದಸ್ಯೆ ಮಮತಾ ಬಾಲಾ ಠಾಕೂರ್ ಅವರು ಟಿಎಂಸಿಯ ನಾಲ್ಕನೇ ಅಭ್ಯರ್ಥಿಯಾಗಿ ಕಣದಲ್ಲಿ ಇರಲಿದ್ದಾರೆ.

ಹಾಲಿ ಸದಸ್ಯರಾದ ಅಬೀರ್ ರಂಜನ್ ಬಿಸ್ವಾಸ್, ಸುಭಾಶಿಷ್ ಚಕ್ರವರ್ತಿ ಮತ್ತು ಡಾ. ಶಂತನು ಸೆನ್ ಅವರಿಗೆ ಇನ್ನೊಂದು ಅವಧಿಯನ್ನು ಪಕ್ಷವು ನಿರಾಕರಿಸಿದೆ.

ಪಶ್ಚಿಮ ಬಂಗಾಳ ಕೋಟಾದಿಂದ ರಾಜ್ಯಸಭೆ ಸದಸ್ಯರಾಗಿದ್ದ ಕಾಂಗ್ರೆಸ್ಸಿನ ಅಭಿಷೇಕ್ ಮನು ಸಿಂಘ್ವಿ ಅವರೂ ನಿವೃತ್ತರಾಗುತ್ತಿದ್ದಾರೆ. ನಾಲ್ಕೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಂಖ್ಯಾಬಲ ಟಿಎಂಸಿ ಪಕ್ಷಕ್ಕೆ ಇದೆ. ಕಾಂಗ್ರೆಸ್ಸಿಗೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸಂಖ್ಯಾಬಲ ಇಲ್ಲ. ಐದನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಅವಕಾಶ ಬಿಜೆಪಿಗೆ ಇದೆ. 

ಸಾಗರಿಕಾ ಅವರು ಈ ಹಿಂದೆ ಟೈಮ್ಸ್ ಆಫ್ ಇಂಡಿಯಾ, ಔಟ್‌ಲುಕ್, ದಿ ಇಂಡಿಯನ್ ಎಕ್ಸ್‌ಪ್ರೆಸ್, ಬಿಬಿಸಿ ಮತ್ತು ಸಿಎನ್‌ಎನ್‌–ಐಬಿಎನ್‌ ಮಾಧ್ಯಮ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಈಗ ಅವರು ಅಂಕಣಗಳನ್ನು ಬರೆಯುತ್ತಿದ್ದಾರೆ. ಅವರ ತಂದೆ ಭಾಸ್ಕರ್ ಘೋಷ್ ಅವರು ಐಎಎಸ್ ಅಧಿಕಾರಿಯಾಗಿದ್ದವರು. ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರು ಸಾಗರಿಕಾ ಅವರ ಪತಿ.

ಸುಷ್ಮಿತಾ ಅವರು ಹಿಂದೆ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರಾಗಿದ್ದರು. ಅವರು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯಾಗಿರುವ ಕಾರಣ, ಲೋಕಸಭಾ ಚುನಾವಣೆಯಲ್ಲಿ ಅಸ್ಸಾಂನಿಂದ ಕಣಕ್ಕಿಳಿಯುವ ಸಾಧ್ಯತೆ ಇಲ್ಲ. ಹಕ್ ಅವರು ರಾಜ್ಯಸಭೆಯಲ್ಲಿ ಪಕ್ಷದ ಪರವಾಗಿ ನಿರಂತರವಾಗಿ ದನಿ ಎತ್ತುತ್ತಿದ್ದಾರೆ. ಮಮತಾ ಬಾಲಾ ಅವರು 2015ರಲ್ಲಿ ಉಪ ಚುನಾವಣೆಯಲ್ಲಿ ಗೆದ್ದು ಲೋಕಸಭೆ ಪ್ರವೇಶಿಸಿದ್ದರು. ಆದರೆ 2019ರಲ್ಲಿ ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT