ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಫಲ ಉತ್ಪನ್ನವೊಂದಕ್ಕೆ ಪಾಲಿಶ್ ಮಾಡುವ ಯತ್ನ: ನಡ್ಡಾ

ಖರ್ಗೆ ಅವರಿಗೆ ಪತ್ರ ಬರೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
Published : 19 ಸೆಪ್ಟೆಂಬರ್ 2024, 19:30 IST
Last Updated : 19 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಹಾಗೂ ಬಿಜೆಪಿಯ ಕೆಲವು ಮುಖಂಡರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ದೂರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರಕ್ಕೆ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ.

‘ಯಾವ ಒತ್ತಡಕ್ಕೆ ಒಳಗಾಗಿ ರಾಹುಲ್ ಅವರನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದೀರಿ’ ಎಂದು ನಡ್ಡಾ ಅವರು ಖರ್ಗೆ ಅವರನ್ನು ಕೇಳಿದ್ದಾರೆ. ರಾಹುಲ್ ಅವರು ಪ್ರಧಾನಿ ಮೋದಿ ಅವರನ್ನು ಹಾಗೂ ಒಬಿಸಿ ವರ್ಗಗಳನ್ನು ಮತ್ತೆ ಮತ್ತೆ ಅವಮಾನಿಸಿದ್ದಾರೆ ಎಂದು ನಡ್ಡಾ ಆರೋಪಿಸಿದ್ದಾರೆ.

‘ಸಾರ್ವಜನಿಕರಿಂದ ಮತ್ತೆ ಮತ್ತೆ ತಿರಸ್ಕಾರಕ್ಕೆ ಒಳಗಾಗಿರುವ ವಿಫಲ ಉತ್ಪನ್ನವೊಂದನ್ನು ಪಾಲಿಶ್ ಮಾಡಿ, ರಾಜಕೀಯ ಅನಿವಾರ್ಯಕ್ಕೆ ಅದನ್ನು ಮಾರುಕಟ್ಟೆಗೆ ಮತ್ತೆ ತರುವ ಯತ್ನವಾಗಿ ನೀವು ಪ್ರಧಾನಿಯವರಿಗೆ ಪತ್ರ ಬರೆದಿದ್ದೀರಿ’ ಎಂದು ನಡ್ಡಾ ಹೇಳಿದ್ದಾರೆ.

ಬಿಟ್ಟು ಅವರು ರಾಹುಲ್ ಅವರನ್ನು ‘ನಂಬರ್ ವನ್ ಭಯೋತ್ಪಾದಕ’ ಎಂದು ದೂಷಿಸಿದ್ದ ನಂತರ ಮೋದಿ ಅವರಿಗೆ ಪತ್ರ ಬರೆದಿದ್ದ ಖರ್ಗೆ ಅವರು, ಬಿಜೆಪಿಯವರನ್ನು ಶಿಸ್ತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದರು. ತಂದೆ ರಾಜೀವ್ ಗಾಂಧಿ ಹಾಗೂ ಅಜ್ಜಿ ಇಂದಿರಾ ಗಾಂಧಿ ಅವರಿಗೆ ಆಗಿದ್ದ ಗತಿಯೇ ರಾಹುಲ್ ಅವರಿಗೂ ಆಗಲಿದೆ ಎಂದು ಪಂಜಾಬ್‌ನ ಬಿಜೆಪಿ ಶಾಸಕ ತರ್ವಿಂದರ್ ಸಿಂಗ್ ಮಾರ್ವಾ ಎಚ್ಚರಿಕೆ ನೀಡಿದ್ದರು.

ಮೋದಿ ಅವರನ್ನು ಗುರಿಯಾಗಿಸಿ ಸೋನಿಯಾ ಗಾಂಧಿ ಅವರು ‘ಸಾವಿನ ವ್ಯಾಪಾರಿ’ ಎಂದು ಕರೆದಿದ್ದನ್ನೂ ನಡ್ಡಾ ಅವರು ಪತ್ರದಲ್ಲಿ ಉಲ್ಲೇಖಸಿದ್ದಾರೆ. ‘ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ಪ್ರಧಾನಿಯವರ ಮೇಲೆ ನಿಂದನೆಯ 110 ಪದಗಳನ್ನು ಸುರಿಸಿದೆ. ಪಕ್ಷದ ಉನ್ನತ ನಾಯಕರು ಕೂಡ ಈ ತಪ್ಪು ಮಾಡಿದ್ದಾರೆ’ ಎಂದು ನಡ್ಡಾ ದೂರಿದ್ದಾರೆ. ‌

ರಾಹುಲ್ ಅವರು ಭಾರತ ವಿರೋಧಿ, ಪಾಕಿಸ್ತಾನ ಪರ ವ್ಯಕ್ತಿಗಳನ್ನು ಅಪ್ಪಿಕೊಳ್ಳುತ್ತಾರೆ; ಭಯೋತ್ಪಾದಕರ ಜೊತೆ ನಿಲ್ಲುತ್ತಾರೆ; ದೇಶವಿರೋಧಿ ಶಕ್ತಿಗಳಿಂದ ಬೆಂಬಲ ಕೋರುತ್ತಾರೆ; ಸಮಾಜ ಒಡೆಯಲು ಜಾತಿ ಮತ್ತು ಮೀಸಲಾತಿಯ ಬಗ್ಗೆ ಮಾತನಾಡುತ್ತಾರೆ... ರಾಹುಲ್ ಅವರ ಬಗ್ಗೆ ಹೆಮ್ಮೆಪಡುವಂಥದ್ದು ಏನಿದೆ ಎಂದು ನಡ್ಡಾ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT