ಹೈದರಾಬಾದ್: ಆಂಧ್ರ ಪ್ರದೇಶದ ತಿರುಪತಿಯಲ್ಲಿನ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ರೋಗಿಯೊಬ್ಬರು, ಕಿರಿಯ ವೈದ್ಯೆಯ ಮೇಲೆ ಹಲ್ಲೆ ನಡೆಸಿದ್ದಾರೆ.
ಭಾನುವಾರ ಈ ಘಟನೆ ನಡೆದಿದೆ. ವೈದ್ಯೆಯ ಜುಟ್ಟು ಹಿಡಿದು ಜೋರಾಗಿ ಎಳೆದು ಆಸ್ಪತ್ರೆಯ ಮಂಚದ ಕಬ್ಬಿಣದ ಸರಳಿಗೆ ಹೊಡೆಸಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲೂ ದಾಖಲಾಗಿದೆ.
ಸ್ಥಳದಲ್ಲಿದ್ದ ಇತರೆ ಕರ್ತವ್ಯನಿರತ ವೈದ್ಯರು ರಕ್ಷಿಸಿದ್ದಾರೆ. ವಿಜಯನಗರಂ ಜಿಲ್ಲೆ ಬೊಬ್ಬಿಲಿಯ ಬಂಗಾರರಾಜು ಆರೋಪಿ. ಈತ ಕುಟುಂಬದೊಂದಿಗೆ ಯಾತ್ರೆಗೆ ಬಂದಿದ್ದ.
ಆರೋಪಿಯು ಅಪಸ್ಮಾರದಿಂದ ಬಳಲುತ್ತಿದ್ದ. ಸಮಸ್ಯೆ ಉಂಟಾದ್ದರಿಂದ ಅಶ್ವಿನಿ ಆಸ್ಪತ್ರೆಗೆ ಸೇರಿಸಿ, ಬಳಿಕ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸೇರಿಸಲಾಗಿತ್ತು. ಚಿಕಿತ್ಸೆ ನೀಡುವಾಗಲೇ ಆತ ಹಲ್ಲೆ ನಡೆಸಿದ್ದು, ವೈದ್ಯೆಗೆ ಅಲ್ಪಪ್ರಮಾಣದಲ್ಲಿ ಪೆಟ್ಟಾಗಿದೆ.
ವೈದ್ಯರು ಮತ್ತು ಇತರೆ ಸಿಬ್ಬಂದಿ ಪ್ರತಿಭಟಿಸಿದ್ದು, ಸುರಕ್ಷೆ ಕುರಿತಂತೆ ಆಡಳಿತ ಮಂಡಳಿಯಿಂದ ರಕ್ಷಣೆ ದೊರೆತ ಬಳಿಕ ಸೇವೆ ಮುಂದುವರಿಸಿದ್ದಾರೆ. ಪ್ರಕರಣ ದಾಖಲಾಗಿದೆ.